ಪಾಪ್ಯುಲರ್ ಫ್ರಂಟ್ ನೂತನ ರಾಜ್ಯಾಧ್ಯಕ್ಷರಾಗಿ ಯಾಸಿರ್ ಹಸನ್ ಆಯ್ಕೆ

0
25

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾದ ನೂತನ ರಾಜ್ಯಾಧ್ಯಕ್ಷರಾಗಿ ಯಾಸಿರ್ ಹಸನ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಪಾಶ ಬೆಂಗಳೂರು ಅವರು ಆಯ್ಕೆಯಾಗಿದ್ದಾರೆ.

 ಯಾಸಿರ್ ಹಸನ್

   ನಾಸಿರ್ ಪಾಶ

ಫೆಬ್ರವರಿ 27-29ರ ವರೆಗೆ ನಡೆದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕರ್ನಾಟಕದ ಮೂರು ದಿನಗಳ ರಾಜ್ಯ ಪ್ರತಿನಿಧಿ ಸಭೆಯಲ್ಲಿ 2020-2022ರ ಅವಧಿಗೆ ಸಂಘಟನೆಯ ಈ ನೂತನ ರಾಜ್ಯ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಉಪಾಧ್ಯಕ್ಷರಾಗಿ ಅಯ್ಯೂಬ್ ಅಗ್ನಾಡಿ, ಕಾರ್ಯದರ್ಶಿಯಾಗಿ ಮುಹಮ್ಮದ್ ಶರೀಫ್ ಬಜ್ಪೆ, ಕೋಶಾಧಿಕಾರಿಯಾಗಿ ಶಾಹೀದ್ ನಸೀರ್ ಗುಲ್ಬರ್ಗಾ ಮತ್ತು ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅಬ್ದುಲ್ ಖಾದರ್, ಅಬ್ದುಲ್ ಮಜೀಸ್, ಶರೀಫ್ ಕೊಡಾಜೆ, ಮುಹಮ್ಮದ್ ತಫ್ಸೀರ್ ಆಯ್ಕೆಯಾದರು.
ಮೂರು ದಿನಗಳ ಕಾಲ ನಡೆದ ರಾಜ್ಯ ಪ್ರತಿನಿಧಿ ಸಭೆಯು ರಾಜ್ಯಾಧ್ಯಕ್ಷ ಮುಹಮ್ಮದ್ ಸಾಕಿಬ್ ಧ್ವಜಾರೋಹನಗೈಯ್ಯುವ ಮೂಲಕ ಚಾಲನೆಗೊಂಡಿತು. ಈ ಸಭೆಯಲ್ಲಿ ರಾಜ್ಯದ ವಿವಿಧ ಕಡೆಗಳಿಂದ ಸಂಘಟನೆ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಸಭೆಯಲ್ಲಿ ಕಳೆದ ವರ್ಷದ ಕಾರ್ಯಚಟುವಟಿಕೆಗಳ ಕುರಿತು ಅವಲೋಕನ ನಡೆಸಲಾಯಿತು ಮತ್ತು ಮುಂಬರುವ ವರ್ಷಗಳಿಗೆ ಕಾರ್ಯಯೋಜನೆಯನ್ನು ರೂಪಿಸಲಾಯಿತು.
ನಂತರ ಅಧ್ಯಕ್ಷೀಯ ಭಾಷಣ ಮಾಡಿದ ಯಾಸಿರ್ ಹಸನ್ ಅವರು, ದೇಶದಲ್ಲಿ ಪ್ರಸಕ್ತ ನಡೆಯುತ್ತಿರುವ ಸನ್ನಿವೇಶಗಳ ಕುರಿತು ಪಾಪ್ಯುಲರ್ ಫ್ರಂಟ್ ಆಫ್‌ಇಂಡಿಯಾವು 30 ವರ್ಷಗಳಿಂದ ಎಚ್ಚರಿಸುತ್ತಾ ಬಂದಿದೆ. ಇದೀಗ ಹಿಂದುತ್ವ ಫ್ಯಾಶಿಸಂ ಬೃಹದಾಕಾರವಾಗಿ ಬೆಳೆದು ನಿಂತಿದೆ. ಎನ್‌ಆರ್‌ಸಿ, ಸಿಎಎಯಂತಹ ಪೌರತ್ವ ಕಾಯ್ದೆಗಳ ಮೂಲಕ ಅವರು ಇದೀಗ ನಮ್ಮ ಅಸ್ತಿತ್ವವನ್ನು ಪ್ರಶ್ನಿಸುತ್ತಿದ್ದಾರೆ. ಈ ಮಧ್ಯೆ ದಿಲ್ಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗಳು ತೀವ್ರ ಆತಂಕಕಾರಿಯಾಗಿವೆ. ಹಿಂದುತ್ವ ಫ್ಯಾಶಿಸಂನ ಸವಾಲುಗಳನ್ನು ದಿಟ್ಟವಾಗಿ ಎದುರಿಸುತ್ತಾ ನಾವು ಮುಂದೆ ಸಾಗಬೇಕಾಗಿದೆ. ಮಾತ್ರವಲ್ಲ ಸಂಘಟನೆಯು ದೇಶದ ಮುಂದಿರುವ ಸವಾಲುಗಳನ್ನು ಎದುರಿಸುವ ನಿಟ್ಟಿನಲ್ಲಿ ನಡೆಯುವ ಆಂದೋಲನಗಳಲ್ಲಿ ಯಾವತ್ತೂ ಮುಂಚೂಣಿಯಲ್ಲಿ ನಿಲ್ಲಲಿದೆ ಎಂದು ಹೇಳಿದರು.
ಪಾಪ್ಯುಲರ್ ಫ್ರಂಟ್ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ವಾರ್ಷಿಕ ವರದಿಯನ್ನು ಸಭೆಯ ಮುಂದಿಟ್ಟರು. ನಂತರ ಸಬೆಯು ವರದಿಯ ಕುರಿತು ಚರ್ಚೆ ನಡೆಸಿತು ಮತ್ತು ಕಾರ್ಯಚಟುವಟಿಕೆಗಳ ಕುರಿತು ಅವಲೋಕನ ನಡೆಸಿತು.
ಚುನಾವಣಾ ಪ್ರಕ್ರಿಯೆಯನ್ನು ಪಾಪ್ಯುಲರ್ ಫ್ರಂಟ್ ಆಪ್ ಇಂಡಿಯಾದ ರಾಷ್ಟ್ರೀಯ ಕಾರ್ಯದರ್ಶಿ ಅಪ್ಸರ್ ಪಾಶ ನೆರವೇರಿಸಿಕೊಟ್ಟರು. ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನೀಸ್ ಅಹ್ಮದ್ ನೂತನ ಪದಾಧಿಕಾರಿಗಳಿಗೆ ಪ್ರತಿಜ್ಞಾವಿಧಿ ಬೋಧಿಸಿದರು.