ಖಿಲಾಫತ್ ಪತನ ಮತ್ತು ಪಾಠಗಳು

0
101

-ಟಿ.ಕೆ.ಆಟ್ಟಕೋಯ

ಧಾರ್ಮಿಕ ವ್ಯವಸ್ಥೆಯ ಮುಂದರಿಕೆ, ಸಾಂಸ್ಕೃತಿಕ-ನಾಗರಿಕ ಅಭಿವೃದ್ಧಿ, ನ್ಯಾಯ ಸಂಹಿತೆಯ ಆವಿಷ್ಕಾರ, ಸಾರ್ವಜನಿಕ ಸಮಸ್ಯೆಗಳ ಪರಿಹಾರ, ನ್ಯಾಯಕ್ಕಾಗಿ ಇರುವ ಹೋರಾಟಗಳ ಸಜ್ಜುಗೊಳಿಸುವಿಕೆ, ಒಳಿತಿನ ಪ್ರಚಾರ, ಕೆಡುಕಿನ ನಿವಾರಣೆ ಮೊದಲಾದ ಗುರಿಗಳನ್ನು ಸಾಧಿಸಲು ಸ್ಥಾಪಿಸಲ್ಪಟ್ಟ ರಾಷ್ಟ್ರದ ಜನರ ಸಾರ್ವಜನಿಕ ನಾಯಕತ್ವವನ್ನು ಖಿಲಾಫತ್ ಎಂದು ನಿರ್ವಚಿಸಬಹುದು.

ಈ ಲೇಖನವನ್ನು ಬರೆಯುತ್ತಿರುವುದು ಮಾರ್ಚ್ 3ರಂದು. ಇದು ಬಹಳಷ್ಟು ಪ್ರಾಮುಖ್ಯತೆ ಇರುವ ದಿನಾಂಕ. 1924 ಮಾರ್ಚ್ 3ರಂದು ಉಸ್ಮಾನಿಯ ಖಿಲಾಫತ್‌ನ ಪತನವಾಯಿತು. ಖಿಲಾಫತ್ ಎಂಬ ರಾಜಕೀಯ ವ್ಯವಸ್ಥೆಯ ಅಂತ್ಯಕ್ಕೆ ಉಸ್ಮಾನಿಯ ಖಿಲಾಫತ್‌ನ ಪತನವು ನಾಂದಿಯಾಯಿತು. ಮುಸ್ಲಿಮರ ಒಟ್ಟು ನಾಯಕತ್ವವನ್ನು ಖಿಲಾಫತ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ. ಧಾರ್ಮಿಕ ವ್ಯವಸ್ಥೆಯ ಮುಂದುವರಿಕೆ, ಸಾಂಸ್ಕೃತಿಕ-ನಾಗರಿಕ ಅಭಿವೃದ್ಧಿ, ನ್ಯಾಯ ಸಂಹಿತೆಯ ಆವಿಷ್ಕಾರ, ಸಾರ್ವಜನಿಕ ಸಮಸ್ಯೆಗಳ ಪರಿಹಾರ, ನ್ಯಾಯಕ್ಕಾಗಿ ಇರುವ ಹೋರಾಟಗಳ ಸಜ್ಜುಗೊಳಿಸುವಿಕೆ, ಒಳಿತಿನ ಪ್ರಚಾರ, ಕೆಡುಕಿನ ನಿವಾರಣೆ ಮೊದಲಾದ ಗುರಿಗಳನ್ನು ಸಾಧಿಸಲು ಸ್ಥಾಪಿಸಲ್ಪಟ್ಟ ರಾಷ್ಟ್ರದ ಜನರ ಸಾರ್ವಜನಿಕ ನಾಯಕತ್ವವನ್ನು ಖಿಲಾಫತ್ ಎಂದು ನಿರ್ವಚಿಸಬಹುದು.

ಪ್ರವಾದಿ(ಸ) ವಿಯೋಗದ ನಂತರ ಇಸ್ಲಾಮೀ ಇತಿಹಾಸದಲ್ಲಿ ಒಂದು ಹಂತವು ಕೊನೆಗೊಂಡಿತು. ಪ್ರವಾದಿ(ಸ)ಯ ಉತ್ತರಾಧಿಕಾರಿಯಾಗಿ ಹಝ್ರತ್ ಅಬೂಬಕರ್(ರ) ಆಡಳಿತವನ್ನು ಕೈಗೆತ್ತಿಕೊಳ್ಳುವುದರೊಂದಿಗೆ ಎರಡನೇ ಘಟ್ಟ ಆರಂಭಗೊಳ್ಳುತ್ತದೆ. ಅವರ ನಂತರ ಹಝ್ರತ್ ಉಮರ್(ರ), ಹಝ್ರತ್ ಉಸ್ಮಾನ್(ರ), ಹಝ್ರತ್ ಅಲಿ(ರ) ಖಲೀಫರಾದರು. ಹಝ್ರತ್ ಅಲಿ(ರ)ಯವರ ಹುತಾತ್ಮತೆಯೊಂದಿಗೆ ಸಚ್ಚರಿತರಾದ ಖಲೀಫರ ಕಾಲಘಟ್ಟವು ಕೊನೆಗೊಂಡಿತು. ಅದರ ನಂತರ ಉಮವಿಗಳು, ಅಬ್ಬಾಸಿಗಳು ಆಡಳಿತವನ್ನು ಕೈಗೆತ್ತಿಕೊಂಡರು.
1453ರಲ್ಲಿ ಫಾತಿಹ್ ಸುಲ್ತಾನ್ ಕಾನ್‌ಸ್ಟಾಂಟಿನೋಪಲನ್ನು ವಶಪಡಿಸುವುದರೊಂದಿಗೆ ಉಸ್ಮಾನಿಯ ಖಿಲಾಫತ್ ಆರಂಭಗೊಂಡಿತು. ಬೈಝಾಂಟಿಕ್ ಸಾಮ್ರಾಜ್ಯವನ್ನು ಗೆದ್ದುಕೊಂಡಾಗ ಫಾತಿಹ್ ಸುಲ್ತಾನರಿಗೆ ಕೇವಲ 21ರ ಹರೆಯ. ಒಟ್ಟೋಮನ್ ಸಾಮ್ರಾಜ್ಯವು ಉತ್ತರ ಕ್ರಿಮೀಯದಿಂದ ದಕ್ಷಿಣದ ಯಮನ್, ಸುಡಾನ್‌ವರೆಗೆ ಪೂರ್ವದ ಇರಾನ್, ಕ್ಯಾಸ್ಪಿಯನ್ ಸಮುದ್ರದಿಂದ ಹಿಡಿದು ಉತ್ತರದ ವಾಯುವ್ಯದ ವಿಯೆನ್ನಾದವರೆಗೂ ಹಬ್ಬಿಕೊಂಡಿತ್ತು. ತುರ್ಕಿಯ ಸುಲ್ತಾನ್, ಅಮೀರ್-ಉಲ್-ಮುಅ್ಮಿನೀನ್ ಎಂದು ನಾಮಾಂಕಿತಗೊಂಡರು. ಆತ ಪವಿತ್ರ ಸ್ಥಳ ಮತ್ತು ಪುಣ್ಯ ಮಸ್ಜಿದ್‌ಗಳ ಸಂರಕ್ಷನಾಗಿದ್ದರು. ಮೊಘಲರು ಸಹಿತ ಅನೇಕ ಮುಸ್ಲಿಮ್ ಆಡಳಿತಗಾರರು ಉಸ್ಮಾನಿಯ ಖಿಲಾಫತ್‌ನಿಂದ ಪ್ರಭಾವಿತರಾದರು. ಈ ಒಟ್ಟೋಮನ್ ಕಾಲಘಟ್ಟವು ‘ಅಭಿವೃದ್ಧಿಯ ಯುಗ’ ಎಂದು ಪ್ರಖ್ಯಾತಗೊಂಡಿತು. ಆರು ಶತಮಾನಗಳ ಕಾಲ ಮುಂದುವರಿದ ಒಟ್ಟೋಮನ್ ಸಾಮ್ರಾಜ್ಯವು ಆರ್ಥಿಕವಾಗಿ, ಸೈನಿಕವಾಗಿ ಬಹಳಷ್ಟು ಅಭಿವೃದ್ಧಿಯನ್ನು ಕಂಡಿತು. ಇಸ್ಲಾಮಿನ ಮೊದಲ ಶತಮಾನದ ನಂತರ ಮುಸ್ಲಿಮ್ ಜಗತ್ತು ಓರ್ವ ಖಲೀಫನ ಕೈಕೆಳಗೆ ಬಂದಿದ್ದು ಅದೇ ಪ್ರಥಮ ಬಾರಿಯಾಗಿತ್ತು.

ಪಾಶ್ಚಾತ್ಯರು ಉಸ್ಮಾನಿಯ ಖಿಲಾಫತ್‌ನ ವಿರುದ್ಧ ಪಿತೂರಿಗಳನ್ನು ನಡೆಸುತ್ತಿದ್ದರು. ತುರ್ಕಿಯಿಂದ ಇಸ್ಲಾಮನ್ನು ಬೇರು ಸಹಿತ ಕಿತ್ತುಹಾಕಲು ಮತ್ತು ಪಾಶ್ಚಾತ್ಯ ಬೆಂಬಲವಿರುವ ಆಡಳಿತಗಾರರನ್ನು ಪ್ರತಿಷ್ಠಾಪಿಸಲು ಅವರು ಪ್ರಯತ್ನಿಸಿದರು. ತಮ್ಮದೇ ದೇಶದಲ್ಲಿ ತುರ್ಕಿಗಳನ್ನು ಅಲ್ಪಸಂಖ್ಯಾತರನ್ನಾಗಿಸಲು ಯಹೂದ್ಯರನ್ನು ಮತ್ತು ಆರ್ಮೀನಿಯಾರನ್ನು ವರ್ತಕ ಕೇಂದ್ರಗಳಲ್ಲಿ ನುಸುಳಲು ಸಹಾಯಕವಾಗುವಂತಹ ಹಲವಾರು ಕರಾರುಗಳನ್ನು ಪಾಶ್ಚಾತ್ಯ ಒತ್ತಡದೊಂದಿಗೆ ಜಾರಿಗೆ ತರಲಾಯಿತು. ಒಂದನೇ ಮಹಾಯುದ್ಧವು ಉಸ್ಮಾನಿಯ ಖಿಲಾಫತ್‌ನ ಪಾಲಿಗೆ ನಿರ್ಣಾಯಕವಾಗಿತ್ತು.

ಬ್ರಿಟನ್ ಮತ್ತು ಜರ್ಮನಿಯ ಮಧ್ಯೆ ನಡೆದ ಯುದ್ಧದಲ್ಲಿ ತುರ್ಕಿ, ಬ್ರಿಟನ್ ವಿರುದ್ಧ ಜರ್ಮನಿಯ ಪಕ್ಷದಲ್ಲಿ ಸೇರಿಕೊಂಡಿತು. ಭಾರತೀಯ ಮುಸ್ಲಿಮರಿಗೆ ತುರ್ಕಿಯ ವಿರುದ್ಧ ನಿಲ್ಲಲು ಸಾಧ್ಯವಾಗಿರಲಿಲ್ಲ. ಆದರೆ ಖಿಲಾಫತ್‌ಗೂ, ಮುಸ್ಲಿಮ್ ಜಗತ್ತಿನ ಭದ್ರತೆಗೂ ಯಾವುದೇ ತೊಂದರೆಯಾಗದು ಎಂದು ಮುಸ್ಲಿಮರನ್ನು ನಂಬಿಸಲು ಬ್ರಿಟಿಷರಿಗೆ ಸಾಧ್ಯವಾಯಿತು. ಕೊನೆಗೆ ಬ್ರಿಟನ್ ಮತ್ತು ಮಿತ್ರ ಪಕ್ಷಗಳು ಯುದ್ಧದಲ್ಲಿ ಜಯಗಳಿಸಿದರು. ಬ್ರಿಟನ್ ತುರ್ಕಿಯನ್ನು ಶಿಥಿಲಗೊಳಿಸಲು ಪ್ರಯತ್ನಿಸಿತು. ಅರೇಬಿಯಾವನ್ನು ಬ್ರಿಟನ್‌ನ ಕೈಕೆಳಗೆ ತರಲಾಯಿತು. ಮುಸ್ಲಿಮ್ ಪುಣ್ಯ ಸ್ಥಳಗಳನ್ನು ತುರ್ಕಿಯ ಕೈಯಿಂದ ಕಸಿದುಕೊಳ್ಳಲಾಯಿತು. ಬ್ರಿಟನ್‌ನ ಒಪ್ಪಂದಗಳ ಬಹಿರಂಗ ಉಲ್ಲಂಘನೆಯು ಭಾರತೀಯ ಮುಸ್ಲಿಮರನ್ನು ನಿರಾಶೆಗೊಳಿಸಿತು. ತಾವು ಜನ-ಧನ ಬಲದ ಮೂಲಕ ಬ್ರಿಟನ್‌ಗೆ ಸಹಾಯ ಮಾಡಿದೆವು ಎಂಬ ತಪ್ಪಿತಸ್ಥ ಭಾವನೆಯು ಭಾರತೀಯ ಮುಸ್ಲಿಮರನ್ನು ದುಃಖಕ್ಕೀಡು ಮಾಡಿತು. ಬ್ರಿಟನ್‌ನ ವಾಗ್ದಾನ ಉಲ್ಲಂಘನೆಯನ್ನು ನಂಬಿ ತುರ್ಕಿಯ ಸುಲ್ತಾನರ ವಿರುದ್ಧ ನಿಂತದ್ದು ಧರ್ಮದ್ರೋಹವಾಗಿತ್ತು ಎಂಬ ಚಿಂತೆ ಮುಸ್ಲಿಮರನ್ನು ಇನ್ನಷ್ಟು ಚಿಂತೆಗೀಡು ಮಾಡಿತು. ಈ ಸನ್ನಿವೇಶದಲ್ಲಿ ಖಿಲಾಫತ್ ಆಂದೋಲನಕ್ಕೆ ದೇಶದಲ್ಲಿ ಚಾಲನೆ ದೊರಕಿತು.

ಆದರೆ ತುರ್ಕಿಯಲ್ಲಿ ಖಿಲಾಫತ್‌ನ ವಿರುದ್ಧ ಪ್ರತ್ಯಕ್ಷ ಮತ್ತು ಪರೋಕ್ಷವಾದ ಹಲವಾರು ಪ್ರಯತ್ನಗಳು ನಡೆದವು. ತಂಝೀಮಾತ್ ಎಂಬ ಹೆಸರಿನ ವ್ಯವಸ್ಥೆಯು ಅದರ ಭಾಗವಾಗಿತ್ತು. 660 ವರ್ಷಗಳ ವರೆಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯವಾದ ಕ್ಷೇತ್ರಗಳನ್ನು ನಿಯಂತ್ರಿಸಿದ್ದ ಶರೀಅತ್ ಅನ್ನು ನಿರಾಕರಿಸಿ, ಅದನ್ನು ಮೂಲೆಗೆ ತಳ್ಳಲಾಯಿತು. ಪಾಶ್ಚಾತ್ಯ ವ್ಯವಸ್ಥೆಗಳ ಮಾದರಿಯಲ್ಲಿ ತಂಝೀಮಾತ್ ಪರಿಷ್ಕರಣೆಗಳನ್ನು ನಡೆಸಿತು. 1924ರಲ್ಲಿ ಮುಸ್ತಫಾ ಕಮಾಲ್‌ನ ಘೋಷಣೆಯೊಂದಿಗೆ ಇಸ್ಲಾಮೀ ಖಿಲಾಫತ್ ಅಂತ್ಯಗೊಂಡಿತು.
ಒಟ್ಟೋಮನ್ ತುರ್ಕಿಯನ್ನು, ಸುಲ್ತಾನರನ್ನು ಇಸ್ಲಾಮೀ ಖಿಲಾಫತ್‌ನೊಂದಿಗೆ ಸಂಬಂಧ ಕಲ್ಪಿಸಲು ಸಾಧ್ಯವಾಗದು. ಆದರೆ ಉಸ್ಮಾನಿಯ ಖಿಲಾಫತ್‌ನ ಪತನದೊಂದಿಗೆ ದೇಶದ ಗಡಿರೇಖೆ, ಭಾಷೆ, ಜನಾಂಗೀಯ ಭಾವನೆ ಮೊದಲಾದ ವಿಚಾರಗಳನ್ನು ತಲೆಗೆ ತುರುಕಿಸುವುದರೊಂದಿಗೆ ಏಕೈಕ ಇಸ್ಲಾಮೀ ಸಮೂಹ ಮತ್ತು ಏಕೈಕ ನಾಯಕ ಎಂಬ ಆಶಯದಿಂದ ಮುಸ್ಲಿಮರನ್ನು ವ್ಯತಿಚಲಿಸುವಂತೆ ಮಾಡುವುದರಲ್ಲಿ ಯುರೋಪಿಯನ್ನರು ಯಶಸ್ವಿಯಾದರು. ಒಟ್ಟೋಮನ್ ತುರ್ಕಿಯ ಪತನದೊಂದಿಗೆ ಇಸ್ಲಾಮೀ ನಾಗರಿಕತೆಯ ಮುಖ್ಯ ವ್ಯವಸ್ಥೆಯೊಂದು ನಾಮಾವಶೇಷವಾಯಿತು ಎಂಬುದಕ್ಕಿಂತ ಮಿಗಿಲಾಗಿ ಅದರ ಪ್ರಾಮಾಣಿಕತೆಯನ್ನು ಪ್ರಶ್ನಿಸುವ ಸನ್ನಿವೇಶ ಸೃಷ್ಟಿಯಾಯಿತು. ಖಿಲಾಫತ್‌ನ ಅನುಪಸ್ಥಿತಿಯಲ್ಲಿ ಬಂಡವಾಳಶಾಹಿತ್ವ, ಕಮ್ಯೂನಿಸಂ ಮೊದಲಾದ ವ್ಯವಸ್ಥೆಗಳಲ್ಲಿ ಯಾವುದಾದರೂ ಒಂದನ್ನು ತೃಪ್ತಿಪಟ್ಟರೆ ಸಾಕು ಎಂಬ ತಪ್ಪು ಕಲ್ಪನೆಗೆ ಮುಸ್ಲಿಮರು ಒಳಗಾದರು. ಇದು ರಾಜಕೀಯರಹಿತ ಆಧ್ಯಾತ್ಮಿಕ ಕೇಂದ್ರಿತ ಧರ್ಮದ ಉಗಮಕ್ಕೆ ಕಾರಣವಾಯಿತು.

ಇಸ್ಲಾಮೀ ಸಮಾಜದ ಕುರಿತು ಚರ್ಚಿಸುವಾಗ ಪ್ರವಾದಿ(ಸ) ಸಮಾಜವು ಮಾದರಿಯಾಗಿ ನಮ್ಮ ಮುಂದೆ ಬಂದು ನಿಲ್ಲುತ್ತದೆ. ಆ ಸಮಾಜವು ದುಡಿದು ಪಡೆದ ಶಕ್ತಿ ಮತ್ತು ಸಾಮರ್ಥ್ಯವನ್ನು ನಾವು ಪಡೆಯಬೇಕು. ಅವರು ವಿಹರಿಸಿದ ಕ್ಷೇತ್ರಗಳಲ್ಲೆಲ್ಲಾ ನಮಗೂ ಕೈಯಾಡಿಸಲು ಸಾಧ್ಯವಾಗಬೇಕು. ಎಲ್ಲಾ ರೀತಿಯ ಹಕ್ಕುಗಳನ್ನು ರಾಜಕೀಯ ಅಧಿಕಾರದ ಕೈಕೆಳಗೆ ಮಾತ್ರವೇ ಪೂರ್ಣ ರೂಪದಲ್ಲಿ ಪಡೆಯಲು ನಮಗೆ ಸಾಧ್ಯವಾಗಬಹುದು. ಒಂದೋ ಅಧಿಕಾರದ ಬಲದಲ್ಲಿ ಸ್ವಾತಂತ್ರವನ್ನು ಸಂಪೂರ್ಣವಾಗಿ ಪಡೆದುಕೊಳ್ಳುವುದು. ಇಲ್ಲವೇ ಪ್ರಭುತ್ವದ ಔದಾರ್ಯ ಮತ್ತು ಇಷ್ಟಾನಿಷ್ಟಕ್ಕೆ ಹೊಂದಿಕೊಂಡು ತಮ್ಮ ರಾಜಕೀಯ-ಸಾಂಸ್ಕೃತಿಕ ಅಸ್ತಿತ್ವವನ್ನು ಪರಿಮಿತಗೊಳಿಸುವುದು. ಹೀಗೇ ಎರಡು ಮಾರ್ಗಗಳಷ್ಟೇ ನಮ್ಮ ಮುಂದಿವೆ. ಶಾಸಕಾಂಗ ಮತ್ತು ಕಾರ್ಯಾಂಗದ ಕ್ಷೇತ್ರಗಳಿಂದ ವಿಮುಖರಾಗಬೇಕೆಂಬ ವಾದವನ್ನು ತಿರಸ್ಕರಿಸಲೇಬೇಕು. ರಾಜಕೀಯ ಅಧಿಕಾರ ಮತ್ತು ಪ್ರಭಾವದ ಕೊರತೆಯಿಂದ ಏನು ಸಂಭವಿಸುತ್ತದೆ ಎಂಬುದನ್ನು ಭಾರತೀಯ ಮುಸ್ಲಿಮರಿಗೆ ಇದೀಗ ಯಾರೂ ತಿಳಿಹೇಳುವ ಅಗತ್ಯವಿಲ್ಲ. ಈ ಸನ್ನಿವೇಶದಲ್ಲಿ ನಮ್ಮ ರಾಜಕೀಯ ವ್ಯವಹಾರಗಳ ಕುರಿತು ಉತ್ತಮವಾಗಿ ಚಿಂತಿಸಲು ಮತ್ತು ತೀರ್ಮಾನವನ್ನು ತೆಗೆದುಕೊಳ್ಳಲು ಅವರು ಧೈರ್ಯವನ್ನು ತೋರಬೇಕಷ್ಟೇ.