ಕಳೆದ ತಿಂಗಳು ಕೋವಿಡ್ ಪಾಸಿಟಿವ್ ಆಗಿ ಚಿಕಿತ್ಸೆ ಪಡೆದು ನೆಗೆಟಿವ್ ಆಗಿದ್ದ ‘ಫ್ಲೈಯಿಂಗ್ ಸಿಖ್’ ಖ್ಯಾತಿಯ ಮಿಲ್ಖಾ ಸಿಂಗ್ ನಿಧನರಾಗಿದ್ದಾರೆ. ಅವರು ಜ್ವರಪೀಡಿತರಾಗಿ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಅವರು ಅನಿರೀಕ್ಷಿತವಾಗಿ ಜ್ವರ ಪೀಡಿತರಾಗಿದ್ದು, ಈ ವೇಳೆ ಆಮ್ಲಜನಕ ಮಟ್ಟದಲ್ಲೂ ಕುಸಿತ ಕಂಡು ಬಂದಿತ್ತು. 91 ರ ಹರೆಯದ ಮಿಲ್ಖಾ ಸಿಂಗ್ ರನ್ನು ತೀವ್ರ ನಿಗಾಘಟಕಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆಂದು ತಿಳಿದು ಬಂದಿದೆ. ಅವರ ಪತ್ನಿ ಇತ್ತೀಚೆಗೆ ಕೋವಿಡ್ ನಿಂದ ಮೃತಪಟ್ಟಿದ್ದರು.
ಶುಕ್ರವಾರ ರಾತ್ರಿ 11:30ಕ್ಕೆ ಮಿಲ್ಖಾ ಸಿಂಗ್ ಮೃತಪಟ್ಟಿದ್ದಾಗಿ ಅವರ ಕುಟುಂಬ ತಿಳಿಸಿದೆ. ಮಿಲ್ಖಾ ಸಿಂಗ್ ಒಲಿಂಪಿಕ್ಸ್ ನಲ್ಲಿ ಮೂರು ಬಾರಿ ಭಾರತವನ್ನು ಪ್ರತಿನಿಧಿಸಿದ್ದರು.
1960ರ ರೋಮ್ ಒಲಿಂಪಿಕ್ಸ್ನ 400 ಮೀಟರ್ಸ್ ಓಟದಲ್ಲಿ ನಾಲ್ಕನೇ ಸ್ಥಾನ ಗಳಿದ್ದ ಮಿಲ್ಖಾಸಿಂಗ್, 1956 ಮತ್ತು 1964ರ ಒಲಿಂಪಿಕ್ಸ್ನಲ್ಲಿ ಭಾರತವನ್ನ ಪ್ರತಿನಿಧಿಸಿದ್ದರು. 1958ರ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಚಿನ್ನದ ಪದಕ ಗೆದ್ದಿದ್ದರು. ಏಷ್ಯನ್ ಗೇಮ್ಸ್ನಲ್ಲಿ 4 ಬಾರಿ ಸ್ವರ್ಣ ಪದಕ ಗೆದ್ದ ಹೆಗ್ಗಳಿಕೆ ಅವರದ್ದು.
ಒಲಿಂಪಿಕ್ಸ್ಗೆ ಅಥ್ಲೆಟಿಕ್ಸ್ ಕಿರೀಟವಿದ್ದಂತೆ. ಎಲ್ಲ ದೇಶದ ಅಥ್ಲೀಟ್ಗಳು ಸ್ಪರ್ಧಿಸುತ್ತಾರೆ. ಈ ವಿಭಾಗದಲ್ಲಿ ಭಾರತಕ್ಕೊಂದು ಪದಕ ಬರಲೇಬೇಕು ಎಂಬುದು ಮಿಲ್ಖಾ ಸಿಂಗ್ರ ಕೊನೆಯ ಆಸೆ. ನಾನು ಸಾಯುವುದರೊಳಗೆ ಭಾರತದ ಅಥ್ಲೀಟ್ ಒಲಿಂಪಿಕ್ ಪದಕ ಗೆಲ್ಲುವುದನ್ನು ಕಣ್ತುಂಬಿಕೊಳ್ಳಬೇಕು.
ಇದೇ ನನ್ನ ಕೊನೆಯ ಆಸೆ ಎಂದು ಹಲವು ಸಂದರ್ಶನಗಳಲ್ಲಿ ಮಿಲ್ಖಾಸಿಂಗ್ ಹೇಳಿದ್ದರು. 1960ರ ರೋಮ್ ಒಲಿಂಪಿಕ್ಸ್ ನಲ್ಲಿ ಫೈನಲ್ ತಲುಪಿದ್ದ ಮಿಲ್ಖಾಸಿಂಗ್, ಕೊಂಚದರಲ್ಲಿ ಪದಕ ತಪ್ಪಿಸಿಕೊಂಡಿದ್ದರು. ಆದರೆ ಮಿಲ್ಖಾಸಿಂಗ್ ರ ಕೊನೇ ಆಸೆ ಈಡೇರಲೇ ಇಲ್ಲ.