– ಎನ್. ರವಿಕುಮಾರ್
ಕೊರೋನ ವಿರುದ್ಧ ನಡೆಯುತ್ತಿರುವ ಹೋರಾಟ ರಾಜಕೀಯ ಸ್ವರೂಪವನ್ನು ಪಡೆದುಕೊಂಡಿರುವುದು ನಿಚ್ಚಳವಾಗಿದೆ. ತಬ್ಲೀಗ್, ನಂಜನಗೂಡು ಜ್ಯುಬಿಲಿಯಂಟ್ ಕಾರ್ಖಾನೆ, ಪಾದರಾಯನ ಪುರದ ಕೊರೋನ ಸೋಂಕು ಪ್ರಕರಣಗಳು ಪಕ್ಷ ಭೇದವಿಲ್ಲದೆ ರಾಜಕೀಯ ಕೆಸರೆರಚಾಟದ ಅಸ್ತ್ರ-ಶಸ್ತ್ರಗಳಾಗಿ ಬಳಕೆಯಾಗುತ್ತಿವೆ. ಇಲ್ಲಿ ಎರಡು ಬಗೆಯ ರಾಜಕೀಯ ನಡೆಯತೊಡಗಿದೆ. ಒಂದು: ಆಡಳಿತ ಪಕ್ಷದ ಆಂತರಿಕ ಬೇಗುದಿಗಳೆಲ್ಲಾ ಕೊರೋನ ನಿರ್ವಹಣೆ ಸಂದರ್ಭದಲ್ಲಿ ಸ್ಫೋಟಗೊಳ್ಳುತ್ತಿದೆ. ಎರಡು: ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವಿನ ಎಂದಿನಂತಿನ ರಾಜಕೀಯ ಕಾದಾಟ. ಕೊರೋನ ಲಾಕ್ಡೌನ್ನಿಂದ ನೆಲಕಚ್ಚಿರುವ ರಾಜ್ಯದ ಆರ್ಥಿಕ ಸ್ಥಿತಿ, ಸಾಮಾಜಿಕ ಜನಜೀವನವನ್ನು ಮೇಲೆತ್ತಲು ಮುಖ್ಯಮಂತ್ರಿ ಯಡಿಯೂರಪ್ಪನವರು ಹೆಣಗಾಡುತ್ತಿದ್ದರೆ, ಅವರದ್ದೇ ಸಂಪುಟದ ಸಚಿವರುಗಳು, ಶಾಸಕರುಗಳು ಸಿ.ಎಂ ವಿರುದ್ಧವೇ ಅಸಹಕಾರ ಚಳವಳಿಯನ್ನು ನಡೆಸುತ್ತಿದ್ದಾರೆ. ಕೊರೋನ ನಿರ್ವಹಣೆ ಸಂದರ್ಭದಲ್ಲಿ ವಿಪಕ್ಷಗಳು ಎಲ್ಲಾ ಹಂತದಲ್ಲೂ ರಾಜ್ಯ ಸರ್ಕಾರದ ನಿರ್ಧಾರಗಳ ಬೆಂಬಲಕ್ಕೆ ನಿಂತಿದ್ದರೆ, ಆಡಳಿತ ಪಕ್ಷದ ಶಾಸಕರು, ಸಚಿವರುಗಳೇ ಸರ್ಕಾರದ ನಿರ್ಧಾರಗಳನ್ನು, ಮುಖ್ಯಮಂತ್ರಿಗಳ ನಿರ್ಧಾರಗಳ ವಿರುದ್ಧ ಬಹಿರಂಗವಾಗಿ ಧ್ವನಿ ಎತ್ತುತ್ತಿರುವುದು ಸರ್ಕಾರದಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಬಹಿರಂಗಗೊಂಡಿದೆ. ಇಲ್ಲಿ ವಿರೋಧಿಸಬೇಕಾದ ವಿಪಕ್ಷಗಳು ಸರ್ಕಾರವನ್ನು ಬೆಂಬಲಿಸುತ್ತಿದ್ದರೆ, ಇತ್ತ ಬೆಂಬಲಿಸಬೇಕಾದ ಆಡಳಿತ ಪಕ್ಷದ ಸಚಿವರು, ಶಾಸಕರು-ಸಂಸದರುಗಳು ತಮ್ಮದೇ ಸರ್ಕಾರದ ಧೋರಣೆಗಳನ್ನು ವಿರೋಧಿಸುತ್ತಾ ಒಳ ಅಸಹನೆಗಳನ್ನು ಕಾರಿಕೊಳ್ಳುತ್ತಿದ್ದಾರೆ.
ಕೊರೋನ ಸೋಂಕು ಹರಡಲು ಮುಸ್ಲಿಂ ಸಮುದಾಯವೇ ಕಾರಣವೆಂದು ಬಿಂಬಿಸುವ ಶಕ್ತಿಗಳಿಗೆ ಸರ್ಕಾರದ ಮುಖ್ಯಸ್ಥನಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಕಡಿವಾಣ ಹಾಕಿದ್ದು ಅವರದ್ದೇ ಪಕ್ಷದ ಕೋಮು ಶಕ್ತಿಗಳಿಗೆ ಅಪಥ್ಯವಾಗಿದೆ. ಪ್ರಭಾವಿ ಖಾತೆಗಳು ಸಿಗದ ಸಚಿವರುಗಳು, ಸಚಿವ ಸ್ಥಾನವೇ ಸಿಗದ ಶಾಸಕರುಗಳು, ಯಡಿಯೂರಪ್ಪ ಅವರನ್ನು ಪದಚ್ಯುತಿಗೊಳಿಸಲು ವಿಫಲರಾದ ಸಂಸದರುಗಳು ಸಾಮಾಜಿಕ ಸಾಮರಸ್ಯವನ್ನು ಕದಡುವಂತಹ ಹೇಳಿಕೆಗಳನ್ನು ಕೊಡುತ್ತಾ ಮುಖ್ಯಮಂತ್ರಿಗಳ ಜೊತೆ ನಾವಿಲ್ಲ ಎಂಬ ಸಂದೇಶವನ್ನು ಸಾರುವ ಪ್ರಯತ್ನ ಮಾಡುತ್ತಲೆ ಬಂದಿದ್ದಾರೆ. ಬಿಜೆಪಿ ಸರ್ಕಾರದಲ್ಲಿ ಹಿರಿಯ ಸಚಿವರುಗಳು ಕೆಲಸ ಮಾಡುವ ಉತ್ಸಾಹವನ್ನೆ ತೋರುತ್ತಿಲ್ಲ. ಹಾಗೆ ನೋಡಿದರೆ ಕೊರೋನ ವಿರುದ್ಧದ ಹೋರಾಟದಲ್ಲಿ ದೇಶದಲ್ಲೇ ಕೇರಳ ಮುಂಚೂಣಿಯಲ್ಲಿದ್ದರೆ, ಆ ನಂತರದ ಸ್ಥಾನ ಕರ್ನಾಟಕದ್ದಾಗಿದೆ. ಸರ್ಕಾರದಲ್ಲಿ ಸಚಿವರಾದ ಸುರೇಶ್ ಕುಮಾರ್, ಬಸವರಾಜ ಬೊಮ್ಮಾಯಿ ಹೊರತುಪಡಿಸಿದರೆ, ವಲಸೆ ಬಂದು ಸಚಿವರಾದ ಎಸ್.ಟಿ.ಸೋಮಶೇಖರ್, ಬಿ.ಸಿ.ಪಾಟೀಲ್, ಸುಧಾಕರ್, ಗೋಪಾಲಯ್ಯ ಅವರುಗಳು ಮಾತ್ರವೇ ಇಂದು ಸರ್ಕಾರದ ಒತ್ತಾಸೆಗೆ ತಕ್ಕಂತೆ ಕೆಲಸ ಮಾಡುತ್ತಿದ್ದರೆ, ಉಳಿದ ಸಚಿವರುಗಳು ಮಾತ್ರ ಎಲ್ಲವೂ ಸಿ.ಎಂ.ಅವರೆ ನೋಡಿಕೊಳ್ಳಲಿ ಎಂಬ ನಿರ್ಲಕ್ಷ ಧೋರಣೆಯಲ್ಲಿ ಕಾಲ ಕಳೆಯುತ್ತಿದ್ದಾರೆ. ಇದು ಯಡಿಯೂರಪ್ಪ ಅವರನ್ನು ಇಕ್ಕಟ್ಟಿಗೆ ಸಿಲುಕಿಸಿದೆ. ಇದರಿಂದಾಗಿ ಸರ್ಕಾರ ಅನೇಕ ಸಂದರ್ಭಗಳಲ್ಲಿ ಎಡವಟ್ಟು ನಿರ್ಧಾರಗಳನ್ನೆ ಕೈಗೊಳ್ಳುವಂತಾಗಿದೆ.
ಪಾದರಾಯನಪುರದಲ್ಲಿ ಕೊರೋನ ವಾರಿಯರ್ಸ್ ಮೇಲೆ ನಡೆದ ಹಲ್ಲೆ ಪ್ರಕರಣವನ್ನೆ ನೆಪವಾಗಿಟ್ಟುಕೊಂಡ ಬಿಜೆಪಿಯಲ್ಲಿನ ಯಡಿಯೂರಪ್ಪ ವಿರೋಧಿ ಬಣ ಸಂಪುಟ ಸಭೆಯಲ್ಲೇ ಸಿ.ಎಂ. ಅವರನ್ನು ತರಾಟೆಗೆ ತೆಗೆದುಕೊಂಡು ಸೇಡು ತೀರಿಸಿಕೊಂಡುಬಿಟ್ಟಿತು. ಪಾದರಾಯನಪುರದ ಗಲಭೆಗೆ ಅಲ್ಲಿನ ಪುಂಡರು ಎಷ್ಟು ಕಾರಣರೋ ಅದರ ಹಿಂದೆ ಅನ್ನ-ನೀರು ಸಿಗದೆ ಭುಗಿಲೆದ್ದ ಜನರ ಆಕ್ರೋಶವು ಇದೆ ಎಂಬುದನ್ನು ವ್ಯವಸ್ಥಿತವಾಗಿ ಮುಚ್ಚಿ ಹಾಕಿದ ನಿರ್ಲಜ್ಜ ರಾಜಕಾರಣವೊಂದು ನಡೆದು ಹೋಗಿದೆ. ಬೆಂಗಳೂರಿನ ಪಾದರಾಯನಪುರದಲ್ಲಿ ಕೊರೋನ ಸೋಂಕಿತರು ಅಡಗಿದ್ದು, ಆ ಪ್ರದೇಶವನ್ನು ಸೀಲ್ಡೌನ್ ಮಾಡಿತ್ತು ಸರ್ಕಾರ. ಕೊರೋನ ಶಂಕಿತರನ್ನು ಕ್ವಾರಂಟೈನ್ ಗೆ ಕರೆದೊಯ್ಯಲು ಬಂದ ಕೊರೋನ ವಾರಿಯರ್ಸ್ಗಳ ಮೇಲೆ ಅಲ್ಲಿನ ನಿವಾಸಿಗಳ ಪುಂಡರ ಗ್ಯಾಂಗ್ವೊಂದು ಹಲ್ಲೆ ನಡೆಸಿದ್ದು, ಸರ್ಕಾರ ನಿರ್ದಾಕ್ಷಿಣ್ಯ ಕ್ರಮಕ್ಕಿಳಿದು ತಪ್ಪಿತಸ್ಥರನ್ನೆಲ್ಲಾ ಜೈಲಿಗೆ ಕಳುಹಿಸಿದೆ. ಇದೇ ವೇಳೆ ಅಮಾಯಕರನ್ನೂ ಬಂಧಿಸಲಾಗಿದೆ ಎಂಬ ಮಾತುಗಳು ಕೇಳಿ ಬಂದಿವೆ. ಅದರ ಬೆನ್ನಲ್ಲೇ ಕೊರೋನ ವಾರಿಯರ್ಸ್ಗಳ ರಕ್ಷಣೆಗಾಗಿ ರಾಜ್ಯ ಸರ್ಕಾರ ಕಠಿಣವಾದ ಕಾನೂನು ಸುಗ್ರೀವಾಜ್ಞೆಯನ್ನು ತಂದಿದೆ. ಇದಿಷ್ಟೇ ಘಟನಾವಳಿಗಳಾಗಿದ್ದರೆ ಪಾದರಾಯನಪುರ ಅಂತಹ ಪ್ರಾಮುಖ್ಯತೆ ಪಡೆದುಕೊಳ್ಳುತ್ತಿರಲಿಲ್ಲವೇನೋ?, ಆದರೆ ರಣರೋಗದ ಸಂದರ್ಭದಲ್ಲೂ ಪಾದರಾಯನಪುರ ರಾಜಕೀಯದ ಉರಿವ ಮನೆಯಾಗಿದ್ದು ಮಾತ್ರ ವಿಪರ್ಯಾಸ.
ಬೆಂಗಳೂರಿನ ಅತ್ಯಂತ ಕಡು ಬಡವರು, ಶ್ರಮಿಕ ಸಮುದಾಯವುಳ್ಳ ಪಾದರಾಯನಪುರ, ಗೋರಿಪಾಳ್ಯ, ಬಾಪೂಜಿನಗರ ಪಕ್ಕೆಲುಬಿನಂತಿದ್ದು, ಮುಸ್ಲಿಮರೇ ಬಾಹುಳ್ಯ ಹೊಂದಿರುವ ಬಡಾವಣೆ. ತಬ್ಲೀಗಿ ಸಂಪರ್ಕದ 11 ಜನರಿಗೆ ಕೊರೋನ ಸೋಂಕು ಪತ್ತೆಯಾದ ಕಾರಣ ಪಾದರಾಯನಪುರವನ್ನು ರೆಡ್ ರೆನ್ ಎಂದು ಗುರುತಿಸಿ ಎಲ್ಲ ದಿಗ್ಬಂಧನಗಳನ್ನು ಹೇರಲಾಯಿತು. ಈ ಬಡಾವಣೆಯಲ್ಲಿ ಗುರುತಿಸಲ್ಪಟ್ಟ 37ಕ್ಕೂ ಹೆಚ್ಚಿನ ಕೊರೋನ ಶಂಕಿತರನ್ನು ಹಂತ ಹಂತವಾಗಿ ಕರೆದೊಯ್ದು ಕ್ವಾರಂಟೈನ್ಗೆ ಒಳಪಡಿಸುವ ಕೆಲಸವನ್ನು ಆರೋಗ್ಯ ಇಲಾಖೆ, ಬಿಬಿಎಂಪಿ ಮಾಡುವಾಗ ಅವರ ಮೇಲೆ ಹಲ್ಲೆಯಂತ ಘಟನೆ ನಡೆದೇ ಹೋಯಿತು. ಈ ಹಲ್ಲೆಯನ್ನು ಯಾರೊಬ್ಬರೂ ಸಮರ್ಥಿಸುವುದು ಸಾಧ್ಯವಿಲ್ಲ. ಯಾರೊಬ್ಬರೂ ಸಮರ್ಥಿಸಿಯೂ ಇಲ್ಲ. ಈ ಘಟನೆಯನ್ನೆ ಒಂದು ಧರ್ಮದ ಜನಸಮುದಾಯದ ತಲೆಗೆ ಕಟ್ಟಿ ನಿಂದಿಸುವುದಕ್ಕೆ ದಾರಿಯಾಯಿತೇ ವಿನಃ ಇದರ ಹಿಂದಿರುವ ಕಾರಣಗಳನ್ನು ಮಾತ್ರ ಸಮಾಧಿಗೊಳಿಸಲಾಯಿತು.
ಪಾದರಾಯನಪುರವನ್ನು ಸೀಲ್ಡೌನ್ ಮಾಡಿದ್ದು ಸರಿಯಾದ ಕ್ರಮವೇ. ಆದರೆ ದಿಗ್ಬಂಧನಕ್ಕೊಳಗಾದ ಜನರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸುವಲ್ಲಿ ಬಿಬಿಎಂಪಿಯಾಗಲಿ, ಸರ್ಕಾರವಾಗಲಿ ವಿಫಲವಾಗಿತ್ತು. 40 ಸಾವಿರಕ್ಕೂ ಹೆಚ್ಚಿನ ಜನಸಮುದಾಯವುಳ್ಳ ಈ ಪ್ರದೇಶದಲ್ಲಿ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತೆ ಮೊದಲೆರೆಡು ದಿನ ಅಗತ್ಯ ವಸ್ತುಗಳನ್ನು ಪೂರೈಸಲಾಯಿತಾದರೂ ನಂತರದಲ್ಲಿ ಇದು ಸ್ಪಷ್ಟ ನಿರ್ಲಕ್ಷಕ್ಕೊಳಗಾಯಿತು. ಕ್ಷೇತ್ರದ ಶಾಸಕ ಜಮೀರ್ ಅಹ್ಮದ್, ಕಾರ್ಪೊರೇಟರ್ ಇಮ್ರಾನ್ ಜನರನ್ನು ಹಸಿವಿನಿಂದ ಪಾರು ಮಾಡಲು ಹೆಣಗಾಡುತ್ತಿರುವ ನಡುವೆಯೂ ಜನರ ಸಹನೆ ಕಟ್ಟೆಯೊಡೆದಿತ್ತು. ಇದನ್ನು ಅಲ್ಲಿನ ಪರಿಸ್ಥಿತಿಯ ಅರಿವೇ ಇಲ್ಲದ ಪುಂಡರ ಗುಂಪೊಂದು ಹಲ್ಲೆಗಿಳಿದು ಹಸಿದು ಕುಂತಿದ್ದ ಕೋಮುವಾದಿಗಳಿಗೆ ಆಹಾರ ಒದಗಿಸಿತು. ನೆರೆ, ಬರ, ಅತಿವೃಷ್ಟಿ, ಅನಾವೃಷ್ಟಿ ಅಷ್ಟೇ ಏಕೆ ಸಾಮೂಹಿಕ ರೋಗ ರುಜಿನ, ಹೆಣದ ಸಂಸ್ಕಾರಗಳಲ್ಲೂ ರಾಜಕೀಯ ಫಸಲು ಕೊಯ್ಯುವ ವಿಕ್ಷಪ್ತ ನಡವಳಿಕೆಗಳು ನಡೆಯುವುದು ಬಹುಶಃ ಭಾರತದಲ್ಲಿ ನೋಡಲು ಮಾತ್ರ ಸಾಧ್ಯವೇನೋ?! ಕೊರೋನ ಸೋಂಕು ವಿರುದ್ಧ ನಡೆದಿರುವ ಹೋರಾಟ ಇಂದು ಒಟ್ಟಾರೆ ಜನಸಮುದಾಯಗಳ ಉಳಿವಿನ ಕರ್ತವ್ಯವಾಗುವ ಬದಲು ದ್ವೇಷ, ಒಡಕು, ವಿಭಜನೆಯ ಕ್ಷುಲ್ಲಕ ರಾಜಕಾರಣದ ಅವಕಾಶವನ್ನಾಗಿ ಬಳಸಿಕೊಳ್ಳುವ ವಿಕೃತಿ ನಡೆದಿವೆ. ಅರ್ಧ ಲೀಟರ್ ಹಾಲು ಕೊಡುವಾಗಲು ಜಾತಿ, ಧರ್ಮ, ಪಕ್ಷ ನೋಡಿ ಹಂಚುವ ಜನರಲ್ಲಿ ಕೊರೋನಗಿಂತ ಭೀಕರವಾದ ಸೋಂಕೊಂದು ಹೆಡೆಯಾಡುತ್ತಿರುವುದು ಸ್ಪಷ್ಟವಾಗಿ ಕಾಣುತ್ತಿದೆ. ಕೊರೋನ ಸೋಂಕು ಪೀಡಿತ ವ್ಯಕ್ತಿಯನ್ನು ಜಾತಿ, ಧರ್ಮ, ಪ್ರದೇಶವಾರು ಸಂಕೇತಗಳಿಂದ ಗುರುತಿಸಲ್ಪಡುತ್ತಿರುವುದೇ ಒಂದು ಅನಾಗರಿಕ ವರ್ತನೆ.
ಕೊರೋನ ವಿರುದ್ಧದ ಹೋರಾಟದ ಈ ಸಂದರ್ಭದಲ್ಲೆ ಮುಖ್ಯಮಂತ್ರಿಗಳ ವಿರುದ್ಧ ಅವರದ್ದೇ ಪಕ್ಷದ ಕೆಲವರು ಪದಚ್ಯುತಿಗೆ ಸಂಚು ನಡೆಸಿದ್ದಾರೆ ಎಂಬ ಗುಪ್ತಚರ ಇಲಾಖೆ ಮಾಹಿತಿಯೊಂದು ಮುಖ್ಯಮಂತ್ರಿಗಳ ಕೈ ಸೇರಿದೆ ಎಂಬ ವದಂತಿ ಹರಿದಾಡಿತು. ರಾಜ್ಯದಲ್ಲಿ ಕೋಮುಗಲಭೆ ಸೃಷ್ಟಿಸುವ ಮೂಲಕ ಯಡಿಯೂರಪ್ಪ ಅವರನ್ನು ಕೆಳಗಿಳಿಸಬೇಕೆಂಬ ಹುನ್ನಾರಗಳು ಅವರದ್ದೇ ಪಕ್ಷದವರಿಂದ ನಡೆಯುತ್ತಿದೆ. ಇದೇ ಕಾಲಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರ ಮಗನ ಮದುವೆಯನ್ನು ರಾಜ್ಯದ ದೊಡ್ಡ ರಾಜಕೀಯ ಕುಟುಂಬವೊಂದರ ಮದುವೆ ಇದು ಎಂದು ಸಮರ್ಥಿಸಿಕೊಳ್ಳುವ ಮೂಲಕ ಯಡಿಯೂರಪ್ಪ ಅವರು ಹೆಚ್ಡಿಕೆ ಮದುವೆಯನ್ನು ರಾಜಕೀಯಕರಣಗೊಳಿಸುವ ಸ್ವಪಕ್ಷೀಯರ ಪ್ರಯತ್ನವನ್ನೆ ನೆಲಕಚ್ಚಿಸಿದರು. ಯಡಿಯೂರಪ್ಪ ಅವರು ಎಲ್ಲಾ ಸಂದರ್ಭದಲ್ಲಿ ಎದುರಾಳಿಗಳ ಕೈಗೆ ಅಸ್ತ್ರ ಸಿಗದಂತೆ ತಮ್ಮ ರಾಜಕೀಯ ಅನುಭವವನ್ನು ಬಳಸಿಕೊಂಡು ಹೆಜ್ಜೆ ಹಾಕತೊಡಗಿದ್ದಾರೆ.
ಪಾದರಾಯನಪುರದ ಬಂಧಿತ ರನ್ನು ರಾಮನಗರ ಜೈಲಿಗೆ ಕಳುಹಿ ಸುವ ನಿರ್ಧಾರವೂ ಎಡವಟ್ಟು ನಿರ್ಧಾರವಾಗಿದ್ದು, ಇದರ ಹಿಂದೆಯೂ ಕ್ಷುಲ್ಲಕ ರಾಜಕಾರಣ ನಡೆದ ಪರಿಣಾಮವೇ ಇಂದು ಹಸಿರು ವಲಯದಲ್ಲಿದ್ದ ರಾಮನಗರ ಜಿಲ್ಲೆ ಒಂದೇ ದಿನದಲ್ಲಿ ರೆಡ್ ಜೋನ್ ಆಗಿಬಿಟ್ಟಿದೆ. ಉಪ ಮುಖ್ಯಮಂತ್ರಿ ಡಾ.ಅಶ್ವಥ್ ನಾರಾಯಣ, ಬಂದೀಖಾನೆ ಎಡಿಜಿಪಿ ಅಲೋಕ್ ಮೋಹನ್ ಮತ್ತು ಗೃಹ ಸಚಿವ ಬಸವರಾಜು ಬೊಮ್ಮಾಯಿಯವರ ಅವಿವೇಕದ ನಿರ್ಧಾರವೊಂದು ರಾಮನಗರ ಜಿಲ್ಲೆಯನ್ನು ಸೋಂಕಿನ ಮಡುವಿಗೆ ತಳ್ಳಿದೆ. ಪಾದರಾಯನಪುರದ 121 ಬಂಧಿತರನ್ನು ಕೊರೋನ ಶಂಕಿತರನ್ನು ಕುಮಾರಸ್ವಾಮಿ ಅವರ ವಿರೋಧದ ನಡುವೆಯೂ ರಾಮನಗರ ಜೈಲಿಗೆ ಕರೆತಂದ (ಒಂದೇ ದಿನದಲ್ಲಿ ವಾಪಾಸ್ ಕರೆದೊಯ್ದು ಹಜ್ ಭವನದಲ್ಲಿರಿಸಲಾಗಿದೆ) ಪರಿಣಾಮ ಅವರಲ್ಲಿ ಐವರಿಗೆ ಸೋಂಕು ಇರುವುದು ಪತ್ತೆಯಾಗಿ ಈಗ ರಾಮನಗರ ಜಿಲ್ಲೆಯ ಜೈಲು ಸಿಬ್ಬಂದಿ, ವೈದ್ಯರು ಸೇರಿದಂತೆ 200ಕ್ಕೂ ಹೆಚ್ಚು ಜನರು ಕ್ವಾರಂಟೈನ್ಗೆ ಒಳಪಡುವಂತಾಗಿದೆ. ಕಳೆದ ನಲವತ್ತು ದಿನಗಳಿಂದ ಒಂದೇ ಒಂದು ಸೋಂಕು ತಗುಲದಂತೆ ಕ್ಷೇತ್ರದ ಜನರಿಗೆ ಅಗತ್ಯ ವಸ್ತುಗಳ ಒದಗಿಸುತ್ತಾ ಜತನದಿಂದ ಕಾಯ್ದುಕೊಂಡಿದ್ದ ಸಂಸದ ಡಿ.ಕೆ ಸುರೇಶ್, ಹೆಚ್.ಡಿ.ಕುಮಾರಸ್ವಾಮಿ ಅವರುಗಳ ಹಗಲಿರುಳಿನ ಪ್ರಯತ್ನ ನೀರಲ್ಲಿ ಹುಣಸೆ ಹಣ್ಣು ತೊಳೆದಂತಾಗಿದೆ. ಇಲ್ಲಿ ರಾಮನಗರದ ಉಸ್ತುವಾರಿ ಸಚಿವರೂ ಆಗಿರುವ ಡಾ.ಅಶ್ವರ್ಥ ನಾರಾಯಣ ತಮ್ಮ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಹೋಗಿ ಎಡವಟ್ಟು ಮಾಡಿದ್ದಾರೆ.
ಜ್ಯುಬಿಲೆಯಂಟ್ ಜುಗಾರಿ:
ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯಲ್ಲಿ ಒಬ್ಬ ವ್ಯಕ್ತಿಯೇ 72 ಜನರಿಗೆ ಕೊರೋನ ಸೋಂಕು ಹರಡಿದ್ದಾನೆ. ಇದರ ಪರಿಣಾಮ ಮೈಸೂರು ಜಿಲ್ಲೆಯಲ್ಲಿ 89 ಜನರು ಸೋಂಕಿಗೆ ತುತ್ತಾಗಿ ನಂಜನಗೂಡು ಸೇರಿದಂತೆ ಮೈಸೂರಿನ 27 ವಾರ್ಡುಗಳು, ಟಿ.ನರಸೀಪುರದ ಬಡಾವಣೆಯೊಂದು ಸೀಲ್ಡೌನ್ ಆಗಿದೆ. ಇಲ್ಲಿ ಬಹುಮುಖ್ಯವಾದ ಪ್ರಶ್ನೆಯೆಂದರೆ ತಬ್ಲೀಗಿ ಸಂಪರ್ಕದಿಂದ ರಾಜ್ಯದಲ್ಲಿ ಕೊರೋನ ಸೋಂಕು ಹರಡಿದೆ ಎಂದು ಅವರನ್ನು ಗುಂಡಿಟ್ಟು ಕೊಲ್ಲಬೇಕು, ಕೊರೋನ ಜಿಹಾದ್ ಎಂದೆಲ್ಲಾ ವಾಗ್ದಾಳಿ ನಡೆಸುತ್ತಾ ಮತ್ತು ಪಾದರಾಯನಪುರದ ಘಟನೆಯನ್ನು ಮುಂದಿಟ್ಟುಕೊಂಡು ಒಂದು ಸಮುದಾಯದ ವಿರುದ್ಧ ದ್ವೇಷ ಬಿತ್ತುವ ಕೆಲಸ ಮಾಡಿದ ಬಿಜೆಪಿಯ ಯಾವೊಬ್ಬ ನಾಯಕರುಗಳಿರಲಿ, ಮೈಸೂರು ಜಿಲ್ಲೆಯ ಆಡಳಿತ ಪಕ್ಷದ ಶಾಸಕ, ಸಚಿವರುಗಳೇ ಜ್ಯುಬಿಲಿಯಂಟ್ ಕಾರ್ಖಾನೆ ಹರಡಿದ ಭಾರೀ ಸಂಖ್ಯೆಯ ಸೋಂಕು ಬಗ್ಗೆ ತುಟಿ ಬಿಚ್ಚುತ್ತಿಲ್ಲ. ಇದರ ಬದಲಾಗಿ ಕ್ವಾರಂಟೈನ್ ಆಗಿರುವ ಕೊರೋನ ಸೋಂಕು ತಗುಲಿಸಿದ ಜ್ಯುಬಿಲಿಯಂಟ್ ಮೆಡಿಸಿನ್ ಕಾರ್ಖಾನೆಯನ್ನೇ ಮತ್ತೆ ಪುನರಾರಂಭಿಸಲು ಆಡಳಿತ ಪಕ್ಷದ ಶಾಸಕರು. ಸಂಸದರೆ ಮುಂದಾಗಿದ್ದು, ಸಾವಿರಾರು ಜನರ ಬದುಕನ್ನು ಬರ್ಬರಗೊಳಿಸುವ ರಾಜಕಾರಣವನ್ನು ಎಸೆಗಹೊರಟಿದ್ದಾರೆ. ನಂಜನಗೂಡಿನ ಜ್ಯುಬಿಲಿಯಂಟ್ ಕಾರ್ಖಾನೆಯ ಕೊರೋನದ ಅಸಲಿ ಕಹಾನಿ ಬರೆಯುತ್ತಿರುವ ಸ್ಥಳೀಯ ಸುದ್ದಿ ವಾಹಿನಿ ಡೆಮಾಕ್ರಟಿಕ್ ಟಿವಿ ಸಂಪಾದಕರನ್ನು ಬೆದರಿಸಿ ಬಾಯಿ ಮುಚ್ಚಿಸುವ ವಿಫಲ ಪ್ರಯತ್ನಗಳು ನಡೆಯುತ್ತಿವೆ. ಅಂತಾರಾಷ್ಟ್ರೀಯ ಸಂಪರ್ಕದಲ್ಲಿರುವ ಈ ಕಾರ್ಖಾನೆಗೆ ಈಗ ಇಮೇಜಿನ ಪ್ರಶ್ನೆಯಾಗಿದ್ದು, ಸಂಸದ ಪ್ರತಾಪ ಸಿಂಹ ಬಹಿರಂಗವಾಗಿಯೇ ಕಾರ್ಖಾನೆಯನ್ನು ಪುನಾರಂಭಿಸುವಂತೆ ಕೇಂದ್ರಕ್ಕೆ ಒತ್ತಾಯಿಸುವ ಮೂಲಕ ಬೆಂಬಲಕ್ಕೆ ನಿಂತಿದ್ದರೆ, ನಂಜನಗೂಡು ಶಾಸಕ ಹರ್ಷವರ್ಧನ್ ಸೋಂಕು ಹರಡಿ ಆಗಿರುವ 8 ಕೋಟಿಯಷ್ಟು ನಷ್ಟವನ್ನು ಕಾರ್ಖಾನೆ ಭರಿಸುವ ಷರತ್ತಿನ ಮೇಲೆ ಕಾರ್ಖಾನೆಯನ್ನು ಆರಂಭಿಸಬೇಕೆಂದು ಹೇಳಿದ್ದಾರೆ. ಕಾರ್ಖಾನೆಯಲ್ಲಿ ಸಾವಿರಾರು ಜನರ ಬದುಕಿನ ಪ್ರಶ್ನೆ ಅಡಗಿದೆ. ಅದರ ಜೊತೆ ಇಡೀ ನಾಡಿನ ಜನರ ಜೀವವೂ ಆಡಗಿದೆ ಎಂಬುದನ್ನು ಮರೆತಿರುವ ಪ್ರತಾಪ ಸಿಂಹ ಕಾರ್ಖಾನೆಯ ವಕಾಲತ್ತಿಗಿಳಿದಿರುವುದು ಯಾಕೆ ಎಂದು ಮುಖ್ಯಮಂತ್ರಿಗಳು ಪ್ರತಾಪ ಸಿಂಹನನ್ನು ಕಿವಿಹಿಡಿದು ಕೇಳಬೇಕಿದೆ. ಪಾದರಾಯನಪುರದಲ್ಲಿ ಜನರ ಸಂಕಷ್ಟಗಳಿಗೆ ದುಡಿಯುತ್ತಿದ್ದ ಶಾಸಕ ಜಮೀರ್ ಅಹ್ಮದ್ ಅವರನ್ನು ಖಳನಾಯಕನಂತೆ ಬಿಂಬಿಸಿ ತೇಜೋವಧೆ ಮಾಡಿದ ಮಂದಿಗೆ ಮಂಗಳೂರು ಸಮೀಪದ ಸುರತ್ಕಲ್ನಲ್ಲಿ ಸತ್ತ ಮಹಿಳೆಯ ಶವ ಸಂಸ್ಕಾರಕ್ಕೆ ಜಾಗ ಕೊಡದ ಆಡಳಿತ ಪಕ್ಷದ ಶಾಸಕ ಡಾ.ಭರತ್ ಶೆಟ್ಟಿಯ ಕೃತ್ಯವೂ ಕ್ರೌರ್ಯ, ಸಮಾಜ ವಿರೋಧಿತನವೆಂದು ಕಾಣುವುದೇ ಇಲ್ಲ.