ಬೆಂಗಳೂರು: ಡಿಜೆ ಹಳ್ಳಿ ಹಾಗೂ ಕೆಜಿ ಹಳ್ಳಿ ಗಲಭೆ ಪ್ರಕರಣ ಸಂಬಂಧ ಜೈಲು ಸೇರಿದ್ದ 115 ಮಂದಿ ಆರೋಪಿಗಳಿಗೆ ರಾಜ್ಯ ಹೈಕೋರ್ಟ್ ಜಾಮೀನು ಮಂಜೂರು ಮಾಡಿದೆ. ಜಾಮೀನು ಕೋರಿ ಮುಝಮ್ಮಿಲ್ ಪಾಷಾ ಸಲ್ಲಿಸಿದ್ದ ಅರ್ಜಿಯನ್ನ ವಿಚಾರಣೆ ಕೈಗೆತ್ತಿಕೊಂಡ ನ್ಯಾ.ವಿಶ್ವನಾಥ ಶೆಟ್ಟಿ ಅವರು ಜಾಮೀನು ಮಂಜೂರು ಮಾಡಿದರು.
ಪ್ರಕರಣದ ತನಿಖೆಗೆ ಕೈಗೆತ್ತಿಕೊಂಡಿದ್ದ NIA ಹೆಚ್ಚುವರಿ 90 ದಿನಗಳ ಸಮಯಾವಕಾಶ ಪಡೆದಿತ್ತು. ಆದರೆ ಆರೋಪಿಗಳಿಗೆ ಈ ಮಾಹಿತಿಯನ್ನ ನೀಡಿರಲಿಲ್ಲ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ತಿಳಿಸಿದ್ದಾರೆ. ಆದರೆ, ನಿಗದಿತ ಸಮಯದಲ್ಲಿ NIA ಕೋರ್ಟ್ ಗೆ ತನಿಖಾ ವರದಿಯನ್ನ ಸಲ್ಲಿಸಲು ತನಿಖಾ ಸಂಸ್ಥೆಗೆ ಸಾಧ್ಯವಾಗಿಲ್ಲ ಎನ್ನಲಾಗಿದೆ.
ಇದನ್ನೆಲ್ಲ ಪರಿಗಣಿಸಿದ ರಾಜ್ಯ ಉಚ್ಛ ನ್ಯಾಯಾಲಯವು ಆರೋಪಿಗಳಿಗೆ ಜಾಮೀನು ನೀಡಬಹುದು ಎಂದು ಹೇಳಿತು. ಆರೊಪಿಗಳಿಗೆ ತಲಾ 2 ಲಕ್ಷ ರೂ. ಬಾಂಡ್, ಇಬ್ಬರ ಶ್ಯೂರಿಟಿ ಹಾಗೂ ಇನ್ನಿತರ ಷರತ್ತುಗಳ ಮೇಲೆ ಹೈಕೋರ್ಟ್ ಜಾಮೀನು ನೀಡಿದೆ.
ಕಳೆದ ವರುಷದ ಆಗಸ್ಟ್ ತಿಂಗಳ 11 ರಂದು ಪುಲಕೇಶಿನಗರ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಸೋದರ ಅಳಿಯ ನವೀನ್ ಎಂಬಾತ ಜಾಲತಾಣದಲ್ಲಿ ಪ್ರವಾದಿ ಮುಹಮ್ಮದ್ ಅವರ ಕುರಿತು ಅವಹೇಳನಕಾರಿ ಪೋಸ್ಟ್ ಹಾಕಿದ್ದ ಸಂಬಂಧ ನಡೆದ ಪ್ರತಿಭಟನೆ ವೇಳೆ ಹಿಂಸಾಚಾರಕ್ಕೆ ತಿರುಗಿತ್ತು. ಘಟನೆ ಸಂಬಂಧ ತನಿಖೆ ಕೈಗೆತ್ತಿಕೊಂಡಿದ್ದ NIA ಡಿಜೆ ಹಳ್ಳಿ ವ್ಯಾಪ್ತಿಯ 109 ಹಾಗೂ ಕೆಜಿ ಹಳ್ಳಿ ವ್ಯಾಪ್ತಿಯಲ್ಲಿ ನಡೆದ ಗಲಭೆ ಸಂಬಂಧ 138 ಮಂದಿ, ಹೀಗೆ ಒಟ್ಟು 247 ಮಂದಿ ಮೇಲೆ NIA ಚಾರ್ಜ್ ಶೀಟ್ ದಾಖಲಿಸಿತ್ತು.