ಶಿವಮೊಗ್ಗ: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಸ್ವಕ್ಷೇತ್ರ ಶಿಕಾರಿಪುರದ ಮಾಯತಮ್ಮನ ಮುಚ್ಚಿಡಿ ಗ್ರಾಮದ ದಲಿತ ಕುಟುಂಬಗಳು ಕೃಷಿ ಭೂಮಿಯಿಂದ ಒಕ್ಕಲೆಬ್ಬಿಸುವ ತಾಲ್ಲೂಕು ಆಡಳಿತದ ನಿರ್ದಯಿ ಕ್ರಮದ ವಿರುದ್ದ ಸಾಮೂಹಿಕ ಆತ್ಮಹತ್ಯೆಗೆ ಮುಂದಾದ ಘಟನೆ ಇಂದು(ಜೂ.17) ನಡೆದಿದೆ.
ದಲಿತ ಕುಟುಂಬಗಳ ಸಾಮೂಹಿಕ ಆತ್ಮಹತ್ಯೆ ಬೆದರಿಕೆಗೆ ಮುಂದಾದ ಹಿನ್ನಲೆಯಲ್ಲಿ ಬೆದರಿದ ತಹಶೀಲ್ದಾರ್, ಪೊಲೀಸರು ಭೂಮಿ ವಶಪಡಿಸಿಕೊಳ್ಳುವ ಪ್ರಯತ್ನ ನಿಲ್ಲಿಸಿ ಹಿಂತಿರುಗುವಂತಾಯಿತು.
ಇಂದು ಮಧ್ಯಾಹ್ನ ತಹಶೀಲ್ದಾರ್ ಕವಿರಾಜ್ ಪೊಲೀಸರೊಂದಿಗೆ ಬಂದು ದಲಿತ ಕುಟುಂಬಗಳು ಬಿತ್ತನೆ ಮಾಡಿ ಮೊಳಕೆ ಬಂದಿದ್ದ ಜಮೀನಿನ ಕಾಳು ಬೆಳೆಯನ್ನು ಟ್ರ್ಯಾಕ್ಟರ್ ಮೂಲಕ ನಾಶಗೊಳಿಸಿ ಭೂಮಿ ವಶಪಡಿಸಿಕೊಳ್ಳಲು ಮುಂದಾದರು.
ಇದನ್ನು ಪ್ರತಿರೋಧಿಸಿದ ದಲಿತ ಕುಟುಂಬಗಳು ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಧರಣಿಕುಳಿತವು. ಇದರಿಂದ ಕಂಗಾಲಾದ ತಾಹಶೀಲ್ದಾರರು ಭೂಮಿ ತೆರವಿಗೆ ಒಂದು ವಾರ ಗಡುವು ಕೊಟ್ಟು ಹಿಂತಿರುಗಿದರು.
ಶಿಕಾರಿಪುರ ತಾಲೂಕ್ ಮಾಯ ತಮ್ಮನ ಮುಚ್ಚಿಡಿ ಗ್ರಾಮದ ದಲಿತರ 19 ಕುಟುಂಬಗಳು ಕಳೆದ 40 ವರ್ಷಗಳಿಂದ ಸರ್ವೆ ನಂಬರ್ 128 ರಲ್ಲಿ ಬಗರ್ ಹುಕುಂ ಸಾಗುವಳಿ ಮಾಡಿಕೊಂಡು ಬರುತ್ತಿದ್ದು 1991 ರಲ್ಲಿ 53 ಅರ್ಜಿ ನೀಡಿದ್ದು ಯಾವ ಪಕ್ಷದ ಆಡಳಿತದಲ್ಲೂ ಈ ಕುಟುಂಬಗಳಿಗೆ ಭೂ ಹಕ್ಕು ದಕ್ಕಲಿಲ್ಲ.
ಪ್ರಬಲ ಜಾತಿಯ ಪ್ರಾಬಲ್ಯವಿರುವ ಈ ಗ್ರಾಮದಲ್ಲಿ ದಲಿತರಿಗೆ ಬಗರ್ ಹುಕುಂ ಸಾಗುವಳಿ ಹಕ್ಕಿಗಾಗಿ ನಿರಂತರವಾಗಿ ಹೋರಾಡುತ್ತಾ ಬಂದಿದ್ದರೂ ದಲಿತರು ಭೂ ಒಡೆಯರಾದರೆ ತಮ್ಮ ಹೊಲ- ಮನೆಗೆ ಕೂಲಿಕೆಲಸಗಾರರು ಇಲ್ಲದಂತಾಗುತ್ತಾರೆ ಎಂಬ ಕಾರಣಕ್ಕೆ ದಲಿತರಿಗೆ ಸಾಗುವಳಿ ಚೀಟಿನೀಡಲು ಅಡ್ಡಿಪಡಿಸಲಾಗುತ್ತಿದೆ ಎಂಬ ಆರೋಪಗಳು ಇವೆ. ಇದೇ ಸರ್ವೆ ನಂಬರ್ ನಲ್ಲಿ ಬಲಾಢ್ಯ ಜಾತಿಗಳವರಿಗೆ ಹತ್ತಾರು ಎಕರೆ ಭೂಮಿ ಮಂಜೂರು ಮಾಡಿರುವಾಗ ನಮಗೂ ಕನಿಷ್ಟ ಒಂದು ಎಕರೆ ಭೂಮಿಯನ್ನಾದರೂ ಮಂಜೂರು ಮಾಡಿ ಎಂದು ಪರಿಯಾಗಿ ಬೇಡಿಕೊಳ್ಳುತ್ತಿರುವ ದಲಿತ ಕುಟುಂಬಗಳ ಬೇಡಿಕೆ ಅರಣ್ಯ ರೋಧನವಾಗಿದೆ.
ಭೂಮಿಯ ಹಕ್ಕು ಕೇಳುತ್ತಿರುವುದನ್ನು ಸಹಿಸದ ಗ್ರಾಮದ ಲಿಂಗಾಯಿತರು ನಮ್ಮ ಮೇಲೆ ನಿರಂತರ ಹಲ್ಲೆ ನಡೆಸುತ್ತಾ ಬಂದಿದ್ದಾರೆ. ಈ ಹಿಂದೆ ಸಂಸದ ಬಿ ವೈ ರಾಘವೇಂದ್ರ ಅವರ ಸೂಚನೆ ಮೇರೆಗೆ ದಲಿತ ಕುಟುಂಬಗಳಿಗೆ ತಲಾ ಒಂದು ಎಕರೆ ಜಮೀನು ಕೊಡುವ ಪಂಚಾಯ್ತಿ ನಡೆದಿದ್ದರೂ ಅದನ್ನು ಗ್ರಾಮಸ್ಥರು ಪಾಲಿಸುತ್ತಿಲ್ಲ. ಬದಲಿಗೆ ಬಹಿಷ್ಕಾರ,ದಂಡ ಹಾಕಲಾಗಿತ್ತು.
ಒಂದು ವಾರದಲ್ಲಿ ಸಂಸದರು ಬಂದ ಮೇಲೆ ಚರ್ಚೆ ಮಾಡುವ ಭರವಸೆಯನ್ನು ತಹಶೀಲ್ದಾರರು ನೀಡಿದ್ದಾರೆ. ನಮಗೆ ಭೂಮಿ ಮಂಜೂರು ಮಾಡದಿದ್ದರೆ ಸಾಮೂಹಿಕವಾಗಿ ಆತ್ಮಹತ್ಯೆ ಮಾಡಿಕೊಳ್ಳುತ್ತೇವೆ. ಎಷ್ಟು ದಿನ ಅಂತ ಈ ದೌರ್ಜನ್ಯವನ್ನು ಸಹಿಸಿಕೊಳ್ಳೋದು ಎಂದು ಗ್ರಾಮದ ಸಂತ್ರಸ್ಥ ವಿರೇಶ್ ನೋವು ತೋಡಿಕೊಂಡಿದ್ದಾರೆ.