ಗಾಜಿಯಾಬಾದ್ ಜಿಲ್ಲೆಯ ವೃದ್ಧರೊಬ್ಬರ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಜಿಯಾಬಾದ್ ಪೊಲೀಸರು ಟ್ವಿಟರ್ ಸಂಸ್ಥೆ, ಕಾಂಗ್ರೆಸ್ ಮುಖಂಡರು ಮತ್ತು ಪತ್ರಕರ್ತರಾದ ಮುಹಮ್ಮದ್ ಝುಬೈರ್ ಮತ್ತು ರಾಣಾ ಅಯೂಬ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.
ಐಪಿಸಿ ಸೆಕ್ಷನ್ಗಳು 153 (ಗಲಭೆಗೆ ಪ್ರಚೋದನೆ), 153 ಎ (ವಿವಿಧ ಗುಂಪುಗಳ ನಡುವೆ ದ್ವೇಷ ಉತ್ತೇಜನ), 295 ಎ (ಧಾರ್ಮಿಕ ಭಾವನೆಗಳನ್ನು ಕೆರಳಿಸುವ ಉದ್ದೇಶ), 505 (ಕಿಡಿಗೇಡಿತನ), 120 ಬಿ (ಕ್ರಿಮಿನಲ್ ಪಿತೂರಿ) ಮತ್ತು 34 (ಸಮಾನ ಉದ್ದೇಶ) ವಿರುದ್ಧ ಕ್ರಮ ಕೈಗೊಂಡಿದ್ದಾರೆ.
ಝುಬೈರ್ ಮತ್ತು ಅಯ್ಯೂಬ್ ಹೊರತುಪಡಿಸಿ, ಕಾಂಗ್ರೆಸ್ಸಿನ ಸಲ್ಮಾನ್ ನಿಝಾಮಿ, ಶಮಾ ಮುಹಮ್ಮದ್ ಮತ್ತು ಮಸ್ಕೂರ್ ಉಸ್ಮಾನಿ, ಬರಹಗಾರ ಸಬಾ ನಖ್ವಿ, ಆನ್ಲೈನ್ ಮಾಧ್ಯಮ ಸಂಸ್ಥೆ ‘ದಿ ವೈರ್, ಮತ್ತು ಟ್ವಿಟರ್ ಸಂಸ್ಥೆಗಳ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
ವೃದ್ಧ ಅಬ್ದುಲ್ ಸಮದ್ ಸೈಫಿಯ ಮೇಲೆ ಹಲ್ಲೆ ನಡೆಸಿದ ಆರೋಪದ ಮೇಲೆ ಈವರೆಗೆ ಮೂವರನ್ನು ಬಂಧಿಸಲಾಗಿದೆ. ಆರೋಪಿಗಳು ತನ್ನನ್ನು ಆಟೋದಲ್ಲಿ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ತೀವ್ರವಾಗಿ ಥಳಿಸಿ, ಜೈಶ್ರೀರಾಮ್ ಘೋಷಣೆ ಕೂಗುವಂತೆ ಒತ್ತಾಯಿಸಿದರು ಎಂದು ಸಮದ್ ಸೈಫಿ ಆರೋಪಿಸಿದ್ದರು.
ಆದರೆ ಪೊಲೀಸರ ಹೇಳಿಕೆ ಭಿನ್ನವಾಗಿದೆ. ವೃದ್ಧ ಸಮದ್ ಅವರು ತಾಯಿತವನ್ನು ಆರೋಪಿಗಳಿಗೆ ಮಾರಾಟ ಮಾಡಿದ್ದರು, ಅದು ಕೆಲಸ ಮಾಡಿಲ್ಲ. ಆದ್ದರಿಂದ ಆರೋಪಿಗಳು ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ತಿಳಿಸಿದ್ದಾರೆ.
ಮಂಗಳವಾರ ರಾತ್ರಿ ಟ್ವಿಟರ್, ಪತ್ರಕರ್ತರು ಮತ್ತು ಕಾಂಗ್ರೆಸ್ ಮುಖಂಡರ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.
“ಆರೋಪಿಗಳು ಟ್ವೀಟ್ಗಳನ್ನು ದೊಡ್ಡ ಪ್ರಮಾಣದಲ್ಲಿ ಹಂಚಿಕೊಂಡಿದ್ದಾರೆ. ಆರೋಪಿಗಳು ಸಾಮಾಜಿಕ ಮಾಧ್ಯಮಗಳ ಮೂಲಕ ನೀಡಿದ ಹೇಳಿಕೆಗಳು ಕ್ರಿಮಿನಲ್ ಪಿತೂರಿಯ ಹೊಂದಿದ್ದವು. ಆರೋಪಿಗಳು ಹಿಂದೂ ಮತ್ತು ಮುಸ್ಲಿಮರ ನಡುವೆ ದ್ವೇಷವನ್ನು ಸೃಷ್ಟಿಸಲು ಪ್ರಯತ್ನಿಸಿದ್ದಾರೆ. ಅವರ ಟ್ವೀಟ್ಗಳು ಕೋಮು ಸೌಹಾರ್ದತೆಯನ್ನು ನಾಶಮಾಡುವ ಪ್ರಯತ್ನವಾಗಿತ್ತು. ಈ ಸುಳ್ಳು ಟ್ವೀಟ್ಗಳನ್ನು ಸಾವಿರಾರು ಜನರು ರಿಟ್ವೀಟ್ ಮಾಡಿದ್ದಾರೆ. ಪ್ರಕರಣದಲ್ಲಿ ಸತ್ಯವನ್ನು ಸ್ಥಾಪಿಸಲು ಮತ್ತು ಸುಳ್ಳು ಸುದ್ದಿಗಳನ್ನು ಹರಡಲು ಪ್ರಯತ್ನಿಸದ ಪತ್ರಕರ್ತರು ಮತ್ತು ರಾಜಕೀಯ ವ್ಯಕ್ತಿಗಳು ಆರೋಪಿಗಳಲ್ಲಿ ಸೇರಿದ್ದಾರೆ ಎಂದು ಎಫ್ಐಆರ್ ನಲ್ಲಿ ತಿಳಿಸಲಾಗಿದೆ.
ಗಾಜಿಯಾಬಾದ್ ಪೊಲೀಸರು ವೃದ್ಧನ ಮೇಲಿನ ಹಲ್ಲೆಗೆ ನೈಜ ಕಾರಣವನ್ನು ಸ್ಪಷ್ಟಪಡಿಸಿದ್ದರೂ, ಆರೋಪಿಗಳು ತಮ್ಮ ಟ್ವೀಟ್ಗಳನ್ನು ಡಿಲೀಟ್ ಮಾಡಿಲ್ಲ. ಅವುಗಳನ್ನು ಅಳಿಸಲು ಟ್ವಿಟರ್ ಯಾವುದೇ ಪ್ರಯತ್ನ ಮಾಡಲಿಲ್ಲ ಎಂದು ಎಫ್ಐಆರ್ ಹೇಳಿದೆ.