ಬಿಜೆಪಿ ಶಾಸಕ ರವಿ ಸುಬ್ರಹ್ಮಣ್ಯ ಅವರಿಗೆ ಖಾಸಗಿ ಆಸ್ಪತ್ರೆಗಳಿಂದ ಕೋವಿಡ್ ಲಸಿಕೆಯ ಕಮಿಷನ್ ಹಣ ಹೋಗುತ್ತಿದೆ ಎಂದು ಆರೋಪಿಸಿ ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಗೆ ದೂರು ನೀಡಿದ್ದ ಸಾಮಾಜಿಕ ಕಾರ್ಯಕರ್ತ ವೆಂಕಟೇಶ್ ಅವರಿಗೆ ಪೊಲೀಸರು ನೋಟಿಸ್ ಜಾರಿ ಮಾಡಿದ್ದಾರೆ.
ಬೆಂಗಳೂರಿನ ಎ ವಿ ಆಸ್ಪತ್ರೆಯವರು ವೆಂಕಟೇಶ್ ಅವರ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದರು. ಈ ದೂರಿಗೆ ಸಂಬಂಧಿಸಿ ಪೊಲೀಸರು ವೆಂಕಟೇಶ್ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಖಾಸಗಿ ಆಸ್ಪತ್ರೆಗಳಲ್ಲಿ ಬಿಬಿಎಂಪಿಯ ಕೋವಿಡ್ ಲಸಿಕೆಗೆ ಸಾರ್ವಜನಿಕರಿಂದ ಹಣ ಪಡೆದು ನೀಡುತ್ತಿರುವುದು ಬೆಳಕಿಗೆ ಬಂದಿತ್ತು.
ಆ ಹಗರಣದ ಕುರಿತು ಎರಡು ಆಡಿಯೋ ಕೂಡಾ ವೈರಲ್ ಆಗಿತ್ತು. ಮೊದಲ ಆಡಿಯೋದಲ್ಲಿ ವೆಂಕಟೇಶ್ ಅವರು ಎ ವಿ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗೆ ಕರೆ ಮಾಡಿ ತನಗೆ ಲಸಿಕೆ ಬೇಕೆಂದು ಕೇಳಿದಾಗ, “ಲಸಿಕೆಗೆ 900 ರೂ ಆಗುತ್ತದೆ ಎಂದು ಆಸ್ಪತ್ರೆಯ ಸಿಬ್ಬಂದಿ ಹೇಳುತ್ತಾರೆ. ಬಿಬಿಎಂಪಿಯಲ್ಲಿ ಉಚಿತವಾಗಿ ಸಿಗುತ್ತೆ ಎಂದಾಗ ನೀವು ಅಲ್ಲೇ ಹಾಕಿ ಎನ್ನುತ್ತಾರೆ. ನಮಗೆ ಬಂದಿರುವುದೇ ಬಿಬಿಎಂಪಿ ಕಡೆಯಿಂದ ರವಿ ಸುಬ್ರಹ್ಮಣ್ಯ ಅವರೇ ಕೊಡಿಸಿರುವುದು. 900 ರೂಪಾಯಿಗೆ ಖರೀದಿ ಮಾಡಿದ್ದೇವೆ, ನಾವು ರವಿ ಸುಬ್ರಹ್ಮಣ್ಯ ಅವರಿಗೆ 700 ರೂಪಾಯಿ ಕೊಡಬೇಕು ಎಂದು ಹೇಳುತ್ತಾರೆ.
ಅದೇ ರೀತಿ ಮತ್ತೊಂದು ಆಸ್ಪತ್ರೆಗೆ ವೆಂಕಟೇಶ್ ಅವರು ಕರೆ ಮಾಡಿದಾಗಲೂ ಅಲ್ಲಿನ ಸಿಬ್ಬಂದಿ ಲಸಿಕೆ ಬೇಕೆಂದರೆ ರವಿ ಸುಬ್ರಹ್ಮಣ್ಯ ಅವರ ಕಚೇರಿಯಿಂದ ಅಥವಾ ವಾಸವಿ ಆಸ್ಪತ್ರೆಯಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು ಎಂದು ಹೇಳುತ್ತಾರೆ. ಅಲ್ಲೂ ಕೂಡಾ 900 ರೂಪಾಯಿ ಲಸಿಕೆಗೆ ಕೊಡಬೇಕು ಎನ್ನುತ್ತಾರೆ. ಆ ಹಣ ರವಿ ಸುಬ್ರಹ್ಮಣ್ಯ ಅವರ ಕಚೇರಿಗೆ ಹೋಗುತ್ತದೆ ಎಂದು ಸಿಬ್ಬಂದಿ ಹೇಳುತ್ತಾರೆ.
ಈ ಬಗ್ಗೆ ದಾಖಲೆ ಸಮೇತ ವೆಂಕಟೇಶ್ ಅವರು ಪೊಲೀಸರಿಗೆ ದೂರು ನೀಡಿದ್ದರು.