ಪೊಲೀಸ್ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಸೋರಿಕೆ : ಬಿಜೆಪಿ ಮುಖಂಡ, ಮಾಜಿ ಡಿಐಜಿಗೆ ಲುಕ್‌ ಔಟ್ ನೋಟಿಸ್

Prasthutha News

ಗುವಾಹಟಿ: ಪೊಲೀಸ್ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆಗೆ ಸಂಬಂಧಿಸಿ ಆಡಳಿತಾರೂಢ ಬಿಜೆಪಿಯ ನಾಯಕ ದಿಬಾನ್ ದೇಕಾ ಮತ್ತು ಮಾಜಿ ಡಿಐಜಿ ಪಿಕೆ ದತ್ತಾ ವಿರುದ್ಧ ಅಸ್ಸಾಂ ಪೊಲೀಸರು ಲುಕ್ ಔಟ್ ನೋಟಿಸ್ ಕಳುಹಿಸಿದ್ದಾರೆ.

ಸೆಪ್ಟೆಂಬರ್ 20 ರಂದು ಪರೀಕ್ಷೆ ಪ್ರಾರಂಭವಾದ ಕೆಲವೇ ನಿಮಿಷಗಳಲ್ಲಿ, ಸಾಮೂಹಿಕ ಮಾಧ್ಯಮಗಳಲ್ಲಿ ಪ್ರಶ್ನೆಪತ್ರಿಕೆ ಸೋರಿಕೆಯಾಗಿರುವುದು ವೈರಲ್ ಆಗಿತ್ತು. ಈ ಪ್ರಕರಣದಲ್ಲಿ ಈವರೆಗೆ ಸುಮಾರು 20 ಜನರನ್ನು ಬಂಧಿಸಲಾಗಿದೆ.  ಆದರೆ ಮುಖ್ಯ ಅಪರಾಧಿಗಳು ಎಂದು ಹೇಳಲಾಗುವ ಬಿಜೆಪಿ ಮುಖಂಡ ದಿಬಾನ್ ದೆಕಾ ಮತ್ತು ಮಾಜಿ ಡೆಪ್ಯೂಟಿ ಇನ್ಸ್ಪೆಕ್ಟರ್ ಜನರಲ್ ಪಿಕೆ ದತ್ತಾ ಅವರನ್ನು ಪತ್ತೆಹಚ್ಚಲು ಪೊಲೀಸರಿಗೆ ಸಾಧ್ಯವಾಗಿಲ್ಲ.

ಅಸ್ಸಾಂ ಡಿಜಿಪಿ ಭಾಸ್ಕರ್ ಜ್ಯೋತಿ ಮಹಂತಾ ಇವರಿಬ್ಬರ ಕುರಿತು ಮಾಹಿತಿ ನೀಡುವವರಿಗೆ ಒಂದು ಲಕ್ಷ ರೂ ಬಹುಮಾನ ಘೋಷಿಸಿದ್ದಾರೆ. ಗುವಾಹಟಿಯ ಹೆಂಗ್ರಾಬರಿ ಪ್ರದೇಶದ ಅವರ ನಿವಾಸ ಮತ್ತು ಬೆತ್ಕುಚ್ಚಿ ಪ್ರದೇಶದ ಭಾರ್ಗಾಬ್ ಗ್ರ್ಯಾಂಡ್ ಹೋಟೆಲ್ ಸೇರಿದಂತೆ ಪಿಕೆ ದತ್ತಾ ಅವರ ವಿವಿಧ ಸ್ಥಳಗಳಲ್ಲಿ ಪೊಲೀಸರು ದಾಳಿ ನಡೆಸಿದ್ದಾರೆ. ತಪಾಸಣೆ ನಡೆಸಿದಾಗ ಪರೀಕ್ಷಾ ಅಭ್ಯರ್ಥಿಗಳ ರಶೀದಿಗಳು, ತರಬೇತಿ ಅವಧಿಯ ಇಂಗ್ಲೀಷ್ ಮತ್ತು ಅಸ್ಸಾಮಿ ಭಾಷೆಯಲ್ಲಿರುವ ಜಾಹೀರಾತುಗಳು, 445 ಪ್ರವೇಶ ಅರ್ಜಿಗಳನ್ನು ವಶಪಡಿಸಲಾಗಿದೆ.

 ಪೊಲೀಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅಸ್ಸಾಂ (ಸಿಐಡಿ) ಐಜಿಪಿ ಸುರೇಂದ್ರ ಕುಮಾರ್ ಹೋಟೆಲ್ ನಿಂದ 5.45 ಲಕ್ಷ ರೂ ವಶಕ್ಕೆ ಪಡೆಯಲಾಗಿದೆ ಎಂದು ಹೇಳಿದರು.


Prasthutha News