ಮುಂಬೈ : ಮಹಾರಾಷ್ಟ್ರ ವಿಧಾನಸೌಧದಲ್ಲಿ ಬಾಂಬ್ ಇರಿಸುವುದಾಗಿ ಇ-ಮೇಲ್ ಮಾಡಿದ ವ್ಯಕ್ತಿಯೊಬ್ಬನನ್ನು ಬಂಧಿಸಲಾಗಿದೆ. ಮಹಾರಾಷ್ಟ್ರ ಸರಕಾರಕ್ಕೆ ಇ-ಮೇಲ್ ಮಾಡಿ ಈ ಹುಸಿ ಬಾಂಬ್ ಬೆದರಿಕೆಯನ್ನು ಒಡ್ಡಲಾಗಿದೆ ಎಂದು ವರದಿಗಳು ತಿಳಿಸಿವೆ. ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಮಕ್ಕಳು ಪಡುತ್ತಿರುವ ಕಷ್ಟಗಳ ಬಗ್ಗೆ ಆಕ್ರೋಶಿತನಾಗಿ ಈ ಬೆದರಿಕೆಯೊಡ್ಡಿದ್ದಾಗಿ ಬಂಧಿತ ಹೇಳಿದ್ದಾಗಿ ವರದಿಯಾಗಿದೆ.
ಬಂಧಿತನನ್ನು ಶೈಲೇಶ್ ಶಿಂಧೆ ಎಂದು ಗುರುತಿಸಲಾಗಿದೆ. ಪುಣೆಯಿಂದ ಈತನನ್ನು ಬಂಧಿಸಿ ಕೋರ್ಟ್ ಗೆ ಹಾಜರು ಪಡಿಸಲಾಗಿದೆ. ಶುಕ್ರವಾರದ ವರೆಗೆ ಆತನನ್ನು ಪೊಲೀಸ್ ವಶಕ್ಕೆ ನೀಡಲಾಗಿದೆ. ಸೋಮವಾರ ಸಂಜೆ ಬಂಧಿತನು ಇ-ಮೇಲ್ ಮಾಡಿ ಬಾಂಬ್ ಬೆದರಿಕೆ ಹಾಕಿದ್ದ. ಇದು ಭದ್ರತಾ ಸಿಬ್ಬಂದಿಯನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿತ್ತು.
ಶಿಕ್ಷಣ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಮಕ್ಕಳ ಶಿಕ್ಷಣದ ಅವಕಾಶ ಕುಸಿಯುತ್ತಿದೆ. ಹೀಗಾಗಿ ತಾನು ದಕ್ಷಿಣ ಮುಂಬೈಯಲ್ಲಿರುವ ರಾಜ್ಯ ವಿಧಾನಸೌಧದಲ್ಲಿ ಬಾಂಬ್ ಇರಿಸುತ್ತಿರುವುದಾಗಿ ಬಂಧಿತ ಇ-ಮೇಲ್ ನಲ್ಲಿ ತಿಳಿಸಿದ್ದಾಗಿ ಪೊಲೀಸರು ತಿಳಿಸಿದ್ದಾರೆ.
ಬಾಂಬ್ ನಿಷ್ಕ್ರಿಯ ದಳ ತಕ್ಷಣವೇ ಜಾಗೃತಗೊಂಡು ವಿಧಾನಸೌಧದಲ್ಲಿ ಹುಡುಕಾಟ ನಡೆಸಿದಾಗ ಬಾಂಬ್ ಪತ್ತೆಯಾಗಿಲ್ಲ.
ತನ್ನ ಮಗುವಿಗೆ ಶಾಲೆಯಲ್ಲಿ ಪ್ರವೇಶ ಸಿಗದಿದ್ದುದಕ್ಕೆ ಶಿಂದೆ ಚಿಂತಿತನಾಗಿದ್ದ. ಈ ಬಗ್ಗೆ ಮುಖ್ಯಮಂತ್ರಿಯವರ ಕಚೇರಿಗೆ ಆತ ಇ-ಮೇಲ್ ಮೂಲಕ ದೂರನ್ನೂ ಸಲ್ಲಿಸಿದ್ದ. ಆದರೆ, ತನಗೆ ಯಾವುದೇ ಪ್ರತಿಕ್ರಿಯೆ ಬರದಿದ್ದಾಗ, ಹತಾಶನಾಗಿ ಗೃಹ ಸಚಿವಾಲಯಕ್ಕೆ ಬಾಂಬ್ ಬೆದರಿಕೆಯ ಇ-ಮೇಲ್ ಮಾಡಿರುವುದಾಗಿ ತಿಳಿದುಬಂದಿದೆ. ಆದಾಗ್ಯೂ, ಸರಕಾರದ ಅಧಿಕೃತ ಹೇಳಿಕೆಯಲ್ಲಿ ಈ ವಿಷಯದ ಬಗ್ಗೆ ಪ್ರಸ್ತಾಪವಾಗಿಲ್ಲ.