ಜಿನೆವಾ : ಕೋವಿಡ್ ಸೋಂಕಿನ ಎರಡನೇ ಅಲೆಯಿಂದ ವಿವಿಧ ದೇಶಗಳು ಚೇತರಿಸಿಕೊಳ್ಳುತ್ತಿರುವ ನಡುವೆಯೇ, ಕೋವಿಡ್ ನ ಹೊಸ ರೂಪಾಂತರಿ ತಳಿ ಪತ್ತೆಯಾಗಿರುವ ಆತಂಕಕಾರಿ ಸುದ್ದಿಯನ್ನು ವಿಶ್ವ ಆರೋಗ್ಯ ಸಂಸ್ಥೆ ನೀಡಿದೆ. ಜಗತ್ತಿನಾದ್ಯಂತ ಕೋವಿಡ್ ಮೂರನೇ ಅಲೆ ವಿಸ್ತರಿಸುತ್ತಿದ್ದು, 29 ರಾಷ್ಟ್ರಗಳಲ್ಲಿ ಹೊಸ ರೂಪಾಂತರಿ ವೈರಸ್ ʼಲಾಂಡಾʼ ಪತ್ತೆಯಾಗಿದೆ ಎಂದು ಅದು ತಿಳಿಸಿದೆ.
ದಕ್ಷಿಣ ಅಮೆರಿಕದ ಪೆರುವಿನಲ್ಲಿ ʼಲಾಂಡಾʼ ರೂಪಾಂತರಿ ಮೊದಲ ಬಾರಿ ಪತ್ತೆಯಾಗಿದೆ. ಇದು ಹರಡುವಿಕೆ ಹೆಚ್ಚಾಗುವ ಸಾಧ್ಯತೆಯಿದೆ. ಈ ಬಗ್ಗೆ ನಿಗಾವಹಿಸಬೇಕಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆ ನೀಡಿದೆ.
2021, ಏಪ್ರಿಲ್ ನಿಂದ ಪೆರುವಿನಲ್ಲಿ ದಾಖಲಾದ ಕೋವಿಡ್ ಪ್ರಕರಣಗಳಲ್ಲಿ ಶೇ.81ರಷ್ಟು ಈ ರೂಪಾಂತರಿ ತಳಿಯ ಮೂಲಕ ಹರಡಿದೆ. ಈ ಹಿಂದಿನ ರೂಪಾಂತರಿಗಳಿಗೆ ಹರಡುವಿಕೆಯ ಶಕ್ತಿ ಈ ರೂಪಾಂತರಿ ತಳಿಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ.