ನವದೆಹಲಿ : ಈ ವರ್ಷದ ಐಪಿಎಲ್ ನಿಂದ ದೆಹಲಿ ಕ್ಯಾಪಿಟಲ್ ನ ಹಿರಿಯ ಬೌಲರ್ ಆರ್. ಅಶ್ವಿನ್ ಮಧ್ಯದಲ್ಲೇ ಹೊರಹೋಗಿದ್ದರು. ತಮ್ಮ ಮನೆಯವರಿಗೆ ಕೋವಿಡ್ ಸೋಂಕು ಹರಡಿದ್ದುದರಿಂದ, ಅವರಿಗೆ ಸಹಾಯ ಮಾಡಲು ತಾವು ಪಂದ್ಯದಿಂದ ವಿರಾಮ ಪಡೆಯುವುದಾಗಿ ಅವರು ಹೇಳಿದ್ದರು. ಅರ್ಧದಲ್ಲೇ ಐಪಿಎಲ್ ತೊರೆಯುವಾಗ ತನ್ನೊಳಗಿದ್ದ ಸಂಕಟಗಳನ್ನು ಅಶ್ವಿನ್ ಬಹಿರಂಗ ಪಡಿಸಿದ್ದಾರೆ.
ಈ ವೇಳೆ ತಾವು ತಮ್ಮ ಮನೆಯವರ ಸುರಕ್ಷತೆಯ ಬಗ್ಗೆ ತೀವ್ರ ಭಯಭೀತನಾಗಿದ್ದೆ. 8-9 ದಿನ ಸರಿಯಾಗಿ ನಿದ್ದೆಯೂ ಬರುತ್ತಿರಲಿಲ್ಲ ಎಂದು ಅವರು ಹೇಳಿದ್ದಾರೆ. ಅಶ್ವಿನ್ ಅವರ ಮನೆಯಲ್ಲಿ ಬಹುತೇಕ ಎಲ್ಲರಿಗೂ ಸೋಂಕು ತಗುಲಿತ್ತು. ಇನ್ನೊಂದೆಡೆ, ತಮಗೆ ಮುಂದಿನ ಆಟಗಳನ್ನು ಆಡುವ ಸಾಮರ್ಥ್ಯ ಉಳಿಯಲಿದೆಯೇ? ಇಲ್ಲವೇ? ಎಂಬ ಆತಂಕವೂ ತಮ್ಮನ್ನು ಕಾಡುತಿತ್ತು ಎಂದು ಅಶ್ವಿನ್ ಹೇಳಿದ್ದಾರೆ.
ಐಪಿಎಲ್ ನಲ್ಲಿ ಭಾಗಿಯಾಗಿದ್ದವರೊಳಗೆ ಹಲವರಿಗೆ ಕೋವಿಡ್ ಸೋಂಕು ತಗುಲಿದ ಹಿನ್ನೆಲೆಯಲ್ಲಿ, ಅಂತಿಮವಾಗಿ ಬಿಸಿಸಿಐ ಕೂಡ ಐಪಿಎಲ್ ಅರ್ಧಕ್ಕೆ ಸ್ಥಗಿತಗೊಳಿಸಿತ್ತು.