ಲಕ್ನೋ : ಜಮೀನಿಗೆ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಉತ್ತರಪ್ರದೇಶದಲ್ಲಿ ದಲಿತ ರೈತನೋರ್ವನ ಶಿರಚ್ಛೇದ ಮಾಡಲಾಗಿದೆ. ತನ್ನ ಜಮೀನಿಗೆ ನೀರು ಬಿಡಲು ನಿರಾಕರಿಸಿದ ಬಗ್ಗೆ ಕೋಪಗೊಂಡ ಮತ್ತೊಬ್ಬ ರೈತ, ದಲಿತ ರೈತನ ತಲೆಯನ್ನು ಕತ್ತರಿಸಿ ಹಾಕಿದ್ದಾನೆ. ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಘಟನೆ ಉತ್ತರ ಪ್ರದೇಶದ ಬಾದೌನ್ ದಿನ್ ನಗರದ ಶೇಖ್ಪುರ ಗ್ರಾಮದಲ್ಲಿ ನಡೆದಿದೆ. ನಾಥು ಲಾಲ್ ಜಾದವ್ ಎಂಬ ದಲಿತ ರೈತ ಕೊಲೆಗೀಡಾದ ವ್ಯಕ್ತಿ. ಮತ್ತೊಬ್ಬ ರೈತ ರೂಪ್ ಕಿಶೋರ್ ಬಂಧಿತನಾದ ವ್ಯಕ್ತಿ ಎಂದು ಪೊಲೀಸರು ತಿಳಿಸಿದ್ದಾರೆ.
ತನ್ನ ಜಮೀನಿಗೆ ನೀರು ಬಿಡುಗಡೆ ಮಾಡಬೇಕೆಂದು ರೂಪ್ ಕಿಶೋರ್ ಒತ್ತಾಯ ಮಾಡಿದ್ದ. ಆದರೆ ನಾಥೂ ಲಾಲ್ ಜಾಧವ್ ಕೃಷಿಗೆ ಹೆಚ್ಚು ನೀರು ಬೇಕೆಂದು ಈ ಬೇಡಿಕೆಯನ್ನು ತಿರಸ್ಕರಿಸಿದ್ದರು. ಸ್ಥಳೀಯ ಕೆಲವರು ಮಧ್ಯಪ್ರವೇಶಿಸಲು ಪ್ರಯತ್ನಿಸಿದರೂ ನಾಥೂ ಲಾಲ್ ಜಾದವ್ ರ ಶಿರಚ್ಛೇದ ಮಾಡಿದ್ದನ್ನು ನೋಡಿ ಭಯದಿಂದ ಓಡಿಹೋದರು. ತಡರಾತ್ರಿಯಾಗಿಯೂ ತಂದೆ ಬರುವುದನ್ನು ಕಾಣದಿದ್ದಾಗ ಮಗ ಜಮೀನಿಗೆ ಹೋದಾಗ ಶವ ಪತ್ತೆಯಾಗಿದೆ. ರೂಪ್ ಕಿಶೋರ್ ಮಾತ್ರವಲ್ಲದೆ ಕೊಲೆಯಲ್ಲಿ ಕೆಲವರು ಭಾಗಿಯಾಗಿದ್ದಾರೆ ಎಂದು ಮಗ ಆರೋಪಿಸಿದ್ದಾನೆ. ಮಗ ಓಂಪಾಲ್ ನ ದೂರಿನ ಮೇರೆಗೆ ಪೊಲೀಸರು ಎಫ್ಐಆರ್ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.