ಹಥ್ರಾಸ್ ಅತ್ಯಾಚಾರ ಸಂತ್ರಸ್ತೆಯ ಕುಟುಂಬವನ್ನು ಭೇಟಿ ಮಾಡಲು ತೆರಳುತ್ತಿದ್ದಾಗ ಬಂಧನಕ್ಕೊಳಗಾದ ಪತ್ರಕರ್ತ ಸಿದ್ದೀಕ್ ಕಾಪ್ಪನ್ ಸೇರಿದಂತೆ ನಾಲ್ವರ ವಿರುದ್ಧದ ಶಾಂತಿ ಉಲ್ಲಂಘನೆ ಆರೋಪದ ಪ್ರಕರಣದ ವಿಚಾರಣೆಯನ್ನು ಮಥುರಾದ ಸ್ಥಳೀಯ ನ್ಯಾಯಾಲಯ ಮಂಗಳವಾರ ಕೈಬಿಟ್ಟಿದೆ.
ಕಳೆದ ವರ್ಷ ಅಕ್ಟೋಬರ್ 5 ರಂದು ಅತ್ಯಾಚಾರಕ್ಕೊಳಗಾಗಿ ಹತ್ಯೆಗೀಡಾದ ದಲಿತ ಯುವತಿಯ ಕುಟುಂಬವನ್ನು ಭೇಟಿಯಾಗಲು ಉತ್ತರ ಪ್ರದೇಶದ ಹತ್ರಾಸ್ ಗೆ ತೆರಳುತ್ತಿದ್ದಾಗ ಈ ಮೂವರನ್ನು ಬಂಧಿಸಲಾಗಿತ್ತು.
ಸಿಆರ್ಪಿಸಿ ಸೆಕ್ಷನ್ 116 (6) ಅಡಿಯಲ್ಲಿ ವಿಚಾರಣೆಯ ಅವಧಿ ಮೀರಿದ್ದರಿಂದ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ವಿಚಾರಣೆಯನ್ನು ಕೈಬಿಟ್ಟಿದ್ದಾರೆ ಎಂದು ವಕೀಲರು ತಿಳಿಸಿದರು. ಆದರೆ ದೇಶದ್ರೋಹ ಮತ್ತು ಯುಎಪಿಎಯಡಿ ದಾಖಲಿಸಿದ್ದ ಪ್ರಕರಣಗಳು ಇನ್ನೂ ವಿಚಾರಣೆಗೆ ಬಾಕಿ ಇವೆ.
ಅತೀಕುರ್ರಹ್ಮಾನ್ , ಮಸೂದ್ ಅಹ್ಮದ್ ಮತ್ತು ಆಲಂ ಇತರ ಮೂವರು ಪ್ರಕರಣವನ್ನೂ ಕೈಬಿಡಲಾಗಿದೆ. ಅಕ್ಟೋಬರ್ 5 ರಂದು ಬಂಧನಕ್ಕೊಳಗಾದ ನಂತರ ಅವರನ್ನು ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನಂತರ ಅವರನ್ನು ನ್ಯಾಯಾಂಗ ಕಸ್ಟಡಿಗೆ ಕಳುಹಿಸಲಾಗಿತ್ತು ಎಂದು ರಕ್ಷಣಾ ವಕೀಲ ಮಧುವಾನ್ ದತ್ ಚತುರ್ವೇದಿ ಹೇಳಿದ್ದಾರೆ.
ಶಾಂತಿಯ ಉಲ್ಲಂಘನೆ ಕುರಿತ ಪ್ರಕರಣವನ್ನು ನ್ಯಾಯಾಂಗ ಬಂಧನದಲ್ಲಿದ್ದಾಗ ಆಲಿಸಿದ ನ್ಯಾಯಾಲಯವು ಪೊಲೀಸರು ಸಲ್ಲಿಸಿದ ವರದಿಯ ಆಧಾರದ ಮೇಲೆ ಸಿಆರ್ಪಿಸಿಯ ಸೆಕ್ಷನ್ 111 ರ ಅಡಿಯಲ್ಲಿ ನೋಟಿಸ್ ಕಳುಹಿಸಿತ್ತು. ಜೈಲಿನಲ್ಲಿ ಅವರಿಗೆ ನೋಟಿಸ್ ನೀಡಲಾಗಿದ್ದು, ತಲಾ 1 ಲಕ್ಷ ರೂ.ಗಳ ವೈಯಕ್ತಿಕ ಬಾಂಡ್ ಅನ್ನು ಏಕೆ ಸಲ್ಲಿಸಬಾರದು ಎಂದು ಕೇಳಲಾಯಿತು,
“ಆರೋಪಿಗಳು ತಮ್ಮ ವಿರುದ್ಧದ ಆರೋಪಗಳನ್ನು ನಿರಾಕರಿಸಿದ್ದಾರೆ. ಇತ್ತೀಚೆಗೆ, ಉಪ-ವಿಭಾಗೀಯ ಮ್ಯಾಜಿಸ್ಟ್ರೇಟ್ ಆರ್.ಡಿ.ರಾಮ್ ಅವರ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದೆ. ಆರು ತಿಂಗಳಾದರೂ ಆರೋಪಿಗಳ ವಿರುದ್ಧದ ಪ್ರಕರಣಕ್ಕೆ ಸಂಬಂಧಿಸಿ ಯಾವುದೇ ಪುರಾವೆಗಳನ್ನು ಪೊಲೀಸರು ಸಲ್ಲಿಸಿಲ್ಲ, ಆದ್ದರಿಂದ ಆರೋಪಿಗಳ ವಿರುದ್ಧದ ವಿಚಾರಣೆಯನ್ನು ಕೈಬಿಡಬೇಕೆಂದು ಕೋರಿ ಅರ್ಜಿಯಲ್ಲಿ ಮನವಿ ಮಾಡಿದ್ದೆ. ನ್ಯಾಯಾಲಯವು ಇಂದು ತಾಂತ್ರಿಕ ಆಧಾರದ ಮೇಲೆ ಆರೋಪಿಗಳನ್ನು ಈ ಪ್ರಕರಣದಲ್ಲಿ ಬಿಡುಗಡೆ ಮಾಡಿದೆ ಎಂದು ವಕೀಲರು ಮಾಹಿತಿ ನೀಡಿದ್ದಾರೆ.
ಸಿಆರ್ಪಿಸಿಯ ಸೆಕ್ಷನ್ 116 (6) ರ ಅಡಿಯಲ್ಲಿ ನ್ಯಾಯಾಲಯವು ವಿಚಾರಣೆಯನ್ನು ಕೈಬಿಟ್ಟಿದೆ ಎಂದು ಅವರು ತಿಳಿಸಿದರು. ವಿಚಾರಣೆಯು ಪ್ರಾರಂಭವಾದ ದಿನಾಂಕದಿಂದ ಆರು ತಿಂಗಳ ಅವಧಿಯಲ್ಲಿ ಪೂರ್ಣಗೊಳ್ಳಬೇಕು ಎಂದು ಈ ಸೆಕ್ಷನ್ ಹೇಳುತ್ತದೆ,
ಬಂಧನದ ಎರಡು ದಿನಗಳ ನಂತರ, ಯುಪಿ ಪೊಲೀಸರು ದೇಶದ್ರೋಹ ಮತ್ತು ಕಠಿಣ ಯುಎಪಿ (ಎ) ಸೇರಿದಂತೆ ವಿವಿಧ ಆರೋಪಗಳ ಮೇಲೆ ಮತ್ತೊಂದು ಪ್ರಕರಣವನ್ನು ದಾಖಲಿಸಿದ್ದಾರೆ. ಅಂದಿನಿಂದ ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದರು. ನಂತರ ಪೊಲೀಸರು ಈ ಪ್ರಕರಣದಲ್ಲಿ ಇನ್ನೂ ನಾಲ್ಕು ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಈ ವರ್ಷದ ಏಪ್ರಿಲ್ ನಲ್ಲಿ ಪೊಲೀಸರು ಮಥುರಾದ ಸ್ಥಳೀಯ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಿದ್ದರು.