ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವಲಯ ಸಂಚಾಲಕ ಮುನವ್ವರ್ ಪಾಶಾ ನಿಧನ

Prasthutha|

ಮೈಸೂರು: ಶಿಕ್ಷಕ, ಪ್ರಾಂಶುಪಾಲರಾಗಿ ಶೈಕ್ಷಣಿಕ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದ ಜಮಾಅತೆ ಇಸ್ಲಾಮಿ ಹಿಂದ್ ಮೈಸೂರು ವಲಯ ಸಂಚಾಲಕ ಮುನವ್ವರ್ ಪಾಶಾರವರು ಇಂದು ಬೆಳಗ್ಗೆ ಮೈಸೂರಿನಲ್ಲಿ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು. ರಾಜ್ಯದ ಹಾಸನ ಜಿಲ್ಲೆಯ ಆಲೂರು ತಾಲೂಕಿನಲ್ಲಿರುವ ಇಸ್ಲಾಮಿಯಾ ಅರೇಬಿಕ್ ಕಾಲೇಜು ಮನ್ಸೂರದಲ್ಲಿ 15 ವರ್ಷಗಳ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ. ಅಲ್ಲದೇ ಮಸ್ಕತ್ ನಲ್ಲಿ ಚೀಫ್ ಅಕೌಂಟೆಂಟ್ ಹಾಗೂ ದುಬೈನ ಶಿಕ್ಷಣ ಸಂಸ್ಥೆಯಲ್ಲೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿದ್ದಾರೆ.

- Advertisement -

ತಮ್ಮ ಮೃದು ಸ್ವಭಾವದಿಂದಲೇ ಹಲವಾರು ಮಕ್ಕಳ ಪ್ರೀತಿಯ ಶಿಕ್ಷಕರಾಗಿ ಗುರುತಿಸಿಕೊಂಡಿದ್ದರು. ಮೂಲತಃ ಮಂಡ್ಯ ಜಿಲ್ಲೆಯ ಕೆ.ಆರ್ ಪೇಟೆ ಸಮೀಪದ ಆಲಂಬಾಡಿ ಕವಲ್ ನವರಾದ ಇವರು ಮೈಸೂರಿನಲ್ಲಿ ಹಲವಾರು ವರ್ಷಗಳಿಂದ ನೆಲೆಸಿ, ಜಮಾಅತೆ ಇಸ್ಲಾಮಿ ಹಿಂದ್ ನ ಸದಸ್ಯರಾಗಿ ಬಳಿಕ ಮೈಸೂರು ವಲಯ ಸಂಚಾಲಕರಾಗಿ ಸೇವೆ ಸಲ್ಲಿಸಿದ್ದಾರೆ. ಮೈಸೂರಿನಲ್ಲಿ ಸನ್ಮಾರ್ಗ, ಅನುಪಮ ಪತ್ರಿಕೆ ಹಾಗೂ ಶಾಂತಿ ಪ್ರಕಾಶನ ಸಂಸ್ಥೆಯ ಬೆಳವಣಿಗೆಗೆ ಕೂಡ ಸಹಕಾರ ನೀಡಿದ್ದಾರೆ.

ಮೃತರು ತಾಯಿ, ಪತ್ನಿ ಹಾಗೂ ನಾಲ್ವರು ಪುತ್ರರ ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ಮೈಸೂರು-ಬೆಂಗಳೂರು ರಸ್ತೆಯ ಟಿಪ್ಪು ಸರ್ಕಲ್ ನಲ್ಲಿರುವ ಖಬರಸ್ಥಾನದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

- Advertisement -

ಮೃತರ ನಿಧನಕ್ಕೆ ಜಮಾಅತೆ ಇಸ್ಲಾಮಿ ಹಿಂದ್ ಕರ್ನಾಟಕ ರಾಜ್ಯಾಧ್ಯಕ್ಷ ಡಾ. ಬೆಳಗಾಮಿ ಮುಹಮ್ಮದ್ ಸಾದ್, ರಾಜ್ಯ ಕಾರ್ಯದರ್ಶಿ ಯೂಸುಫ್ ಕನ್ನಿ, ಶಾಂತಿ ಪ್ರಕಾಶನದ ವ್ಯವಸ್ಥಾಪಕರಾದ ಮುಹಮ್ಮದ್ ಕುಂಞಿ, ಎಸ್ ಐ ಓ ಕರ್ನಾಟಕ ರಾಜ್ಯಾಧ್ಯಕ್ಷ ಶೆಹಾಝಡ್ ಶಕೀಬ್ ಮುಲ್ಲಾ, ವೆಲ್ಫೇರ್ ಪಾರ್ಟಿ ಕರ್ನಾಟಕ ರಾಜ್ಯಾಧ್ಯಕ್ಷ ಅಡ್ವೋಕೇಟ್ ತಾಹಿರ್ ಹುಸೇನ್, ಜಮಾಅತೆ ಇಸ್ಲಾಮಿ ಹಿಂದ್ ಮಂಗಳೂರು ವಲಯ ಸಂಚಾಲಕ ಅಬ್ದುಸ್ಸಲಾಂ ಉಪ್ಪಿನಂಗಡಿ, ದ ಕ ಜಿಲ್ಲಾಧ್ಯಕ್ಷ ಸಯೀದ್ ಇಸ್ಮಾಯಿಲ್, ಮಂಗಳೂರು ಅಧ್ಯಕ್ಷರಾದ ಕೆ ಎಂ ಅಶ್ರಫ್, ಸನ್ಮಾರ್ಗ ಪಬ್ಲಿಕೇಷನ್ ಟ್ರಸ್ಟ್ ನ ಕೆ ಎಂ ಷರೀಫ್ ಸಂತಾಪ ಸೂಚಿಸಿದ್ದಾರೆ.



Join Whatsapp