ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣ | ನಾಲ್ವರು ವಿದ್ಯಾರ್ಥಿಗಳ ಬಂಧನ

Prasthutha|

ಇಸ್ರೇಲ್ ರಾಯಭಾರ ಕಚೇರಿ ಬಳಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಪೊಲೀಸ್ ವಿಶೇಷ ಸೆಲ್ ಲಡಾಖ್‌ನ ನಾಲ್ವರು ವಿದ್ಯಾರ್ಥಿಗಳನ್ನು ಬಂಧಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಅವರನ್ನು ಕಾರ್ಗಿಲ್‌ನಿಂದ ಬಂಧಿಸಿ ರಿಮಾಂಡ್‌ನಲ್ಲಿ ದೆಹಲಿಗೆ ಕರೆದೊಯ್ಯಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ನಾಲ್ವರು ವಿದ್ಯಾರ್ಥಿಗಳನ್ನು ನಝೀರ್ ಹುಸೇನ್ (26), ಜುಲ್ಫಿಕರ್ ಅಲಿ ವಝೀರ್ (25), ಅಯಾಝ್ ಹುಸೇನ್ (28) ಮತ್ತು ಮುಝಮ್ಮಿಲ್ ಹುಸೇನ್ (25) ಎಂದು ಗುರುತಿಸಲಾಗಿದೆ.

- Advertisement -


ಇವರೆಲ್ಲರೂ ಲಡಾಖ್‌ನ ಕಾರ್ಗಿಲ್ ಜಿಲ್ಲೆಯ ಥಾಂಗ್ ಗ್ರಾಮದ ನಿವಾಸಿಗಳು. ಜನವರಿ 29 ರಂದು ದೆಹಲಿಯ ಹೃದಯ ಭಾಗದಲ್ಲಿರುವ ಇಸ್ರೇಲ್ ರಾಯಭಾರ ಕಚೇರಿಯ ಹೊರಗೆ ಸಣ್ಣ ಪ್ರಮಾಣದ ಐಇಡಿ ಸ್ಫೋಟ ಸಂಭವಿಸಿತ್ತು. ಯಾವುದೇ ಪ್ರಾಣಹಾನಿ ಉಂಟಾಗಿರಲಿಲ್ಲ.
ದೆಹಲಿ ಪೊಲೀಸರ ವಿಶೇಷ ಸೆಲ್, ಕೇಂದ್ರ ಗುಪ್ತಚರ ಸಂಸ್ಥೆ ಮತ್ತು ಕಾರ್ಗಿಲ್ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ, ರಾಷ್ಟ್ರ ರಾಜಧಾನಿಯಲ್ಲಿ ಭಯೋತ್ಪಾದಕ ಚಟುವಟಿಕೆ ಸಂಚು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಗಿಲ್‌ನ ನಾಲ್ವರನ್ನು ವಶಕ್ಕೆ ಪಡೆದಿದೆ ಎಂದು ದೆಹಲಿ ಪೊಲೀಸ್ ಸಾರ್ವಜನಿಕ ಸಂಪರ್ಕಾಧಿಕಾರಿ ಚಿನ್ಮೊಯ್ ಬಿಸ್ವಾಲ್ ತಿಳಿಸಿದ್ದಾರೆ.


“ಈ ನಾಲ್ವರೂ ದೆಹಲಿ ವಿಶ್ವವಿದ್ಯಾಲಯದ ಪ್ರದೇಶದ ಬಾಡಿಗೆ ಮನೆಯಲ್ಲಿ ಉಳಿದುಕೊಂಡಿದ್ದರು. ಸ್ಫೋಟದ ದಿನ, ಅವರ ಮೊಬೈಲ್ ಫೋನ್ ಸ್ವಿಚ್ ಆಫ್ ಆಗಿತ್ತು. ಕೆಲವು ದಿನಗಳ ನಂತರ, ಅವರು ಇದ್ದಕ್ಕಿದ್ದಂತೆ ಮನೆ ಖಾಲಿ ಮಾಡಿ ಲಡಾಖ್ ಗೆ ತೆರಳಿದ್ದರು. ಅವರು ದೆಹಲಿಯಲ್ಲಿ ಉಳಿದುಕೊಂಡಿರುವ ಇತರ ಸ್ಥಳಗಳನ್ನು ನಾವು ಪತ್ತೆ ಹಚ್ಚುತ್ತಿದ್ದೇವೆ’ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.



Join Whatsapp