ಮಿಝೋರಾಂ : ದೇಶದಲ್ಲಿ ಜನಸಂಖ್ಯಾ ಸ್ಫೋಟ ನಿಯಂತ್ರಿಸಲು ಎರಡು ಮಕ್ಕಳ ನೀತಿ ಚಾಲ್ತಿಯಲ್ಲಿದೆ. ಆದರೆ, ಇಲ್ಲೊಬ್ಬರು ಸಚಿವರು ತಮ್ಮ ಕ್ಷೇತ್ರದಲ್ಲಿ ಜನ ಸಂಖ್ಯೆ ಹೆಚ್ಚಿಸಬೇಕೆಂದು, ಅತಿ ಹೆಚ್ಚು ಮಕ್ಕಳಿರುವ ಯಾವುದೇ ಕುಟುಂಬಗಳಿಗೆ 1 ಲಕ್ಷ ರೂ. ಬಹುಮಾನ ಕೊಡುವುದಾಗಿ ಘೋಷಿಸಿದ್ದಾರೆ.
ಹೌದು, ಮಿಝೋರಾಂನ ಕ್ರೀಡಾ ಸಚಿವ ರಾಬರ್ಟ್ ರೊಮಾವಿಯಾ ರೋಯ್ಟೆ ತಂದೆಯ ದಿನಾಚರಣೆ ದಿನ ಈ ವಿಶೇಷ ಘೋಷಣೆ ಮಾಡಿದ್ದಾರೆ. ಐಝ್ವಾಲ್ ಪೂರ್ವ – 2ನೇ ಕ್ಷೇತ್ರ ಪ್ರತಿನಿಧಿಸುವ ಸಚಿವರು ತಮ್ಮ ಕ್ಷೇತ್ರದ ನಿವಾಸಿಗಳಿಗೆ ಈ ಕೊಡುಗೆ ನೀಡಿದ್ದಾರೆ. ದೊಡ್ಡ ಕುಟುಂಬವನ್ನು ಹೊಂದುವುದನ್ನು ಬೆಂಬಲಿಸುವ ಸಲುವಾಗಿ ಅವರು ಈ ಕೊಡುಗೆ ಘೋಷಿಸಿದ್ದಾರೆ.
ಆದರೆ, ಕನಿಷ್ಠ ಅಥವಾ ಗರಿಷ್ಠ ಎಷ್ಟು ಮಕ್ಕಳಿರಬೇಕು ಎಂಬುದನ್ನು ಅವರು ಹೇಳಿಲ್ಲ. ಒಟ್ಟಿನಲ್ಲಿ ಅತಿಹೆಚ್ಚು ಮಕ್ಕಳು ಹೊಂದಿರುವ ಕುಟುಂಬಕ್ಕೆ ನಗದು ಕೊಡುವುದಾಗಿ ಹೇಳಿದ್ದಾರೆ.
ಮಿಝೋರಾಂನ ಜನಸಂಖ್ಯಾ ಸಾಂದ್ರತೆ ಚದರ ಕಿ.ಮೀ.ಗೆ 52 ಮಂದಿಯಿದ್ದಾರೆ. ರಾಷ್ಟ್ರೀಯ ಸರಾಸರಿ ಇದು ೩೮೨ ಇದೆ. ಮಿಝೋರಾಂ ಜನಸಂಖ್ಯೆ ಇಳಿಮುಖವಾಗುತ್ತಿರುವ ಬಗ್ಗೆ ಹಲವು ವರ್ಷಗಳಿಂದ ಕಳವಳವಿದೆ ಎಂದು ಅವರು ಹೇಳಿದ್ದಾರೆ.
ಬಹುಮಾನದ ಹಣವನ್ನು ತನ್ನ ಮಗನ ಮಾಲಕತ್ವದ ಈಶಾನ್ಯ ಕನ್ಸಲ್ಟನ್ಸಿ ಸರ್ವೀಸಸ್ ಸಂಸ್ಥೆಯಿಂದ ಕೊಡಲಾಗುವುದು ಎಂದು ಅವರು ತಿಳಿಸಿದ್ದಾರೆ. 2011ರ ಜನಸಂಖ್ಯೆ ಸಮೀಕ್ಷೆ ಪ್ರಕಾರ, ಮಿಝೋರಾಂನಲ್ಲಿ 10.91 ಲಕ್ಷ ಜನಸಂಖ್ಯೆಯಿದೆ. ಇದು ದೇಶದಲ್ಲೇ ಅತೀ ಕಡಿಮೆ ಜನಸಂಖ್ಯೆ ಇರುವ ಎರಡನೇ ರಾಜ್ಯವಾಗಿದೆ.