ಸುಪ್ರಿಂ ಕೋರ್ಟ್ ನ್ಯಾಯಮೂರ್ತಿಯಾಗಿದ್ದಾಗ ಸಮಾರಂಭವೊಂದರಲ್ಲಿ ಪ್ರಧಾನಿ ಮೋದಿಯ ದೂರದೃಷ್ಟಿತ್ವವನ್ನು ಹಾಡಿ ಹೊಗಳಿದ್ದ ಜಸ್ಟಿಸ್ ಅರುಣ್ ಮಿಶ್ರಾ ಅವರು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ(NHRC)ದ ಅಧ್ಯಕ್ಷರಾಗುವುದು ಬಹುತೇಕ ಖಚಿತವಾಗಿದೆ.
ಸರ್ಕಾರವು ಅವರ ಹೆಸರನ್ನು ಪ್ರಸ್ತಾಪಿಸಿ ಐವರು ಸದಸ್ಯರ ಆಯ್ಕೆ ಸಮಿತಿಗೆ ಕಳುಹಿಸಿತ್ತು. ಐವರಲ್ಲಿ ವಿರೋಧ ಪಕ್ಷದ ನಾಯಕನಾಗಿರುವ ಮಲ್ಲಿಕಾರ್ಜುನ್ ಖರ್ಗೆ ಮಾತ್ರ ವಿರೋಧ ವ್ಯಕ್ತಪಡಿಸಿದ್ದಾರೆ. ಹಾಗಾಗಿ ಅರುಣ್ ಮಿಶ್ರಾ ಆಯ್ಕೆ ಖಚಿತವಾಗಿದೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಆಯ್ಕೆ ಸಮಿತಿಯು ನ್ಯಾಯಮೂರ್ತಿ ಮಿಶ್ರಾ ಮತ್ತು ಇತರ ಇಬ್ಬರು ಸದಸ್ಯರಾದ ಮಾಜಿ ಗುಪ್ತಚರ ವಿಭಾಗದ ನಿರ್ದೇಶಕ ರಾಜೀವ್ ಜೈನ್ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯ ನ್ಯಾಯಮೂರ್ತಿ ಮಹೇಶ್ ಮಿತ್ತಲ್ ಕುಮಾರ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಖರ್ಗೆ ಅವರು ತಮ್ಮ ಭಿನ್ನಾಭಿಪ್ರಾಯಗಳನ್ನು ಮೋದಿಗೆ ಔಪಚಾರಿಕವಾಗಿ ಸಲ್ಲಿಸಿದ್ದಾರೆ.
27 ವರ್ಷಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಭಾರತದ ಮಾಜಿ ಮುಖ್ಯ ನ್ಯಾಯಮೂರ್ತಿಯಲ್ಲದೆ ಬೇರೊಬ್ಬರನ್ನು ಎನ್‌ಎಚ್‌ಆರ್‌ಸಿ ಅಧ್ಯಕ್ಷ ಸ್ಥಾನಕ್ಕೆ ಸರ್ಕಾರವು ನೇಮಕ ಮಾಡುತ್ತಿದೆ.
ಅರುಣ್ ಮಿಶ್ರಾ ಅವರು ಮೋದಿಯನ್ನು ಹೊಗಳಿದ್ದ ವಿಷಯ ಈಗ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಅಂದು ಹೊಗಳಿದ್ದಕ್ಕೆ ಇಂದು ಪ್ರತಿಫಲ ಸಿಗುತ್ತಿದೆ ಎಂದು ನೆಟ್ಟಿಗರು ವ್ಯಂಗ್ಯವಾಡಿದ್ದಾರೆ.