ವೈದ್ಯರು ದೇವದೂತರು; ಲಸಿಕೆ ಪಡೆಯುವೆ : ಅಲೋಪಥಿಕ್‌ ಬಗ್ಗೆ ಬಾಬಾ ರಾಮ್‌ದೇವ್‌ ಯೂಟರ್ನ್

Prasthutha|

ನವದೆಹಲಿ : ಅಲೋಪಥಿಕ್‌ ವೈದ್ಯ ವ್ಯವಸ್ಥೆಯನ್ನು ಅವಿವೇಕತನದ ವೈದ್ಯ ವ್ಯವಸ್ಥೆ ಎಂದು ಇಡೀ ವೈದ್ಯ ಸಮೂಹದ ಆಕ್ರೋಶಕ್ಕೆ ಕಾರಣರಾಗಿದ್ದ ಯೋಗಗುರು ಬಾಬಾ ರಾಮ್‌ದೇವ್‌ ಈಗ ತಮ್ಮ ಹೇಳಿಕೆಯಿಂದ ಯೂಟರ್ನ್‌ ತೆಗೆದುಕೊಂಡಿದ್ದಾರೆ. ತನಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಇರುವುದರಿಂದ ಕೋವಿಡ್‌ ಲಸಿಕೆ ಅಗತ್ಯವಿಲ್ಲ ಎಂದಿದ್ದ ಅವರು, ಈಗ ಶೀಘ್ರದಲ್ಲೇ ಲಸಿಕೆ ಪಡೆಯುತ್ತೇನೆ, ಅಲೋಪಥಿಕ್‌ ವೈದ್ಯರು “ಭೂಮಿಯ ಮೇಲಿನ ದೇವದೂತರು” ಎಂದು ಹೊಗಳಿಕೆಯ ಸುರಿಮಳೆಗೈದಿದ್ದಾರೆ.

- Advertisement -

ಅಲೋಪಥಿಕ್‌ ವೈದ್ಯ ವ್ಯವಸ್ಥೆ ಬಗ್ಗೆ ರಾಮ್‌ದೇವ್‌ ಹೇಳಿಕೆಯು ಭಾರೀ ವಿವಾದವನ್ನುಂಟು ಮಾಡಿತ್ತು. ಭಾರತೀಯ ವೈದ್ಯಕೀಯ ಸಂಸ್ಥೆಯೇ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಕಪ್ಪು ಪಟ್ಟಿ ಧರಿಸಿ ವೈದ್ಯರು ಪ್ರತಿಭಟನೆಯನ್ನೂ ನಡೆಸಿದ್ದರು. ರಾಮ್‌ದೇವ್‌ ವಿರುದ್ಧ ಮಾನನಷ್ಟ ದಾವೆಯೂ ದಾಖಲಾಗಿದೆ.

ಆದರೆ, ಈಗ ತನ್ನ ಹೇಳಿಕೆಯನ್ನು ಬದಲಾಯಿಸಿರುವ ರಾಮ್‌ದೇವ್‌ ಶೀಘ್ರದಲ್ಲೇ ಲಸಿಕೆ ಪಡೆಯುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಎಲ್ಲರೂ ಲಸಿಕೆ ಪಡೆಯಿರಿ ಎಂದು ತನ್ನ ಹಿಂಬಾಲಕರಿಗೆ ಕರೆ ನೀಡಿದ್ದಾರೆ.

- Advertisement -

ಕೋವಿಡ್‌ ಲಸಿಕೆಯ ಎರಡು ಡೋಸ್‌ ಗಳನ್ನೂ ಪಡೆಯಿರಿ. ಇದರ ಜೊತೆಗೆ ಯೋಗ ಮತ್ತು ಆಯುರ್ವೇದದ ರಕ್ಷಣೆ ಪಡೆಯಿರಿ. ಇದರಿಂದ ರಕ್ಷಣೆ ದೊರೆಯುತ್ತದೆ. ಆಗ ಕೋವಿಡ್‌ ನಿಂದ ಯಾವ ವ್ಯಕ್ತಿಯೂ ಸಾಯುವುದಿಲ್ಲ ಎಂದು ರಾಮ್‌ದೇವ್‌ ಹೇಳಿದ್ದಾರೆ.



Join Whatsapp