►ಅಶ್ಲೀಲ ಸಿಡಿ ಪ್ರಕರಣದ ಬಳಿಕ ರಾಜೀನಾಮೆ ನೀಡಿದ್ದ ಬಿಜೆಪಿಯ ಮಾಜಿ ಸಚಿವ
ಅಪರೇಶನ್ ಕಮಲದ ಮೂಲಕ ಹಿಂದಿನ ಮೈತ್ರಿ ಸರಕಾರವನ್ನು ಉರುಳಿಸಿ ಬಿಜೆಪಿ ಸೇರಿದ್ದ ರಮೇಶ್ ಜಾರಕಿಹೊಳಿ ಇದೀಗ ಸ್ವಪಕ್ಷೀಯರ ವಿರುದ್ಧವೇ ಕಿಡಿ ಕಾರಿದ್ದಾರೆ. ಬಿಜೆಪಿಯ ಮೂವರು ನನಗೆ ದ್ರೋಹ ಬಗೆದಿದ್ದಾರೆ. ಎಲ್ಲರ ಷಡ್ಯಂತ್ರ ಬಯಲು ಮಾಡೋ ಕಾಲ ಬಂದೇ ಬರುತ್ತದೆ ಎಂದು ದೆಹಲಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಳಗೆ ಬಿದ್ದ ನನ್ನ ಮೇಲೆ ಆಳಿಗೊಂದರಂತೆ ಕಲ್ಲು ಹಾಕುತ್ತಿದ್ದಾರೆ. ನನ್ನ ಜೊತೆಯಲ್ಲಿದ್ದುಕೊಂಡೇ ನನ್ನ ವಿರುದ್ಧ ದ್ವೇಷ ಸಾಧಿಸುತ್ತಿದ್ದಾರೆ ಎಂದು ತನ್ನ ಪಕ್ಷದ ಮೂವರು ನಾಯಕರ ಕುರಿತಂತೆ ಹೇಳಿದ್ದಾರೆ. ಆದರೆ ಆ ಮೂವರು ಯಾರು ಎಂದು ಮಾತ್ರ ಬಹಿರಂಗಪಡಿಸಿಲ್ಲ.
ಹೆಚ್ ಡಿ ಕುಮಾರಸ್ವಾಮಿ ನೇತೃತ್ವದ ಮೈತ್ರಿ ಸರಕಾರವನ್ನು ಬಿಜೆಪಿ ಅಪರೇಶನ್ ಕಮಲದ ಮೂಲಕ ಉರುಳಿಸಿತ್ತು. ಆಗ ರಮೇಶ್ ಜಾರಕಿಹೊಳಿ ಅತೃಪ್ತರೊಂದಿಗೆ ಗುರುತಿಸಿಕೊಂಡಿದ್ದರು. ಆ ಬಳಿಕ ಬಿಜೆಪಿಗೆ ಸೇರಿ ಸಚಿವರಾಗಿದ್ದರು. ನಂತರ ಯುವತಿಯೊಂದಿಗೆ ಅಶ್ಲೀಲ ಭಂಗಿಯಲ್ಲಿದ್ದ ಸಿಡಿ ಬಹಿರಂಗವಾದ ಬಳಿಕ ಜಾರಕಿಹೊಳಿ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಇದೀಗ ಮರಳಿ ಸರಕಾರದ ಭಾಗವಾಗಲು ಹರಸಾಹಸಪಡುತ್ತಿರುವ ರಮೇಶ್ ಜಾರಕಿಹೊಳಿ ದೆಹಲಿಯಲ್ಲಿ ಬೀಡು ಬಿಟ್ಟಿದ್ದಾರೆ. ಆದರೆ ಅವರ ಪ್ರಯತ್ನಗಳಿಗೆ ಸ್ವಪಕ್ಷೀಯರೇ ತಡೆಯಾಗಿದ್ದಾರೆ ಎನ್ನಲಾಗಿದೆ.