ಆತಂಕ ಸೃಷ್ಟಿಸಿದ ಆರೋಗ್ಯ ಸೇತು

Prasthutha|

- Advertisement -

ಯಾಸೀರ್ ಅಮೀನ್

- Advertisement -

ಡೀಪ್‌ಸ್ಟೇಟ್ ಅನ್ನು ದೇಶದೊಳಗಿರುವ ಒಂದು ದೇಶ (state within a state) ಎಂದು ವ್ಯಾಖ್ಯಾನಿಸಬಹುದು. ಅಂದರೆ ಪ್ರಜಾಪ್ರಭುತ್ವ  ರೀತಿಯಲ್ಲಿ ಆರಿಸಲ್ಪಟ್ಟ ಸರಕಾರ ನಾಮ ಮಾತ್ರಕ್ಕೆ ಇದ್ದೂ, ಬ್ಯೂರೋಕ್ರಸಿ, ಗುಪ್ತಚರ ಇಲಾಖೆಗಳು, ಇತರ ಸರಕಾರಿ ಸಂಸ್ಥೆಗಳು (ಕಟ್ಟಡಗಳಲ್ಲ) ಮೊದಲಾದವುಗಳ ಆಡಳಿತವನ್ನು ಮತ್ತೊಂದು ಗುಂಪು ನಡೆಸುವುದಕ್ಕೆ ಡೀಪ್‌ಸ್ಟೇಟ್ ಎಂದು ಕರೆಯಲಾಗುತ್ತದೆ.

ಈ ಲೇಖನವನ್ನು ಓದುವ ಮೊದಲು ಓದುಗರು ಎರಡು ಆಶಯಗಳ ಕುರಿತಂತೆ ತಿಳಿದುಕೊಂಡಿರಬೇಕು. ಅದರಲ್ಲಿ ಒಂದು ‘‘ಡೀಪ್‌ಸ್ಟೇಟ್’’.

 ‘ಡೀಪ್‌ಸ್ಟೇಟ್’’ ಎಂಬುದು ರಾಜಕೀಯ ಮೀಮಾಂಸೆಯಲ್ಲಿ ಇತ್ತೀಚೆಗೆ ಬಳಸಲಾಗುತ್ತಿರುವ ಒಂದು ಪದ ಪ್ರಯೋಗವಾಗಿದೆ. ಡೀಪ್‌ಸ್ಟೇಟ್ ಅನ್ನು ದೇಶದೊಳಗಿರುವ ಒಂದು ದೇಶ (state within a state) ಎಂದು ವ್ಯಾಖ್ಯಾನಿಸಬಹುದು. ಅಂದರೆ ಪ್ರಜಾಪ್ರಭುತ್ವ  ರೀತಿಯಲ್ಲಿ ಆರಿಸಲ್ಪಟ್ಟ ಸರಕಾರ ನಾಮ ಮಾತ್ರಕ್ಕೆ ಇದ್ದೂ, ಬ್ಯೂರೋಕ್ರಸಿ, ಗುಪ್ತಚರ ಇಲಾಖೆಗಳು, ಇತರ ಸರಕಾರಿ ಸಂಸ್ಥೆಗಳು (ಕಟ್ಟಡಗಳಲ್ಲ) ಮೊದಲಾದವುಗಳ ಆಡಳಿತವನ್ನು ಮತ್ತೊಂದು ಗುಂಪು ನಡೆಸುವುದಕ್ಕೆ ಡೀಪ್‌ಸ್ಟೇಟ್ ಎಂದು ಕರೆಯಲಾಗುತ್ತದೆ. ತುರ್ಕಿಯಲ್ಲಿ ಪ್ರಾರಂಭವಾದ ಈ ಆಶಯವು ಜಗತ್ತಿನ ಬೇರೆಬೇರೆ ದೇಶಗಳಲ್ಲಿ ಪರೀಕ್ಷಿಸಲ್ಪಟ್ಟಿದೆ ಎಂದು ತಜ್ಞರು ಹೇಳುತ್ತಾರೆ.

 ಈ ಆಶಯವನ್ನು  ಎತ್ತಿ ಹಿಡಿಯುವವರಲ್ಲಿ ಬಲಪಂಥೀಯ ರಾಜಕೀಯ ವಕ್ತಾರರು ಹೆಚ್ಚು. ಇಂಡಿಯಾದಲ್ಲೂ ಅಂತಹ ಡೀಪ್‌ಸ್ಟೇಟ್ ಕಾರ್ಯೋನ್ಮುಖವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಡುತ್ತಾರೆ.

 ಎರಡನೆಯದು ‘‘ಬಯೋಮೆಟ್ರಿಕ್ ಡಾಟಾ’’.  ಬಯೋಮೆಟ್ರಿಕ್ಸ್ ಎಂದರೇನು? ಪ್ರತಿಯೊಬ್ಬರ ದೇಹದ ಅಳತೆ ಮತ್ತು ಅಂಕೆಸಂಖ್ಯೆಗಳಿಗೆ ಸಾಂಕೇತಿಕ ಪದ ಬಯೋಮೆಟ್ರಿಕ್ಸ್  ಅಥವಾ ಜೀವ ಮಾಪಕ ಎಂದಾಗಿದೆ.ವ್ಯಕ್ತಿಗಳನ್ನು ವಿವರಿಸಲು ಮತ್ತು ಪ್ರತಿಪಾದಿಸಲು ಬಳಸುವ  ಮಾಪನಕ್ಕೆ ಜೀವಮಾಪನ ಎಂದು ಹೆಸರು.

 ಜನರ ಸ್ವಭಾವ, ದೈಹಿಕ ವೈಶಿಷ್ಟತೆಗಳೆನೆಂದು ಜೀವಮಾಪನವನ್ನು ವರ್ಗೀಕರಿಸಲಾಗಿದೆ. ದೈಹಿಕ ವೈಶಿಷ್ಟತೆಗಳು ದೇಹಕ್ಕೆ ಸಂಬಂಧಪಟ್ಟದಾಗಿದೆ. ಬೆರಳಚ್ಚು, ಅಂಗೈ ನರಗಳು, ಮುಖ, ಡಿ.ಎನ್.ಎ, ಕೈಗಳ ಅಳತೆ, ಅಕ್ಷಿಪಟಲ, ದೆಹದ ವಾಸನೆ ಮೊದಲಾದವುಗಳು ದೈಹಿಕ ವೈಶಿಷ್ಟತೆಗೆ ಸಂಬಂಧಿಸಿದೆ. ಸ್ವಭಾವ ವೈಶಿಷ್ಟತೆಗಳು ಸ್ವಭಾವಕ್ಕೆ ಸಂಬಂಧಿಸಿದೆ. ಉದಾಹರಣೆಗೆ ಹೇಳುವುದಾದರೆ ಧ್ವನಿ, ನಡತೆ. ಈ ಜೀವಮಾಪಕ ಮಾಹಿತಿಗಳಿಗೆ ಬಯೋಮೆಟ್ರಿಕ್ ಡಾಟ ಎಂದು ಹೆಸರು.

 21 ನೇ ಶತಮಾನದ ಅತಿ ದೊಡ್ಡ ವ್ಯಾಪಾರ ಬಯೋಮೆಟ್ರಿಕ್ಸ್‌ಗೆ ಸಂಬಂಧಿಸಿದೆ ಎಂದು ಖ್ಯಾತ ಚಿಂತಕ ಮತ್ತು ಇತಿಹಾಸಕಾರ ಯುವಲ್ ನೋಹ್ ಹರಾರಿ ಹೇಳುತ್ತಾರೆ. ಈ ಎರಡು ಆಶಯಗಳ ಬೆಳಕಿನಲ್ಲಿ ಆರೋಗ್ಯ ಸೇತು ಆ್ಯಪ್ ಮತ್ತು ಅದರ ಕುರಿತಾದ ವಿವಾದದ ಬಗ್ಗೆ ನಾವು ತಿಳಿದುಕೊಳ್ಳಬೇಕಾಗುತ್ತದೆ. ಹಾಗಿದ್ದರೆ ಮಾತ್ರ ನಮಗದನ್ನು ಸ್ಪಷ್ಟವಾಗಿ ತಿಳಿಯಲು ಮತ್ತು ಸುಲಭವಾಗಿ ಬಿಟ್ಟುಬಿಡದಿರಲು ಸಾಧ್ಯ.

 ಕೋವಿಡ್ ಪೀಡಿತರ ಮಾಹಿತಿಗಳನ್ನು ಸರಕಾರಿ ಡಾಟಾಗಳಿಂದ ಸ್ವತಃ ಸಂಗ್ರಹಿಸಿ ಅಪ್ಲಿಕೇಶನ್ ಇನ್‌ಸ್ಟಾಲ್ ಮಾಡಿದ ಬಳಕೆದಾರರಿಗೆ ನಿಮ್ಮ ಸಮೀಪದಲ್ಲಿ ಕೋವಿಡ್ ರೋಗಿಗಳಿದ್ದಾರೆಯೇ ಎಂಬ ಮಾಹಿತಿಯನ್ನು ಆರೋಗ್ಯ ಸೇತು ಎಂಬ ಆ್ಯಪ್ ನೀಡುತ್ತದೆ. ಫೋನ್ ನಂಬರ್ ಬಳಸಿ ಆ್ಯಪ್ ಲಾಗಿನ್ ಮಾಡಬೇಕಾದುದು. ನಿಮ್ಮ ಹೆಸರು, ಲಿಂಗ, ವಯಸ್ಸು, ಉದ್ಯೋಗ, ಪ್ರಯಾಣಿಸಿದ ಜಾಗದ ಮಾಹಿತಿ ಸೇರಿದಂತೆ ಹಲವಾರು ಮಾಹಿತಿಯನ್ನು ಆ್ಯಪ್ ಕೇಳುತ್ತದೆ. ನಿಮ್ಮ ಜಿ.ಪಿ.ಎಸ್ ವ್ಯವಸ್ಥೆಯನ್ನು ಬಳಸಿ ನಿಮ್ಮ ಸಂಪೂರ್ಣ ಚಲನವಲನವನ್ನು ಅದು ದಾಖಲಿಸುತ್ತದೆ. ಇದು ಕೋವಿಡ್ ಕಾರಣಕ್ಕಾಗಿದ್ದರೂ ಗಂಭೀರವಾದ ದುಷ್ಪರಿಣಾಮಗಳನ್ನು ಬೀರಲಿದೆ ಎಂಬುದು ತಜ್ಞರ ಅಭಿಮತ.  ಬಳಕೆದಾರರ ಮಾಹಿತಿಯು ಯುನಿಕ್ ಐಡಂಟಿಫಿಕೇಶನ್ ಮುಖಾಂತರ ಸುರಕ್ಷಿತವೆಂದು ಸರಕಾರ ಹೇಳುತ್ತಿದ್ದರೂ ಜನರನ್ನು ಸುಲಭದಲ್ಲಿ ಗುರುತಿಸಲು ಸಾಧ್ಯ ಎಂದು ತಾಂತ್ರಿಕ ಪರಿಣತರು ಹೇಳುತ್ತಾರೆ. ಈಗಾಗಲೆ  50 ದಶಲಕ್ಷಕ್ಕಿಂತ ಹೆಚ್ಚು ಮಂದಿ ಈ ಆ್ಯಪನ್ನು ಡೌನ್‌ಲೋಡ್ ಮಾಡಿಕೊಂಡಿದ್ದಾರೆ.

 ಸ್ಮಾರ್ಟ್‌ಫೋನ್ ಹೊಂದಿದವರು ಆ್ಯಪ್ಲಿಕೇಶನ್ ಡೌನ್‌ಲೋಡ್ ಮಾಡದಿದ್ದಲ್ಲಿ ಕೇಸು ಹಾಕಲಾಗುವುದೆಂಬ ಯು.ಪಿ. ಪೊಲೀಸರ ಹೇಳಿಕೆಯನ್ನು ಮಾಧ್ಯಮಗಳು ಮೆ 5 ರಂದು ವರದಿ ಮಾಡಿದವು. ಯು.ಪಿ. ಯ ನೋಯ್ಡ ಮತ್ತು ಗ್ರೇಟರ್ ನೋಯ್ಡದಲ್ಲಿ ಆರೋಗ್ಯ ಸೇತು ಆ್ಯಪ್ ಹೊಂದಿರದ ಸ್ಮಾರ್ಟ್ ಫೋನ್ ಕೈವಶವಿದ್ದಲ್ಲಿ  ಲಾಕ್‌ಡೌನ್ ಉಲ್ಲಂಘನೆಯ ಆರೋಪದ ಮೇಲೆ ಪೊಲೀಸರು ಕೇಸು ದಾಖಲಿಸುತ್ತಿದ್ದರು. ಇದಕ್ಕೆ ಸಂಬಂಧಿಸಿದಂತೆ ಹೊಸ ನಿಯಮಾವಳಿ ಜಾರಿಗೆ ತರಲಾಗಿದೆ ಎಂದು ಎನ್.ಡಿ.ಟಿ.ವಿ ವರದಿ ಮಾಡಿದೆ. ಇಂತಹ ಕಾನೂನುಗಳನ್ನು ಬಳಸಿ ಪ್ರತಿಯೊಬ್ಬರ ಪ್ರಜೆಗಳ ಚಲನವಲನವನ್ನು ನಿರೀಕ್ಷಿಸುವುದು ಸರಕಾರದ ಉದ್ದೇಶವೆಂಬುದು ಸ್ಪಷ್ಟ. ಇದು ಆರೋಗ್ಯ ಸಂರಕ್ಷಣೆಗಾಗಿ ಎಂಬುದು ಕೇಂದ್ರ ಸರಕಾರದ ವಾದ. ಅದೇ ವೇಳೆ ಖಾಸಗಿ ಮತ್ತು ಸರಕಾರ ಜಂಟಿಯಾಗಿ ನಡೆಸುವ ಆ್ಯಪ್‌ನಿಂದ ಮಾಹಿತಿಗಳು ಸೋರಿಕೆಯಾದರೆ ಅದಕ್ಕೆ ಸರಕಾರ ಜವಾಬ್ದಾರಿಯಲ್ಲ ಎಂಬ ವಿಚಿತ್ರ ವಾದವನ್ನೂ ಕೇಂದ್ರ ಸರಕಾರ ಮುಂದಿಟ್ಟಿದೆ.

ಈ ಆ್ಯಪ್ ಸುರಕ್ಷಿತವಲ್ಲ ಎಂದು ಪ್ರಮುಖ ಫ್ರೆಂಚ್ ಎತ್ತಿಕಲ್ ಹ್ಯಾಕರ್  ರಾರ್ಬಟ್ ಬ್ಯಾಪಿಸ್ಟ್ ಯಾನೆ ಇಲಿಯೆಟ್ ಆಂಡರ್ಸನ್ ಪುರಾವೆ ಸಹಿತ ಕೇಂದ್ರಸರಕಾರಕ್ಕೆ ಸವಾಲು ಹಾಕಿದ್ದಾರೆ. ‘‘ನಿಮ್ಮ ಆ್ಯಪ್‌ನಲ್ಲಿ ಭದ್ರತಾ  ಲೋಪವಿದೆ. 90 ದಶಲಕ್ಷ ಜನರ ಖಾಸಗಿತನ ಅಪಾಯದಲ್ಲಿದೆ. ನೀವು ನನ್ನನ್ನು ಖಾಸಗಿಯಾಗಿ ಭೇಟಿಯಾಗಬಲ್ಲಿರಾ?’’ಎಂದು ಇಲಿಯೆಟ್ ಟ್ವೀಟ್ ಮಾಡಿದ್ದಾರೆ. ರಾಹುಲ್ ಗಾಂಧಿ ಹೇಳಿರುವುದು ಸರಿ ಎಂದೂ ಅವರು ತಿಳಿಸಿದ್ದಾರೆ.

ಸ್ವ ಇಚ್ಛೆಯಿಂದ ಬಳಸುವ ಈ ಆ್ಯಪನ್ನು ಖಾಸಗಿ ಮತ್ತು ಸರಕಾರಿ ಉದ್ಯೋಗಿಗಳಿಗೆ ಕಡ್ಡಾಯಗೊಳಿಸಿದೆ. ಖಾಸಗಿ ಸಂಸ್ಥೆಯ ಉದ್ಯೋಗಿಯು ಈ  ಆ್ಯಪ್ ಹೊಂದಿಲ್ಲದಿದ್ದಲ್ಲಿ ಆ ಕಂಪೆನಿಯ ಮೇಲಧಿಕಾರಿ ಅದಕ್ಕೆ ಹೊಣೆ ಎಂದು ಕೇಂದ್ರ ಸರಕಾರ ತಿಳಿಸಿದೆ.

ಆರೋಗ್ಯಸೇತು ಆ್ಯಪ್ ವ್ಯವಸ್ಥಿತವಾದ ಮೇಲ್ನೋಟ ಹೊಂದಿರದ ಗಂಭೀರ ಮಾಹಿತಿ ಸಂರಕ್ಷಣೆಯ ಮತ್ತು ಖಾಸಗಿತನದ ಮೇಲೆ ಆತಂಕ ಸೃಷ್ಟಿಸುವ ರೀತಿಯಲ್ಲಿ ಓರ್ವ ಖಾಸಗಿ ಅಪರೇಟರ್‌ಗೆ ಔಟ್‌ಸೋರ್ಸ್ ಮಾಡಬಹುದಾದ ಅತ್ಯಾಧುನಿಕ ಗುಪ್ತಚರ ತಂತ್ರಜ್ಞಾನವಾಗಿದೆ. ಪ್ರಜೆಗಳ ಅನುಮತಿ ಇಲ್ಲದೆ ಇದನ್ನು ಬಳಸಬಾರದೆಂದು ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದರು. ಇದಕ್ಕೆ ಉತ್ತರ ಎಂಬಂತೆ ಇಲಿಯೆಟ್ ರಾಹುಲ್‌ರನ್ನು ಪ್ರಸ್ತಾಪಿಸಿ ಭದ್ರತಾಲೋಪದ ಬಗ್ಗೆ ಟ್ವೀಟ್ ಮಾಡಿದ್ದರು. ಕೇಂದ್ರ ಸರಕಾರ ಈ ಆ್ಯಪ್‌ನ ಮೂಲಕ ದೇಶದ ಪ್ರಜೆಗಳ ಬಯೋಮೆಟ್ರಿಕ್ ಮಾಹಿತಿಗಳ ಸಂಗ್ರಹವನ್ನು ನಡೆಸುತ್ತಿದೆ ಎಂದರ್ಥ.

ಪ್ರಮುಖ ಚಿಂತಕನೂ ಇತಿಹಾಸ ತಜ್ಞನೂ ಆಗಿರುವ ಯುವಲ್ ಹರಾರಿ ಉತ್ತರ ಕೊರಿಯಕ್ಕೆ ಸಂಬಂಧಿಸಿದಂತೆ ಹೀಗೆ ಹೇಳಿದ್ದಾರೆ: ‘‘ಪ್ರಜೆಗಳ ಬಯೋಮೆಟ್ರಿಕ್ ಡಾಟಾಗಳು ಸರಕಾರದ ಡಾಟಾ ಬೇಝ್‌ಗೆ ಸೇರುವುದರೊಂದಿಗೆ ಅವರ ನಾಯಕರ ಕುರಿತಾದ ನಿಮ್ಮ ಭಾವನೆಗಳು ತಕ್ಷಣ ಪ್ರಭುತ್ವಕ್ಕೆ ಟ್ರಾಕ್ ಮಾಡಲು ಸಾಧ್ಯ. ಅಂದರೆ ನಿಮ್ಮ ಪಾಲಿಟಿಕ್ಸ್ ನೀವು ತಿಳಿದುಕೊಳ್ಳುವ ಮೊದಲು ಸರಕಾರ ತಿಳಿದುಕೊಳ್ಳುತ್ತದೆ ಎಂದರ್ಥ’’

ಆರೋಗ್ಯ ಸೇತು ಅಂತಹ ಒಂದು ಪ್ರಯತ್ನವೆಂಬ ಅನುಮಾನವಿದೆ. ಅದರಲ್ಲೂ ಬಲಪಂಥೀಯ ರಾಜಕೀಯ ದ್ವೇಷ ಸಾಧನೆ ಹೆಚ್ಚುತ್ತಿರುವ  ಈ ದೇಶದಲ್ಲಿ ಪ್ರಜೆಗಳ ನಿರೀಕ್ಷಣೆ ಪ್ರಭುತ್ವಕ್ಕೆ ಅನಿವಾರ್ಯವಾಗಿದೆ. ಪ್ರಜೆಗಳ ವಿಷಯ, ಭಾವನೆಗಳನ್ನು ಟ್ರಾಕ್ ಮಾಡುವ ಮೂಲಕ ನಿಮ್ಮ ಚಿಂತನೆಯ ಮೇಲೂ ಅವರಿಗೆ ಗುರಿ ಇಡಲು ಸಾಧ್ಯ.  ಪ್ರಜೆಗಳ ಬಯೋಮೆಟ್ರಿಕ್ ಡಾಟಾ ಮೇಲೆ ತಿಳಿಸಿದಂತಹ ಒಂದು ಡೀಪ್ ಸ್ಟೇಟ್  ಗುಂಪಿಗೆ ಲಭ್ಯವಾದರೆ ದೇಶ ಒಂದು ಪೊಲೀಸ್ ಸ್ಟೇಟ್‌ಗಿಂತಲೂ ಭಯಾನಕವಾಗಬಹುದು. ಆದುದರಿಂದ ಆ್ಯಪ್ ಭಾವಿಸಿದಷ್ಟು ಪ್ರಾಮಾಣಿಕವಲ್ಲ.

Join Whatsapp