ಕೊರೋನ ಪರಿಹಾರ ಪ್ಯಾಕೇಜ್ ನಲ್ಲಿ ಮಸ್ಜಿದ್ ಇಮಾಮರಿಗೂ ಸಹಾಯ ಧನ ಘೋಷಿಸಿರುವ ರಾಜ್ಯ ಸರಕಾರದ ಕ್ರಮವನ್ನು ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯಾಧ್ಯಕ್ಷ ಹಝ್ರತ್ ಮೌಲಾನಾ ಅತೀಕುರ್ ರಹ್ಮಾನ್ ಅಶ್ರಫಿ ಸ್ವಾಗತಿಸಿದ್ದಾರೆ.
ಕೋರೋನ ಮತ್ತು ಲಾಕ್ ಡೌನ್ ಸಂಕಷ್ಟದ ಪ್ರಾರಂಭದಿಂದಲೂ ಮಸ್ಜಿದ್ ಇಮಾಮರು ಅತಂತ್ರ ಸ್ಥಿತಿಯಲ್ಲಿದ್ದಾರೆ. ಜೀವನ ನಿರ್ವಹಣೆಗಾಗಿ ಆದಾಯವಿಲ್ಲದೆ ಅವರು ತೀವ್ರ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇದನ್ನು ಮನಗಂಡಿದ್ದ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್, ಇಮಾಮರಿಗೆ ಪರಿಹಾರ ಪ್ಯಾಕೇಜ್ ಘೋಷಣೆ ಮಾಡಬೇಕೆಂದು ಸರಕಾರವನ್ನು ನಿರಂತರವಾಗಿ ಆಗ್ರಹಿಸುತ್ತಾ ಬಂದಿತ್ತು. ಪತ್ರಿಕಾ ಪ್ರಕಟನೆ ಮೂಲಕ ಮತ್ತು ಶಾಸಕರು ಹಾಗೂ ಸರಕಾರದ ಅಧಿಕೃತರನ್ನು ಸಂಪರ್ಕಿಸಿ ತನ್ನ ಬೇಡಿಕೆಯನ್ನು ಮುಂದಿಟ್ಟಿತ್ತು. ಇದೀಗ ಪರಿಹಾರ ಪ್ಯಾಕೇಜ್ ನಲ್ಲಿ ಮಸ್ಜಿದ್ ಇಮಾಮರು ಮತ್ತು ಮುಅಝ್ಝಿನ್ ಗಳನ್ನು ಪರಿಗಣಿಸಿರುವುದು ಸಂತಸದ ವಿಚಾರವಾಗಿದೆ ಮತ್ತು ಇದಕ್ಕಾಗಿ ಆಲ್ ಇಂಡಿಯಾ ಇಮಾಮ್ಸ್ ಕೌನ್ಸಿಲ್ ರಾಜ್ಯ ಸರಕಾರಕ್ಕೆ ಅಭಿನಂದನೆಯನ್ನು ಸಲ್ಲಿಸುತ್ತದೆ.
ಪರಿಹಾರ ವಿತರಣೆಯ ಪ್ರಕ್ರಿಯೆಯನ್ನು ಸರಳಗೊಳಿಸಬೇಕು ಮತ್ತು ಸಂಕಷ್ಟದಲ್ಲಿರುವ ಎಲ್ಲಾ ಇಮಾಮರಿಗೂ ಸಮರ್ಪಕವಾಗಿ ಸಹಾಯಧನ ತಲುಪಿಸಲು ಕ್ರಮಕೈಗೊಳ್ಳಬೇಕು. ಅದೇ ರೀತಿ ಈ ಪರಿಹಾರ ಪ್ಯಾಕೇಜನ್ನು ರಾಜ್ಯದಲ್ಲಿರುವ ಮದ್ರಸ ಅಧ್ಯಾಪಕರಿಗೂ ವಿಸ್ತರಿಸಬೇಕೆಂದು ಮೌಲಾನಾ ಅತೀಕುರ್ ರಹ್ಮಾನ್ ಅಶ್ರಫಿ ಒತ್ತಾಯಿಸಿದ್ದಾರೆ.