ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿರುವ ಮಣ್ಣಗುಡ್ಡೆ ವಾರ್ಡಿನ ಲೇಡಿಹಿಲ್ ಎಂಬಲ್ಲಿನ ಲೇಡಿಹಿಲ್ ವೃತ್ತವನ್ನು ನವೀಕರಿಸಿ ಇದೀಗ ಅದರ ಹೆಸರು ಬದಲಾವಣೆಗೆ ಮುಂದಾಗಿರುವ ವಿಚಾರಕ್ಕೆ ಎಸ್.ಡಿ.ಪಿ.ಐ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.
ನೂತನವಾಗಿ ನವೀಕರಿಸಲಾದ ಲೇಡಿಹಿಲ್ ವೃತ್ತಕ್ಕೆ ಇದೀಗ ‘ಬ್ರಹ್ಮಶ್ರೀ ನಾರಾಯಣ ಗುರು’ ವೃತ್ತ ಎಂದು ನಾಮಕರಣ ಮಾಡುವ ಬಗ್ಗೆಗಿನ ವಿಚಾರ ಪಕ್ಷದ ಗಮನಕ್ಕೆ ಬಂದಿದ್ದು, ಈ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ವಿರೋಧವಿದೆ. ಯಾಕೆಂದರೆ, ಲೇಡಿಹಿಲ್ ವೃತ್ತಕ್ಕೆ ಚಾರಿತ್ರಿಕ ಮಹತ್ವವಿದೆ. ದಿ|ಅಪೋಸ್ತಲಿಕ್ ಕಾರ್ಮೆಲ್ ಸಿಸ್ಟರ್ಸ್ ಪ್ರಾನ್ಸ್ ನಿಂದ ಮಂಗಳೂರಿಗೆ 1885 ರಲ್ಲಿ ಅಂದಿನ ಮದರ್ ಜನರಲ್ ಮಾರಿ ದೇನ್ ಆಂಜ್ ಮಂಗಳೂರಿಗೆ ಬಂದಾಗ ಲೇಡಿಹಿಲ್ ಪ್ರದೇಶದಲ್ಲಿನ ಹೆಣ್ಣು ಮಕ್ಕಳ ವಿದ್ಯಾಭ್ಯಾಸಕ್ಕೆ ವಿದ್ಯಾಸಂಸ್ಥೆ ತೆರೆಯಬೇಕೆಂದು ಸ್ಥಳೀಯರು ಒತ್ತಾಯಪಡಿಸಿದರು. ಆ ಸಂದರ್ಭದಲ್ಲಿ ಗುಡ್ಡ ಪ್ರದೇಶವಾಗಿದ್ದ ಆ ಸ್ಥಳದಲ್ಲಿ ಸಾರ್ವಜನಿಕರ ಒತ್ತಾಯದ ಮೇರೆಗೆ ಆ ಪ್ರದೇಶದಲ್ಲಿ ಹೆಣ್ಣು ಮಕ್ಕಳಿಗಾಗಿ ಶಾಲೆಯನ್ನು ತೆರೆಯಲಾಯಿತು. ಅದರ ಗೌರವಾರ್ಥವಾಗಿ ಆ ಸ್ಥಳಕ್ಕೆ ಲೇಡಿಹಿಲ್ ಎಂಬ ಹೆಸರು ಬಂದಿದೆ. ಈ ಹೆಸರನ್ನು ನೂರಾರು ವರ್ಷಗಳಿಂದ ಕರೆಯಲಾಗುತ್ತಿದೆ. ಹೆಣ್ಣು ಮಕ್ಕಳ ವಿದ್ಯಾಭ್ಯಾಸದ ಪ್ರತೀಕವಾದ ಮತ್ತು ಸಾಕ್ಷರತೆಯ ಕೇಂದ್ರ ಬಿಂದುವಾದ ಈ ಹೆಸರನ್ನು ಬದಲಾಯಿಸುವುದು ಅವರಿಗೆ ಮಾಡುವ ಅಪಚಾರವಾಗಿದೆ.
ಹೆಸರು ಬದಲಾವಣೆಯ ವಿಚಾರಕ್ಕೆ ಸಂಬಂಧಿಸಿ ಆಕ್ಷೇಪ ವ್ಯಕ್ತಪಡಿಸಿ, ನಮ್ಮ ಪಕ್ಷದ ಕಾರ್ಪೊರೇಟರ್ ಗಳಾದ ಮುನೀಬ್ ಬೆಂಗ್ರೆ ಮತ್ತು ಶಂಶಾದ್ ಅಬೂಬಕರ್ ಈಗಾಗಲೇ ಮಂ.ಮಹಾ ನಗರ ಪಾಲಿಕೆಯ ಆಯುಕ್ತರಿಗೆ ಮತ್ತು ಮಹಾ ಪೌರರಿಗೆ ಆಕ್ಷೇಪಣಾ ಪತ್ರವನ್ನು ಸಲ್ಲಿಸಿದ್ದಾರೆ.
ಆದುದರಿಂದ ಲೇಡಿಹಿಲ್ ನಲ್ಲಿರುವ ವೃತ್ತವನ್ನು “ಲೇಡಿಹಿಲ್ ವೃತ್ತ’’ ಎಂದೇ ಮುಂದುವರಿಸಬೇಕು ಎಂದು ಎಸ್ ಡಿಪಿಐ ಜಿಲ್ಲಾಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಪ್ರಕಟಣೆಯಲ್ಲಿ ಆಗ್ರಹಿಸಿದ್ದಾರೆ.