‘Thank you PM Modi’ ಬ್ಯಾನರ್ ಹಾಕಲು ಕೆವಿ ಶಾಲೆಗಳಿಗೆ ಸೂಚನೆ: ಪೋಷಕರ ಆಕ್ಷೇಪ

Prasthutha|

ಸಿಬಿಎಸ್ಇ ಪರೀಕ್ಷೆ ರದ್ದುಗೊಳಿಸಿದ್ದಕ್ಕಾಗಿ ‘ಧನ್ಯವಾದಗಳು ಮೋದಿ ಸರ್’ ಎಂದು ಟ್ವೀಟ್ ಮಾಡಲು ವಿದ್ಯಾರ್ಥಿಗಳಿಗೆ ಈ ಹಿಂದೆ ಸೂಚಿಸಿದ್ದ ಬೆಂಗಳೂರು ಪ್ರಾದೇಶಿಕ ಕೇಂದ್ರೀಯ ವಿದ್ಯಾಲಯ ಸಂಘಟನ್ (ಕೆವಿಎಸ್) ಕಚೇರಿ, ಈಗ ಎಲ್ಲರಿಗೂ ಉಚಿತ ಲಸಿಕೆ ನೀಡುತ್ತಿರುವುದಕ್ಕಾಗಿ ‘Thank you PM Modi’ ಎಂಬ ಬ್ಯಾನರ್ ಗಳು ಮತ್ತು ಹೋರ್ಡಿಂಗ್ ಗಳನ್ನು ಶಾಲೆಯ ಗೇಟ್ ನಲ್ಲಿ ಎದ್ದು ಕಾಣುವ ರೀತಿ ಹಾಕುವಂತೆ ಸೂಚಿಸಿದೆ.

- Advertisement -


ಎಲ್ಲಾ 51 ಶಾಲೆಗಳ ಪ್ರಾಂಶುಪಾಲರಿಗೆ ಪ್ರಾದೇಶಿಕ ಕಚೇರಿ ಈ ಸಂಬಂಧ ಇಮೇಲ್ ಕಳುಹಿಸಿದೆ. ಶಿಕ್ಷಣ ಸಚಿವಾಲಯದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ವಿವಿಧ ವಿಭಾಗಗಳಿಗೆ ಕಳುಹಿಸಿದ ಇಮೇಲ್ ನಲ್ಲಿ, ‘Thank you PM Modi’ ಎಂದು ಹಾಕಿರುವ ಬ್ಯಾನರ್ ಗಳ ಸ್ಕ್ರೀನ್ ಶಾಟ್ ಗಳನ್ನು ಕಳುಹಿಸುವಂತೆ ಸೂಚಿಸಲಾಗಿದೆ.
“ಕಚೇರಿ ಆವರಣದ ಗೇಟ್ ಗಳು ಮತ್ತು ಇತರ ಸೂಕ್ತ ಸ್ಥಳಗಳಲ್ಲಿ ಹಾಗೂ ಪಿಎಸ್ ಯುಗಳು ಮತ್ತು ಇತರ ಇಲಾಖೆಗಳು / ಸಂಸ್ಥೆಗಳ ಮುಂಭಾಗ ಬ್ಯಾನರ್ ಗಳು, ಹೋರ್ಡಿಂಗ್ ಗಳನ್ನು ಕಾಣುವ ರೀತಿ ಪ್ರದರ್ಶಿಸುವಂತೆ ನಿರ್ದೇಶನಗಳನ್ನು ನೀಡಲು ಈ ಮೂಲಕ ವಿನಂತಿಸಲಾಗಿದೆ’ ಎಂದು ಈಮೇಲ್ ನಲ್ಲಿ ತಿಳಿಸಲಾಗಿದೆ.


ಬ್ಯಾನರ್ ಅನ್ನು ಪ್ರಾದೇಶಿಕ ಭಾಷೆಯಲ್ಲಿ ಅಥವಾ ಹಿಂದಿಯಲ್ಲಿ ಹಾಕುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಬ್ಯಾನರ್ ನಲ್ಲಿ ಜೂನ್ 21 ರಿಂದ ಸರ್ಕಾರಿ ಕೇಂದ್ರಗಳಲ್ಲಿ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆಗಳು ಲಭ್ಯವಿವೆ ಎಂದೂ ಬರೆಯುವಂತೆ ಹೇಳಲಾಗಿದೆ.
ಕೇಂದ್ರೀಯ ವಿದ್ಯಾಲಯ ಶಾಲೆಗಳ ಈ ಕ್ರಮಕ್ಕೆ ಕೆಲವು ಪೋಷಕರು ಮತ್ತು ಸಿಬ್ಬಂದಿಗಳು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಬೆಂಗಳೂರಿನ ಕೆವಿ ಶಾಲಾ ವಿದ್ಯಾರ್ಥಿಯ ಪೋಷಕರೊಬ್ಬರು, “ಪ್ರಧಾನ ಮಂತ್ರಿ ಅವರ ಎಲ್ಲಾ ಕಾರ್ಯಕ್ರಮಗಳನ್ನು ಪ್ರಶಂಸಿಸಲು ಶಾಲಾ ಕ್ಯಾಂಪಸ್ ಗಳನ್ನು ಬಳಸುತ್ತಿರುವುದು ವಿಷಾದದ ಸಂಗತಿ. ಪ್ರಧಾನಮಂತ್ರಿಗೆ ಉಚಿತ ಪ್ರಚಾರ ನೀಡುವಂತೆ ಶಾಲೆಗಳನ್ನು ಒತ್ತಾಯಿಸಬಾರದು. ಶಾಲೆಗಳು ಕಲಿಕೆಯ ತಾಣ. ಅಂತಹ ಹೋರ್ಡಿಂಗ ಗಳನ್ನು ಹಾಕಲು ವಿದ್ಯಾರ್ಥಿಗಳ ಶುಲ್ಕವನ್ನು ಏಕೆ ಬಳಸಬೇಕು? ಎಂದು ಪೋಷಕರೊಬ್ಬರು ಪ್ರಶ್ನಿಸಿದ್ದಾರೆ.
ಕೇಂದ್ರೀಯ ವಿದ್ಯಾಲಯದ ಪ್ರಾಂಶುಪಾಲರೊಬ್ಬರು, ಪ್ರಧಾನ ಮಂತ್ರಿಯ ಭಾವಚಿತ್ರ ಇರುವ ಪೋಸ್ಟರ್ ಹಾಕಲು ನಮಗೂ ಮನಸ್ಸಿಲ್ಲ. ಆದರೂ ಪೋಸ್ಟರ್ ಹಾಕಿದ ಬಗ್ಗೆ ವರದಿ ಕೇಳಿರುವುದರಿಂದ ಹಾಕದೆ ಬೇರೆ ದಾರಿಯಿಲ್ಲ. ಸರ್ಕಾರದ ಯೋಜನೆಗಳನ್ನು ವ್ಯಕ್ತಿಯ ಪ್ರಯತ್ನವಾಗಿ ತೋರಿಸುತ್ತಿರುವುದಕ್ಕೆ ನಮಗೂ ಬೇಸರವಿದೆ ಎಂದು ಹೇಳಿದ್ದಾರೆ.

- Advertisement -



Join Whatsapp