ನವದೆಹಲಿ: ಐಟಿ ಕಾಯ್ದೆ ಸೆಕ್ಷನ್ 66 ಎ ಅಡಿಯ ನಿಬಂಧನೆಯನ್ನು ರದ್ದುಗೊಳಿಸಿದ ನಂತರವೂ ದೇಶದ ವಿವಿಧ ಭಾಗಗಳಲ್ಲಿ 1000ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿರುವುದು ಆಘಾತಕಾರಿ ಎಂದು ಸುಪ್ರೀಂಕೋರ್ಟ್ ಕಳವಳ ವ್ಯಕ್ತಪಡಿಸಿದೆ.
ಇದೊಂದು ವಿವಾದಾತ್ಮಕ ಕಾನೂನು ಆಗಿದ್ದು, “ಆಕ್ರಮಣಕಾರಿ” ವಿಷಯವನ್ನು ಆನ್ಲೈನ್ನಲ್ಲಿ ಪೋಸ್ಟ್ ಮಾಡಿದ್ದಕ್ಕಾಗಿ ಜನರನ್ನು ಬಂಧಿಸಲು ಪೊಲೀಸರಿಗೆ ಅವಕಾಶ ಮಾಡಿಕೊಡುತ್ತದೆ.
ಏಳು ವರ್ಷಗಳ ಹಿಂದೆ ಈ ಸೆಕ್ಷನ್ ಅನ್ನು ರದ್ದುಗೊಳಿಸಿದರೂ ಪೊಲೀಸರು ಅದೇ ಕಾಯ್ದೆಯಡಿ ಪ್ರಕರಣ ದಾಖಲಿಸಿ ಜನರನ್ನು ಜೈಲಿಗೆ ತಳ್ಳುತ್ತಿರುವುದಕ್ಕೆ ಸುಪ್ರೀಂಕೋರ್ಟ್ ಗರಂ ಆಗಿದೆ. ಐಟಿ ಕಾಯ್ದೆಯ ಸೆಕ್ಷನ್ 66 ಎ ಅನ್ನು ಮಾರ್ಚ್ 24, 2015 ರಂದು ಸುಪ್ರೀಂಕೋರ್ಟ್ ರದ್ದುಗೊಳಿಸಿದೆ. ಈ ಕುರಿತು ನೀಡಿದ ಮಹತ್ವದ ತೀರ್ಪಿನಲ್ಲಿ, ನ್ಯಾಯಾಲಯವು ಈಗ ಕಾರ್ಯನಿರ್ವಹಿಸದ ಕಾನೂನನ್ನು “ಅಸ್ಪಷ್ಟ”, “ಅಸಂವಿಧಾನಿಕ” ಮತ್ತು “ವಾಕ್ ಸ್ವಾತಂತ್ರ್ಯದ ಉಲ್ಲಂಘನೆ” ಎಂದು ಬಣ್ಣಿಸಿತ್ತು.
ಇದು ಆಘಾತಕಾರಿ, ನಾವು ಈ ಸಂಬಂಧ ನೋಟಿಸ್ ನೀಡುತ್ತೇವೆ” ಎಂದು ನ್ಯಾಯಮೂರ್ತಿಗಳಾದ ಆರ್ ನಾರಿಮನ್, ಕೆಎಂ ಜೋಸೆಫ್ ಮತ್ತು ಬಿಆರ್ ಗವಾಯಿ ಅವರನ್ನು ಒಳಗೊಂಡ ಮೂವರ ನ್ಯಾಯಪೀಠ ಹೇಳಿದೆ.ನ್ಯಾಯಮೂರ್ತಿ ನಾರಿಮನ್ ಅವರು ಈಗ ನಡೆಯುತ್ತಿರುವುದು ಆಶ್ಚರ್ಯಕ, ಭಯಾನಕವಾಗಿದೆ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಲು ಕೇಂದ್ರ ಸರ್ಕಾರಕ್ಕೆ ಎರಡು ವಾರಗಳ ಕಾಲಾವಕಾಶ ನೀಡಿದೆ. ಸೆಕ್ಷನ್ 66ಎ ಅನ್ವಯ ರದ್ದುಗೊಳಿಸಲಾದ ಸೆಕ್ಷನ್ ಅಡಿಯಲ್ಲಿ ಎಫ್ಐಆರ್ ದಾಖಲಾಗುತ್ತಿರುವುದನ್ನು ಪ್ರಶ್ನಿಸಿ, ಪೀಪಲ್ಸ್ ಯೂನಿಯನ್ ಫಾರ್ ಸಿವಿಲ್ ಲಿಬರ್ಟೀಸ್ ದಾಖಲಿಸಿದ್ದ ಅರ್ಜಿಯ ವಿಚಾರಣೆಯನ್ನು ಜಸ್ಟಿಸ್ ಆರ್ ಎಫ್ ನಾರಿಮನ್ ಅವರ ನೇತೃತ್ವದ ಪೀಠ ವಿಚಾರಣೆ ನಡೆಸಿತು.
ಐಟಿ ಕಾಯಿದೆಯ ರದ್ದುಗೊಳಿಸಲಾದ ಸೆಕ್ಷನ್ 66ಎ ಅಡಿಯಲ್ಲಿ ದಾಖಲಾಗಿರುವ ಎಲ್ಲಾ ಎಫ್ಐಆರ್ ಕುರಿತಾದ ಅಂಕಿಅಂಶ ಸಂಗ್ರಹಿಸುವಂತೆ ಕೇಂದ್ರ ಸರಕಾರಕ್ಕೆ ಸೂಚಿಸಬೇಕೆಂದು ಪಿಯುಸಿಎಲ್ ತನ್ನ ಅಪೀಲಿನಲ್ಲಿ ಕೋರಿತ್ತು.