ದೇಶವನ್ನು 70 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿದ್ದೇ ಬಿಜೆಪಿಯ ಏಳು ವರ್ಷದ ಸಾಧನೆ : ಸಿದ್ದರಾಮಯ್ಯ ಟೀಕೆ

Prasthutha|

ಬಿಜೆಪಿ ನಾಯಕರು ನಿನ್ನೆಗೆ ಮೋದಿಯವರ ನೇತೃತ್ವದ ಸರ್ಕಾರಕ್ಕೆ ಏಳು ವರ್ಷ ತುಂಬಿತೆಂದು ಖಾಲಿ ಕೊಡ ಹೊತ್ತುಕೊಂಡು ಸಂಭ್ರಮ ಪಟ್ಟಿದ್ದಾರೆ. ಮಾನವಂತ, ಸೂಕ್ಷ್ಮ ಸಂವೇದನೆಯ ಜನ ಏನೆನ್ನುತ್ತಾರೆ ಎಂಬ ಬಗ್ಗೆ ಸಣ್ಣ ಸ್ಪಂದನೆಯೂ ಇಲ್ಲದ ಬಿಜೆಪಿ ನಾಯಕರು ತಮ್ಮ ಬೆನ್ನು ತಾವೇ ತಟ್ಟಿಕೊಂಡು ಸಂಭ್ರಮಿಸಿದ್ದಾರೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ   ಹೇಳಿದ್ದಾರೆ.

- Advertisement -

ತಮ್ಮ ನಿವಾಸದಲ್ಲಿಂದು ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ತಮ್ಮ ಏಳು ವರ್ಷಗಳ ಆಳ್ವಿಕೆಯಲ್ಲಿ ದೇಶವನ್ನು 70 ವರ್ಷಗಳಷ್ಟು ಹಿಂದಕ್ಕೆ ಕೊಂಡೊಯ್ದಿರುವುದೇ ನರೇಂದ್ರಮೋದಿಯವರ ಸಾಧನೆ ಎಂದು ತಿಳಿಸಿದರು.

ದೇಶ ಸೂತಕದ ಮನೆಯಾಗಿದೆ. ಮನೆ ಮನೆಗಳೂ ಕತ್ತಲಾಗಿವೆ. ಪ್ರತಿ ಕಣ್ಣಿನಲ್ಲೂ ಕಣ್ಣೀರಿದೆ. ದೇಶದ ಜನ ಮೋದಿಯವರ ಆಡಳಿತಕ್ಕೆ 7 ವರ್ಷವಾಯಿತೆಂದು ನಿನ್ನೆ ಸಂಭ್ರಮ ಪಟ್ಟಿಲ್ಲ. ಬದಲಾಗಿ ಶ್ರದ್ಧಾಂಜಲಿ ಅರ್ಪಿಸಿದವರಂತೆ ಶೋಕ ಪಟ್ಟಿದ್ದಾರೆ ಎಂದು ವ್ಯಂಗ್ಯವಾಡಿದರು.

- Advertisement -

ದೇಶದ ಪಾಲಿಗೆ ಮೋದಿಯವರ 7 ವರ್ಷಗಳ ಸಾಧನೆ ಎಂದರೆ ಅಸಂಖ್ಯಾತ ಡಿಸಾಸ್ಟರುಗಳ ಅವಧಿಯಾಗಿದೆ. ಪಟ್ಟಿ ಮಾಡಿದರೆ ಬಹುಶಃ ನೂರಾರು , ಸಾವಿರಾರು ಸುಳ್ಳುಗಳಿವೆ. ಬಿಜೆಪಿ ಎಂದರೆ ಸುಳ್ಳನ್ನು ಉತ್ಪಾದಿಸುವ ಜಗತ್ತಿನ ಅತಿ ದೊಡ್ಡ ಕೈಗಾರಿಕೆ ಇದ್ದಂತೆ.

70 ವರ್ಷಗಳ ಅವಧಿಯಲ್ಲಿ ದೇಶದ ಜನರು ಕಷ್ಟ ಪಟ್ಟು ಕಟ್ಟಿದ ಅಮೂಲ್ಯವಾದ ಕಾರ್ಖಾನೆಗಳನ್ನು ಖಾಸಗಿಯವರಿಗೆ ಮಾರಾಟ ಮಾಡಿ  ಕೇವಲ ಸುಳ್ಳಿನ ಕಾರ್ಖಾನೆಯನ್ನು ನಡೆಸುತ್ತಿದ್ದಾರೆ.  ದೇಶ ವೇಗವಾಗಿ ಅಭಿವೃದ್ಧಿಯಾಗುತ್ತಿಲ್ಲ. ಬದಲಾಗಿ ವೇಗವಾಗಿ ಹಿಂದೆ ಹಿಂದಕ್ಕೆ ಕುಸಿದು ಹೋಗುತ್ತಿದೆ.  ಮೋದಿಯವರ ಸಬ್ ಕಾ ಸಾಥ್ ಸಬ್ ಕಾ ವಿಕಾಸ್, ಸಬ್ ಕಾ ವಿಶ್ವಾಸ್ ಎಂಬುದು ಕೇವಲ ಸುಳ್ಳು ಘೋಷಣೆ ಎಂಬುದನ್ನು ಸ್ವತಃ ಬಿ ಜೆ ಪಿ ಕಾರ್ಯಕರ್ತರೇ ಹೇಳುತ್ತಿದ್ದಾರೆ. ಹಾಗಿದ್ದರೆ ಯಾರ ವಿಕಾಸವಾಗಿದೆ? ಎಂದು ಪ್ರಶ್ನಿಸಿದರು.

ಸಬ್ ಕಾ ಸಾಥ್ ಅಂಬಾನಿ ಕಾ ವಿಕಾಸ್, ಅದಾನಿ ಕಾ ವಿಕಾಸ್, ಟೋಟಲಿ ಗುಜರಾತ್ ಕಾರ್ಪೊರೇಟ್ ಆದ್ಮಿ ಕಾ ವಿಶ್ವಾಸ್ ಆಗಿದೆ.  ಯಾಕೆಂದರೆ ದೇಶದ ಜನ ಎರಡು ಹೊತ್ತಿನ ಊಟಕ್ಕೆ ಪರದಾಡುತ್ತಿದ್ದಾರೆ. ಬೊಗಸೆ ಆಕ್ಸಿಜನ್ನಿಗೆ. ಒಂದು ಇಂಜೆಕ್ಷನ್ನಿಗೆ, ಒಂದು ಲಸಿಕೆಗೆ, ಉದ್ಯೋಗಕ್ಕೆ ಪರದಾಡುತ್ತಿದ್ದಾರೆ ಆದರೆ ಮೋದಿಯವರ ಸರ್ಕಾರದ ತುಘಲಕ್ ಆಡಳಿತ ನೀತಿಯಿಂದಾಗಿ ಈ ಕಾರ್ಪೊರೇಟ್ ಕಂಪೆನಿಗಳು  ಕೊರೋನಾ ಅವಧಿಯಲ್ಲೂ 12 ಲಕ್ಷ ಕೋಟಿಗೂ ಅಧಿಕ ಹಣವನ್ನು ಜನರಿಂದ ದೋಚಿಕೊಂಡಿವೆ.

ಮೋದಿ ಸರ್ಕಾರದ  7 ಮಹಾ ಡಿಸಾಸ್ಟರುಗಳು ಯಾವವು?

1. ಡಿಮಾನಿಟೈಜೇಷನ್/ ನೋಟ್ ಬ್ಯಾನ್ 2. ಜಿ.ಎಸ್.ಟಿ, ರಾಜ್ಯಗಳ ಶೋಷಣೆ ಎರಡನೇ ದೊಡ್ಡ ಡಿಸಾಸ್ಟರು. 3. ಸ್ವತಃ ಮೋದಿಯವರೆ ಕೊರೋನ ವಿರುದ್ಧ ಗೆದ್ದು ಬಿಟ್ಟಿದ್ದೇವೆಂದು ಹೇಳಿ ಜನ ಮೈಮರೆಯುವಂತೆ ಮಾಡಿ ಎರಡನೆ ಕೋವಿಡ್ ಅಲೆಯನ್ನು ಸೃಷ್ಟಿಸಿದ್ದು. ಜನರ ಸಾವಿರಾರು ಹೆಣಗಳು ನದಿಯಲ್ಲಿ ತೇಲಿ ಬಿಟ್ಟಿದ್ದು ಅಚ್ಚೇದಿನ್, ಆಕ್ಸಿಜನ್, ಔಷಧ ಸಿಗದೆ  ಜನ ಮರಣ ಹೊಂದಿದ್ದು ಅಚ್ಚೇದಿನ್ 4. ರೈತ ವಿರೋಧಿಯಾದ, ಕಾರ್ಮಿಕ ವಿರೋಧಿಯಾದ, ದೇಶ ವಿರೋಧಿಯಾದ ಕಾನೂನುಗಳನ್ನು ತಂದಿದ್ದು ನಾಲ್ಕನೇ ಡಿಸಾಸ್ಟರ್. 5. ನಿರುದ್ಯೋಗ ಅತಿ ದೊಡ್ಡ ಡಿಸಾಸ್ಟರ್ 6 ದೇಶದ ಅಮೂಲ್ಯ ಆಸ್ತಿಗಳಾದ ಕಲ್ಲಿದ್ದಲು ಗಣಿಗಳು, ಕಾರ್ಖಾನೆಗಳು, ಸಂಸ್ಥೆಗಳು, ವಿಮಾನ ನಿಲ್ದಾಣ, ಬಂದರುಗಳನ್ನು ಖಾಸಗಿ ತಿಮಿಂಗಿಲಗಳಾದ ತಮ್ಮ ದೋಸ್ತರಿಗೆ ಬಿಟ್ಟುಕೊಟ್ಟಿದ್ದು ಡಿಸಾಸ್ಟರು.

7. ಬೆಲೆ ಏರಿಕೆ ಭಾರತದ ಚರಿತ್ರೆಯ ಭೀಕರ ಡಿಸಾಸ್ಟರು.

2014 ರಲ್ಲಿ ದೇಶದ ಎಂಟು ರಾಜ್ಯಗಳು ಮಾತ್ರ ವಿತ್ತೀಯ ಕೊರತೆ, ರಾಜಸ್ವ ಕೊರತೆಯನ್ನು ಎದುರಿಸುತ್ತಿದ್ದವು. ಆದರೆ ಇಂದು ಎಲ್ಲ ರಾಜ್ಯಗಳೂ ದಿವಾಳಿಯಾಗುತ್ತಿವೆ. ರಾಜ್ಯಗಳು ದುರ್ಬಲವಾದರೆ, ದೇಶವೂ ದುರ್ಬಲವಾಗುತ್ತದೆ.ದೇಶದ ಪ್ರತಿಯೊಂದು ರಂಗವೂ ವಿಫಲವಾಗಿವೆ.  ದೇಶದ 4.5 ಕೋಟಿ ಮನೆಗಳಿಗೆ ಕುಡಿಯುವ ನೀರು ಒದಗಿಸಿದ್ದೇವೆ ಎಂದು ಪ್ರಧಾನಿಯವರು ಹೇಳಿದ್ದಾರೆ. ಎಲ್ಲಿ ಯಾವ ಊರಿಗೆ ಎಂದು ಬಿ ಜೆ ಪಿ ಲೆಕ್ಕ ಕೊಡಬೇಕು. ಅದರಲ್ಲಿ ರಾಜ್ಯಕ್ಕೆ ಎಷ್ಟು ಕೊಡಲಾಗಿದೆ ಎಂದು ಹೇಳಬೇಕು. ಆ ಯೋಜನೆ ಪ್ರಾರಂಭವಾಗಿದ್ದು ಯಾವಾಗ ಎಂದು ಹೇಳಬೇಕು.

ಘೋಷಣೆಯನ್ನೆ ಸಾಧನೆ ಎಂದು ಹೇಳುವುದಾದರೆ, ಬುಲೆಟ್ ರೈಲು, ಸ್ಮಾರ್ಟ ಸಿಟಿ, ಡಬಲ್ ದ ನ್ ಕಂ, ವರ್ಷಕ್ಕೆ ಎರಡು ಕೋಟಿ ಉದ್ಯೋಗ, 15 ಲಕ್ಷ ಪ್ರತಿಯೊಬ್ಬರ ಖಾತೆಗೆ, ಕಪ್ಪು ಹಣ ಜನರ ಜೇಬಿಗೆ ಇವೆಲ್ಲವುಗಳಿಂದ ಭಾರತ ಸ್ವರ್ಗ ಸಮಾನವಾಗಬೇಕಾಗಿತ್ತು.

ಅದಾನಿ ಅಂಬಾನಿಗಳ ಆದಾಯ ಈ ಮಟ್ಟಿಗೆ ಹೆಚ್ಚಾಗಲು ಕಾರಣ ಮೋದಿ ಸರ್ಕಾರದ ಸೆಲ್ಫ್ ಸೇವೆಯೇ ಕಾರಣ.  ಸರ್ಕಾರ ಅವರಿಗೆ ಲೂಟಿ ಮಾಡಲು ಅವಕಾಶ ನೀಡಿದೆ. ತೊಗರಿ ಬೇಳೆ ವ್ಯಾಪಾರದಲ್ಲಿ ಅದಾನಿ ಕಂಪೆನಿಯ ಪಾಲು ದೊಡ್ಡದು. ಭಾರತದಲ್ಲಿ ಸುಮಾರು 50 ಮಿಲಿಯನ್ ಟನ್ ತೊಗರಿ ಬೇಳೆಯನ್ನು ಬಳಕೆ ಮಾಡುತ್ತಾರೆ. ಸರಾಸರಿ 30 ರೂ ಹೆಚ್ಚಾದರೆ ದೊಡ್ಡ ಬಂಡವಾಳಿಗರಿಗೆ 1.5 ಲಕ್ಷ ಕೋಟಿ ಲಾಭ ಬರುತ್ತದೆ. ಅಂಥದ್ದರಲ್ಲಿ ಕಳೆದ ಒಂದು ವರ್ಷದಿಂದೀಚೆಗೆ ಒಂದು ಕೆ.ಜಿ ತೊಗರಿ ಬೇಳೆಯ ಮೇಲೆ ಸರಾಸರಿ 100 ರೂ ಗಳಷ್ಟು ಬೆಲೆ ಹೆಚ್ಚಾಗಿದೆ. ಆದರೆ ಕಳೆದ ವರ್ಷ ಶೇ.16 ರಷ್ಟು ಹೆಚ್ಚು ಉತ್ಪಾದನೆ ಆಗಿದೆ ಎಂದು ಸರ್ಕಾರಗಳೇ ಹೇಳಿವೆ. ಹಾಗಾಗಿ ರೈತರಿಗೆ 5500-6000 ರೂ ಮಾತ್ರ ಪ್ರತಿ ಕ್ವಿಂಟಾಲಿಗೆ ಸಿಕ್ಕಿದೆ. ಹಾಗಿದ್ದರೆ ರೈತರು ಬೆಳೆದು ಅಗ್ಗದ ದರಕ್ಕೆ ಮಾರಿದ ತೊಗರಿ ಬೇಳೆ, ಕಾಳುಗಳು, ಎಣ್ಣೆ ಬೀಜಗಳು ಎಲ್ಲಿ ಹೋದವು. ಇದೆಲ್ಲ ನೇರವಾಗಿ ಅದಾನಿ, ಅಂಬಾನಿಗಳ ಖಜಾನೆ ಸೇರುತ್ತಿವೆ.

ಇದು ಅಗತ್ಯ ವಸ್ತುಗಳ ಕಾಯ್ದೆಗೆ ತಿದ್ದು ಪಡಿ ಮಾಡಿದ್ದರಿಂದ ಆದ ಅನಾಹುತ. ಅಡುಗೆ ಎಣ್ಣೆಯ ಬೆಲೆ 200 ರೂ ಮುಟ್ಟಿದೆ.

2019ರಲ್ಲಿ ಸಣ್ಣ ಕುಟುಂಬವೊಂದು ಸರಾಸರಿ 5000 ರೂ ಖರ್ಚು ಮಾಡುತ್ತಿದ್ದರೆ ಈ ವರ್ಷ 11000 ದಷ್ಟು ಖರ್ಚು ಮಾಡಬೇಕಾಗಿದೆ. ಅನೇಕ ಮನೆಗಳಲ್ಲಿ ಹೆಣ್ಣು ಮಕ್ಕಳು ತವರು ಮನೆಯವರು ಕೊಟ್ಟ ಸಣ್ಣ ಪುಟ್ಟ ವಡವೆಗಳನ್ನು ಮಾರಿ ಸಂಸಾರ ನಡೆಸುವಂಥ ಪರಿಸ್ಥಿತಿ ಬಂದಿದೆ. ದುಡಿಮೆ ಇಲ್ಲ. ಕೈಯಲ್ಲಿ ಕಾಸಿಲ್ಲ. ಬೆಲೆಗಳು ಆಕಾಶ ಮುಟ್ಟಿವೆ. ಜನರು ದುಡಿದ ಒಂದೊಂದು ರೂಪಾಯಿಯೂ ಅದಾನಿ, ಅಂಬಾನಿಗಳಿಗೆ ಸೇರುತ್ತಿದೆ. ದೇಶ ಹೇಗೆ ಅಭಿವೃದ್ಧಿ ಆಗುತ್ತದೆ? ಜನ ಹೇಗೆ ನೆಮ್ಮದಿಯಿಂದಿರಲು ಸಾಧ್ಯ?  ಅದಕ್ಕೆ ಬಿಜೆಪಿಯವರ ಸಂಭ್ರಮ ದೇಶದ ಜನರದ್ದಲ್ಲ. ಅದು ಅದಾನಿ ಅಂಬಾನಿಗಳದ್ದು. ಇನ್ನು ಸುಳ್ಳು ಹೇಳುವುದರಲ್ಲಿ ಟ್ರಂಪ್ ನನ್ನೂ ಮೀರಿಸಿದ ಖ್ಯಾತಿ ಮೋದಿಯವರಿಗಿದೆ ಎಂದು ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.

Join Whatsapp