ಮುಸ್ಲಿಂ ವ್ಯಕ್ತಿಯ ಗಡ್ಡ ಕತ್ತರಿಸಿ ಹಲ್ಲೆ ಪ್ರಕರಣ | ಟ್ವೀಟ್ ಮಾಡಿದ್ದ ರಾಣಾ ಅಯ್ಯೂಬ್ ಗೆ ಬಾಂಬೆ ಹೈಕೋರ್ಟ್ ನಿರೀಕ್ಷಣಾ ಜಾಮೀನು

Prasthutha|

ಮುಂಬೈ: ಉತ್ತರ ಪ್ರದೇಶದ ಗಾಜಿಯಾಬಾದ್‌ನಲ್ಲಿ ಮುಸ್ಲಿಮ್‌ ವ್ಯಕ್ತಿಯ ಗಡ್ಡವನ್ನು ಕೆಲವು ದಾಳಿಕೋರರು ಕತ್ತರಿಸಿದ್ದಾರೆ ಎಂಬ ಟ್ವೀಟ್‌ಗೆ ಸಂಬಂಧಿಸಿದಂತೆ ಪತ್ರಕರ್ತೆ ರಾಣಾ ಆಯೂಬ್‌ ವಿರುದ್ಧ ಉತ್ತರ ಪ್ರದೇಶ ಪೊಲೀಸರು ದಾಖಲಿಸಿರುವ ಎಫ್‌ಐಆರ್‌ಗೆ ಸಂಬಂಧಿಸಿದಂತೆ ಬಾಂಬೆ ಹೈಕೋರ್ಟ್‌ ಆಯೂಬ್‌ಗೆ ನಾಲ್ಕು ವಾರಗಳ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

- Advertisement -

“ಒಂದೊಮ್ಮೆ ಅರ್ಜಿದಾರೆಯನ್ನು ಬಂಧಿಸಿದರೆ ರೂ. 25,000 ಬಾಂಡ್‌ ಹಾಗೂ ಒಬ್ಬರು ಅಥವಾ ಇಬ್ಬರ ಭದ್ರತೆ ಪಡೆದು ಅವರನ್ನು ಬಿಡುಗಡೆ ಮಾಡಬೇಕು. ಈ ಜಾಮೀನು ನಾಲ್ಕು ವಾರಗಳ ಕಾಲ ಇರಲಿದೆ “ಎಂದು ನ್ಯಾಯಮೂರ್ತಿ ಪಿ ಡಿ ನಾಯ್ಕ್‌ ಆದೇಶಿಸಿದ್ದಾರೆ.

ಎಫ್‌ಐಆರ್‌ನಲ್ಲಿ ಉಲ್ಲೇಖಿಸಿರುವ ವಿವಿಧ ಸೆಕ್ಷನ್‌ಗಳ ಅಡಿ ಎಲ್ಲಾ ಅಪರಾಧಗಳಿಗೂ ಗರಿಷ್ಠ ಮೂರು ವರ್ಷ ಜೈಲು ಶಿಕ್ಷೆ ವಿಧಿಸಬಹುದಾಗಿದೆ. ಪತ್ರಕರ್ತೆಯಾಗಿರುವುದರಿಂದ ಬಂಧನಕ್ಕೆ ಒಳಗಾಗಬಹುದು ಎಂದು ಆಯೂಬ್‌ ಆತಂಕ ಹೊಂದಿದ್ದಾರೆ. ಟ್ವಿಟರ್‌ನಲ್ಲಿ ಹಂಚಿಕೆ ಮಾಡಲಾದ ವಿಡಿಯೊ ನೈಜತೆ ತಿಳಿದ ತಕ್ಷಣ ಆಯೂಬ್‌ ತಮ್ಮ ಟ್ವೀಟ್‌ ಅಳಿಸಿಹಾಕಿದ್ದಾರೆ ಎಂದು ಹಿರಿಯ ವಕೀಲ ಮಿಹಿರ್‌ ದೇಸಾಯಿ ವಾದಿಸಿದರು.

- Advertisement -

ಗಾಜಿಯಾಬಾದ್‌ನಲ್ಲಿ ಮುಸ್ಲಿಮ್‌ ಸಮುದಾಯದ ವ್ಯಕ್ತಿಯ ಗಡ್ಡವನ್ನು ಕೆಲವು ದಾಳಿಕೋರರು ಕತ್ತರಿಸಿದ್ದಾರೆ ಎಂಬ ವಿಡಿಯೊದ ಸಾಚಾತನವನ್ನು ಪರಿಶೀಲಿಸದೇ ಅದನ್ನು ಅಪ್‌ಲೋಡ್‌ ಮಾಡಿ ಟ್ವೀಟ್‌ ಮಾಡಿದ್ದಕ್ಕೆ ಸಂಬಂಧಿಸಿದಂತೆ ಉತ್ತರ ಪ್ರದೇಶ ಪೊಲೀಸರು ಎಫ್‌ಐಆರ್‌ ದಾಖಲಿಸಿದ್ದಾರೆ. ಈ ಪ್ರಕರಣದಲ್ಲಿ ರಾಣಾ ಆಯೂಬ್‌ ಟ್ರಾನ್ಸಿಟ್‌ ನಿರೀಕ್ಷಣಾ ಜಾಮೀನು ಕೋರಿದ್ದರು.

ಸಾಮಾಜಿಕ ಮಾಧ್ಯಮ ಜಾಲತಾಣ ಟ್ವಿಟರ್, ಸುದ್ದಿತಾಣ ದಿ ವೈರ್‌ , ಪತ್ರಕರ್ತರಾದ ಸಬಾ ನಖ್ವಿ, ಆಲ್ಟ್‌ ನ್ಯೂಸ್‌ ಸಹ ಸಂಸ್ಥಾಪಕ ಮೊಹಮ್ಮದ್ ಜುಬೈರ್, ಕಾಂಗ್ರೆಸ್ ರಾಜಕಾರಣಿಗಳಾದ ಶಾಮಾ ಮೊಹಮ್ಮದ್, ಸಲ್ಮಾನ್ ನಿಜಾಮಿ ಮತ್ತು ಮಸ್ಕೂರ್ ಉಸ್ಮಾನಿ ವಿರುದ್ದವೂ ಎಫ್‌ಐಆರ್‌ ದಾಖಲಿಸಲಾಗಿದೆ.



Join Whatsapp