ಹೈದರಾಬಾದ್ : ಕಳ್ಳತನದ ಆರೋಪದಲ್ಲಿ ಬಂಧಿತಳಾದ ಮಹಿಳೆಯೊಬ್ಬಳು ಪೊಲೀಸ್ ದೌರ್ಜನ್ಯದಿಂದ ಲಾಕಪ್ ಡೆತ್ ಆಗಿರುವ ಬಗ್ಗೆ ಆಪಾದನೆ ಕೇಳಿಬಂದಿದೆ. ತೆಲಂಗಾಣದ ಯಾದಾದ್ರಿಯಲ್ಲಿನ ಅಡ್ಡಗುಡೂರ್ ಪೊಲೀಸರು ೪೫ ವರ್ಷದ ಏಸುಮ್ಮ ಮತ್ತು ಆಕೆಯ ಮಗನನ್ನು ಕಳ್ಳತನದ ಆರೋಪದಲ್ಲಿ ಬಂಧಿಸಿದ್ದರು. ಆದರೆ, ಪೊಲೀಸರು ಎಸಗಿದ ದೌರ್ಜನ್ಯದಿಂದಾಗಿ ಏಸುಮ್ಮ ಲಾಕಪ್ ನಲ್ಲಿ ಸಾವಿಗೀಡಾಗಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.
ಕಳ್ಳತನದ ಆರೋಪದ ಬಗ್ಗೆ ವಿಚಾರಣೆ ನಡೆಸಲು ಏಸುಮ್ಮಳನ್ನು ಶುಕ್ರವಾರ ಬಂಧಿಸಿ ಲಾಕಪ್ ನಲ್ಲಿರಿಸಿದ್ದರು. ಲಾಕಪ್ ನಲ್ಲಿ ಪೊಲೀಸರು ನೀಡಿದ ಕಿರುಕುಳದಿಂದಾಗಿ ಆಕೆ ಶನಿವಾರದಂದು ಮೃತಪಟ್ಟಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ. ಆದರೆ, ಪೊಲೀಸರು ಆರೋಪವನ್ನು ನಿರಾಕರಿಸಿದ್ದಾರೆ.
ಶನಿವಾರ ಏಸುಮ್ಮ ಮತ್ತು ಆಕೆಯ ಮಗನನ್ನು ಕಳ್ಳತನದ ಪ್ರಕರಣದಲ್ಲಿ ವಿಚಾರಣೆಗಾಗಿ ಅಡ್ಡಗುಡೂರ್ ಪೊಲೀಸ್ ಠಾಣೆಗೆ ಕರೆತರಲಾಯಿತು. ಆಕೆ ಠಾಣೆಯಲ್ಲಿ ಮೂರ್ಛೆ ಹೋದುದರಿಂದ ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಮತ್ತೊಂದು ಆಸ್ಪತ್ರೆಗೆ ಕಳುಹಿಸಲಾಯಿತು. ಅಲ್ಲಿ ವೈದ್ಯರು ಆಕೆ ಸತ್ತು ಹೋಗಿದ್ದಾಳೆಂದು ಘೋಷಿಸಿದರು ಎಂದು ಯಾದಾದ್ರಿ ಪೊಲೀಸರು ಹೇಳಿದ್ದಾರೆ.