ಇಸ್ರೇಲ್ ರಾಯಭಾರಿ ಕಚೇರಿ ಬಳಿ ಸ್ಫೋಟ ಪ್ರಕರಣ | ಇಬ್ಬರು ಶಂಕಿತರ ವೀಡಿಯೋ ಬಿಡುಗಡೆಗೊಳಿಸಿದ NIA
Prasthutha: June 15, 2021

ನವದೆಹಲಿ: ಭಾರತದ ಇಸ್ರೇಲ್ ರಾಯಭಾರಿ ಕಚೇರಿ ಸಮೀಪ ನಡೆದಿದ್ದ ಸ್ಪೋಟ ಪ್ರಕರಣ ಸಂಬಂಧಿಸಿ ಇಬ್ಬರು ಶಂಕಿತರ ದೃಶ್ಯವುಳ್ಳ ವೀಡಿಯೋವನ್ನ ರಾಷ್ಟ್ರೀಯ ತನಿಖಾ ದಳ (NIA) ಬಿಡುಗಡೆಗೊಳಿಸಿದೆ. ತನಿಖೆಗೆ ಸಹಕಾರಿಯಾಗುವ ನಿಟ್ಟಿನಲ್ಲಿ ವೀಡಿಯೋ ಬಿಡುಗಡೆಗೊಳಿಸಿರುವ ತನಿಖಾ ತಂಡವು ಶಂಕಿತ ಆರೋಪಿಗಳ ಪತ್ತೆ ಹಚ್ಚಲು ಸಾರ್ವಜನಿಕರ ಸಹಕಾರವನ್ನ ಬಯಸಿದೆ. ಅಲ್ಲದೇ, ಇಬ್ಬರ ತಲೆಗೂ ತಲಾ 10 ಲಕ್ಷ ಬಹುಮಾನವನ್ನೂ NIA ಘೋಷಿಸಿದೆ.
ಈ ವರುಷದ ಜನವರಿ 29 ರಂದು ಅಬ್ದುಲ್ ಕಲಾಂ ರಸ್ತೆಯಲ್ಲಿರುವ ಜಿಂದಾಲ್ ಹೌಸ್ ಬಳಿ ಸಣ್ಣ ಪ್ರಮಾಣದ ಸ್ಫೋಟಕ ತುಂಬಿದ್ದ ದುಷ್ಕರ್ಮಿಗಳು ಸ್ಫೋಟ ನಡೆಸಿದ್ದರು. ಇಸ್ರೇಲ್ ರಾಯಭಾರಿ ಕಚೇರಿಯ ಅಣತಿ ದೂರದಲ್ಲಿ ಈ ಘಟನೆ ನಡೆದಿತ್ತು. ಆದರೆ ಯಾವುದೇ ಅಪಾರ ಪ್ರಮಾಣದ ಹಾನಿಯಾಗಲಿ, ಸಾವು-ನೋವು ಆಗಲಿ ಸಂಭವಿಸಿರಲಿಲ್ಲ.
ತನಿಖೆಯ ಜವಾಬ್ದಾರಿ ವಹಿಸಿಕೊಂಡಿದ್ದ ರಾಷ್ಟ್ರೀಯ ತನಿಖಾ ದಳವು ಘಟನೆ ನಡೆದ ದಿನ ಇಬ್ಬರು ಅಪರಿಚಿತರು ಸಂಶಯಾಸ್ಪದ ರೀತಿಯಲ್ಲಿ ಪ್ರಮುಖ ಬೀದಿಗಳಲ್ಲಿ ಅಲೆದಾಡಿದ್ದನ್ನ ಸಿಸಿಟಿವಿ ಸಹಾಯದ ಮೂಲಕ ಗುರುತಿಸಿದ್ದಾರೆ.
