ಕೋವಿಡ್ ಪರಿಹಾರಾರ್ತವಾಗಿ ರಾಜ್ಯ ಸರಕಾರವು ಘೋಷಿಸಿರುವ ಬಜೆಟ್ ನಲ್ಲಿ ರಾಜ್ಯ ಸರಕಾರದ ತಸ್ತಿಕ್ ಹಣದ ಬಿಡುಗಡೆಗೆ ಸಂಬಂಧಿಸಿದಂತೆ ಮುಜುರಾಯಿ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ಅನಗತ್ಯ ಗೊಂದಲ ಸೃಷ್ಟಿಸುತ್ತಿರುವುದು ಖಂಡನೀಯವಾಗಿದ್ದು, ರಾಜ್ಯ ಸರಕಾರ ವಕ್ಪ್ ಮಸೀದಿಗಳು ಮತ್ತು ಜೈನ ಬಸದಿಗಳಿಗೆ ಮಂಜೂರಾಗಿರುವ ತಸ್ತಿಕ್ ಹಣವನ್ನು ವಕ್ಪ್ ಮತ್ತು ಅಲ್ಪಸಂಖ್ಯಾತರ ಇಲಾಖೆಯ ಮೂಲಕ ತಕ್ಷಣ ಬಿಡುಗಡೆಗೊಳಿಸಬೇಕೆಂದು ಕರ್ನಾಟಕ ವಿಧಾನ ಪರಿಷತ್ ಸದಸ್ಯ ಬಿ.ಎಂ ಫಾರೂಕ್ ಅವರು ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಆಗ್ರಹಿಸಿದ್ದಾರೆ.
“ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರು ತಸ್ತಿಕ್ ಹಣದ ಹೆಸರಿನಲ್ಲಿ ಹಿಂದೂ, ಮುಸ್ಮಿಂ, ಜೈನ ಸಮುದಾಯದ ಜನರ ಮಧ್ಯೆ ಸಂಶಯದ ಬೀಜ ಬಿತ್ತುವುದು ಬೇಡ. ತಸ್ತಿಕ್ ಹಣ ಸರ್ಕಾರದ ಹಣ, ಅದು ದೇವಸ್ಥಾನದ ಹುಂಡಿಯಲ್ಲಿ ಸಂಗ್ರಹವಾದ ಹಣವಲ್ಲ. ಈ ಹಿಂದಿನಿಂದಲೂ ಸರಕಾರದಿಂದ ತಸ್ತಿಕ್ ಹಣದ ಹಂಚಿಕೆ ಧರ್ಮಗಳ ಮಧ್ಯೆ ಯಾವ ತಾರತಮ್ಯವೂ ಇಲ್ಲದೆ ನಡೆದು ಬಂದಿದೆ ” ಎಂದರು.
ಇನ್ನು 30 ಸಾವಿರ ದೇವಸ್ಥಾನಗಳಿಗೆ 700 ಮಸೀದಿಗಳಿಗೆ ಮತ್ತು 300 ಬಸದಿಗಳಿಗೆ ಈ ಹಿಂದೆ ನೀಡುತ್ತಿದ್ದ ಇನಾಮ್ ಹಣವೇ, ಕಾಲ ಕ್ರಮೇಣ ತಸ್ತಿಕ್ ಎಂಬ ಹೆಸರಿನಿಂದ ಮುಂದುವರಿದಿದೆ. ಸರ್ಕಾರದ ಖಜಾನೆಯ ಹಣವನ್ನು ಎಲ್ಲ ಧರ್ಮದ ಆರಾಧನಾಲಯಗಳಿಗೂ ಸರ್ಕಾರ ಕೊಡುತ್ತಿದ್ದು, ಇದು ಮುಜರಾಯಿ ಇಲಾಖೆಯ ಮೂಲಕ ಬಿಡುಗಡೆ ಆಗುತ್ತಿತ್ತು.
ತಸ್ತಿಕ್ ಹಣ ಸರಕಾರದ ಖಜಾನೆಯದ್ದು, ಈಗ ಆ ಹಣವನ್ನು ಸಚಿವರು ಮಸೀದಿ ಮತ್ತು ಜೈನ ಬಸದಿಗಳಿಗೆ ತಡೆ ಹಿಡಿದಿರುವುದು ಸರಿಯಲ್ಲ. ಸರ್ಕಾರ ತಕ್ಷಣವೇ ಮಸೀದಿ ಮತ್ತು ಜೈನ ಬಸದಿಗಳಿಗೆ ಮಂಜೂರಾದ ತಸ್ತಿಕ್ ಹಣವನ್ನು ವಕ್ಪ್ ಮತ್ತು ಅಲ್ಪ ಸಂಖ್ಯಾತ ಇಲಾಖೆಗೆ ಬಿಡುಗಡೆ ಮಾಡಬೇಕು ಎಂದು ಪತ್ರದಲ್ಲಿ ಬಿ ಎಂ ಫಾರೂಕ್ ಆಗ್ರಹಿಸಿದ್ದಾರೆ.