ಅಧಿಕಾರಿಗಳ ಸೋಗಿನಲ್ಲಿ ಹಫ್ತಾ ವಸೂಲಿಗಿಳಿದ ದೀಪಕ್ ರಾಜ್ ವಿರುದ್ಧ ಕಠಿಣ ಕ್ರಮಕ್ಕೆ SDPI ಆಗ್ರಹ

Prasthutha|

ಉಳ್ಳಾಲ : ನಗರ ಪಾಲಿಕೆ ಅಧಿಕಾರಿಗಳ ಹೆಸರಲ್ಲಿ ನಕಲಿ ಅಧಿಕಾರಿಯಾಗಿ ಹಫ್ತಾ ವಸೂಲಿಗಿಳಿದ ದೀಪಕ್ ರಾಜ್ ಕುವೆಲ್ಲೊರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕೆಂದು SDPI ಆಗ್ರಹಿಸಿದೆ.

- Advertisement -

ಈ ಕುರಿತು ಪ್ರತಿಕ್ರಿಯಿಸಿರುವ SDPI ಉಳ್ಳಾಲ ವಿಧಾನಸಭಾ ಕ್ಷೇತ್ರದ ಅಧ್ಯಕ್ಷ ಅಬ್ಬಾಸ್ ಕಿನ್ಯ, ತೊಕೊಟ್ಟು ಸಮೀಪದ ಬಬ್ಬುಕಟ್ಟೆ ನಿವಾಸಿಯಾದ ದೀಪಕ್ ರಾಜ್ ಕುವೆಲ್ಲೊ ಎಂಬ ವ್ಯಕ್ತಿಯು ಆಧುನಿಕ್ ಹೂಮನ್ ರೈಟ್ಸ್ ಆರ್ಗನೈಷೇಶನ್ ಎಂಬ ಹೆಸರಿನಲ್ಲಿ ತಂಡ ಕಟ್ಟಿಕೊಂಡು ನಕಲಿ ಮಾನವ ಹಕ್ಕುಗಳ ಸಂಘಟನೆ ಮಾಡಿ ಉದ್ಯಮಿಗಳು, ಬಿಲ್ಡರ್ ಮತ್ತು ಸಮಾಜದ ಪ್ರತಿಷ್ಠಿತ ವ್ಯಕ್ತಿಗಳನ್ನು ಬೆದರಿಸಿ ಹಫ್ತಾ ವಸೂಲಿ ಮಾಡುತ್ತಿರುವುದು ಬೆಳಕಿಗೆ ಬಂದಿದ್ದು, ಇದರ ಭಾಗವಾಗಿ ಮಂಗಳೂರಿನ ಹೆಸರಾಂತ ಸಾಗರ್ ವೆಡ್ಡಿಂಗ್ ಮಳಿಗೆ ಮಾಲಕರನ್ನು ನಗರ ಪಾಲಿಕೆ  ಅಧಿಕಾರಿಗಳ ಸೋಗಿನಲ್ಲಿ ಬೋಗಸ್ ಮಾಧ್ಯಮದವರೊಂದಿಗೆ ತೆರಳಿ ಬೆದರಿಸಿ ಹಫ್ತಾ ವಸೂಲಿಗೆ ಒತ್ತಾಯಿಸಿರುತ್ತಿರುವಾಗ ಪೊಲೀಸ್ ಬಲೆಗೆ ಬಿದ್ದು ಅರೆಸ್ಟ್ ಆಗಿ ಕೆಲವೇ ಘಂಟೆಗಳಲ್ಲಿ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ. ಈ ಹಿಂದೆಯೂ ಕೂಡ ದೀಪಕ್ ರಾಜ್ ಹಲವು ಬಿಲ್ಡರ್, ಫಿಶ್ ಮೀಲ್ ಮಾಲಕರು ಸೇರಿದಂತೆ ಹಲವಾರು ಗಣ್ಯವ್ಯಕ್ತಿಗಳಿಂದ ಹಫ್ತಾಕ್ಕಾಗಿ ಒತ್ತಾಯಿಸಿ ತೊಂದರೆ ನೀಡಿದ್ದ ಗಂಭೀರ ಆರೋಪವಿದೆ. ಮಾತ್ರವಲ್ಲದೇ ಮಾನವಹಕ್ಕು ಆಯೋಗದ ಹೆಸರಿನಲ್ಲಿ ಹಫ್ತಾ ವಸೂಲು ದಂಧೆಗಿಳಿದಿರುವ ಈ ಕ್ರಮವು ಮಾನವಹಕ್ಕುಗಳ ವ್ಯವಸ್ಥೆಗೆ ಮಾಡಿರುವ ಅಪಚಾರವಾಗಿದೆ. ಅದಲ್ಲದೆ ಮಂಗಳೂರು ಮಹಾನಗರ ಪಾಲಿಕೆಯ ಅಧಿಕಾರಿಗಳ ಹೆಸರನ್ನು ದುರ್ಬಳಕೆ ಮಾಡಿದ ಬಗ್ಗೆ ಕೂಡ ನಗರಪಾಲಿಕೆಯ ಕಮಿಷನರ್ ಪ್ರತ್ಯೇಕ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.

ಪೊಲೀಸ್ ಕಮಿಷನರ್ ಶಶಿಕುಮಾರ್ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ದೀಪಕ್ ರಾಜ್ ರನ್ನು ತಕ್ಷಣ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳುವುದರ ಜೊತೆಗೆ ಇದರ ಹಿಂದಿರುವ ತಂಡವನ್ನು ಬಯಲಿಗೆಳೆಯಬೇಕೆಂದು ಅವರು ಒತ್ತಾಯಿಸಿದ್ದಾರೆ.

Join Whatsapp