ಬೆಂಗಳೂರು: ನಾಯಕತ್ವ ಬದಲಾವಣೆ ವಿಚಾರವಾಗಿ ರಾಜ್ಯಕ್ಕೆ ಆಗಮಿಸಿಲ್ಲ ಎನ್ನುತ್ತಾ ರಾಜಧಾನಿಗೆ ಬಂದಿಳಿದ ಬಿಜೆಪಿ ರಾಜ್ಯ ಉಸ್ತುವಾರಿ ಮುಂದೆ ಇದೀಗ ಹಲವು ಸಚಿವರು ನಾಯಕತ್ವ ಬದಲಾವಣೆ ಬಗ್ಗೆ ಅಭಿಪ್ರಾಯ ತಿಳಿಸಿದ್ದಾರೆ. ಅದರಲ್ಲೂ ‘ಹಳ್ಳಿ ಹಕ್ಕಿ’ ಹೆಚ್. ವಿಶ್ವನಾಥ್, ನಾಯಕತ್ವ ಬದಲಾವಣೆ ಸೂಕ್ತ ಎನ್ನುತ್ತಲೇ ಮೂವರು ನಾಯಕರ ಹೆಸರನ್ನೂ ಸೂಚಿಸಿದ್ದಾರೆ.
ಈ ಕುರಿತು ಅರುಣ್ ಸಿಂಗ್ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ವಿಧಾನ ಪರಿಷತ್ ಸದಸ್ಯ ಹೆಚ್. ವಿಶ್ವನಾಥ್, ಬೇಕಿದ್ದರೆ ಇನ್ನೋರ್ವ ಪಂಚಮಸಾಲಿ ವೀರಶೈವರನ್ನೇ ಆಯ್ಕೆ ಮಾಡಲಿ ಎಂದಿದ್ದಾರೆ. ಅಲ್ಲದೇ ಪಂಚಮಸಾಲಿ ವೀರಶೈವ ಸಮುದಾಯದಲ್ಲಿ ಗುರುತಿಸಿಕೊಂಡ ಮೂವರು ನಾಯಕರ ಹೆಸರನ್ನೂ ಸೂಚಿಸಿದ್ದಾರೆ. ಹೆಚ್. ವಿಶ್ವನಾಥ್ ಆಯ್ಕೆ ಪ್ರಕಾರ, ಸಚಿವ ಮುರುಗೇಶ್ ನಿರಾಣಿ, ಶಾಸಕರಾದ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಅರವಿಂದ ಬೆಲ್ಲದ್ ಅವರ ಹೆಸರನ್ನ ಸೂಚಿಸಿದ್ದಾರೆ. ಯಂಗ್ ಸ್ಟಾರ್ ಬೇಕಿದ್ರೆ ಬೆಲ್ಲದ್ ಬೆಸ್ಟ್ ಎಂದಿರುವ ವಿಶ್ವನಾಥ್, ಸ್ವಲ್ಪ ತಿಳುವಳಿಕೆ ಬಗ್ಗೆ ನೋಡೋದಾದ್ರೆ ಮುರುಗೇಶ್ ನಿರಾಣಿ ಆಯ್ಕೆ ಸೂಕ್ತ ಎಂದಿದ್ದಾರೆ.
ಅದಲ್ಲದೇ, ಸಿಎಂ ಬದಲಾವಣೆ ಬಗ್ಗೆ ಯಾವುದೇ ಮಠಾಧೀಶರು ಮಾತನಾಡಬಾರದು, ಯಾಕೆಂದೆ ಯಡಿಯೂರಪ್ಪ ಸರಕಾರವನ್ನ ಆಯ್ಕೆ ಮಾಡಿದ್ದು ಯಾವುದೋ ಒಂದು ಜಾತಿಗೆ ಸೀಮಿತರಾದವರಲ್ಲ, ಬದಲಿಗೆ ಇಡೀ ರಾಜ್ಯದ ಜನತೆ ಎಂದರು.