ಜಾಗತಿಕ ಮಟ್ಟದಲ್ಲಿ ಭಾರತದ ಮಾನ ಕಳೆದ ದಿಲ್ಲಿ ಕೋಮು ಹಿಂಸಾಚಾರ: ಸುಧೀಂದ್ರ ಕುಲಕರ್ಣಿ

0
105

ಇತ್ತೀಚೆಗೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ನಡೆದ ಕೋಮು ಹಿಂಸಾಚಾರ ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಗೆ ಧಕ್ಕೆ ತಂದಿದೆ ಎಂದು ಸದ್ಯ ರಾಷ್ಟ್ರವನ್ನಾಳುತ್ತಿರುವ ಹಿಂದೂ ರಾಷ್ಟ್ರವಾದಿ ಭಾರತೀಯ ಜನತಾ ಪಕ್ಷದ ಮಾಜಿ ಸದಸ್ಯ ಸುಧೀಂದ್ರ ಕುಲಕರ್ಣಿ ಹೇಳುತ್ತಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭೇಟಿಯ ಸಮಯದಲ್ಲೇ ಬಿಜೆಪಿ ಬೆಂಬಲಿಗರು ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ದಂಗೆ ಆರಂಭಿಸಿದರು ಎಂದು ಅನಡೊಲು ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಮತ್ತು ಉಪಪ್ರಧಾನಿ ಲಾಲ್ ಕೃಷ್ಣ ಅಡ್ವಾಣಿಯವರಿಗೆ ಆಪ್ತರಾಗಿದ್ದ ಲೇಖಕ ಮತ್ತು ಯೋಜನಾಚತುರ ಕುಲಕರ್ಣಿ ದೂಷಿಸುತ್ತಾರೆ.

ಅನಡೋಲು ಏಜೆನ್ಸಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯ ವೇಳೆಯೇ ದಿಲ್ಲಿಯಲ್ಲಿ ಕೋಮು ಹಿಂಸಾಚಾರ ಭುಗಿಲೇಳಲು ಏನು ಕಾರಣ?
ಸುಧೀಂದ್ರ ಕುಲಕರ್ಣಿ: ಈ ಗಲಭೆಗಳಿಗೆ ಮೂಲ ಕಾರಣ ಇತ್ತೀಚೆಗೆ ಜಾರಿ ಮಾಡಲಾಗಿರುವ ಪೌರತ್ವ ಕಾಯ್ದೆ ಅಥವಾ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ). ಈ ಕಾಯ್ದೆ ಪಾಕಿಸ್ತಾನ, ಅಫ್ಘಾನಿಸ್ತಾನ ಮತ್ತು ಬಾಂಗ್ಲಾದೇಶದಿಂದ ಬರುವ ಜನರಿಗೆ ಪೌರತ್ವ ನೀಡುವಲ್ಲಿ ಧಾರ್ಮಿಕ ನೆಲೆಯಲ್ಲಿ ತಾರತಮ್ಯ ಮಾಡುತ್ತದೆ. ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಯನ್ನೂ ದೇಶಾದ್ಯಂತ ಅನುಷ್ಠಾನಗೊಳಿಸುವುದಾಗಿ ಪ್ರಧಾನಿ ಮೊದಿ ಈಗಾಗಲೇ ತಿಳಿಸಿದ್ದಾರೆ. ಎನ್‌ಆರ್‌ಸಿ ಕಾಯ್ದೆಯ ಉದ್ದೇಶ ಭಾರತದಲ್ಲಿ ಅಕ್ರಮವಾಗಿ ವಾಸವಿರುವ ವಿದೇಶಿಗರನ್ನು ಪತ್ತೆ ಮಾಡಿ ಅವರನ್ನು ಗಡಿಪಾರು ಮಾಡುವುದು. ಬಾಂಗ್ಲಾದೇಶದ ಜೊತೆ ಗಡಿ ಹಂಚಿಕೊಂಡಿರುವ ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಇತ್ತೀಚೆಗೆ ನಡೆಸಲಾದ ಎನ್‌ಆರ್‌ಸಿ ಪ್ರಕ್ರಿಯೆಯ ಸಮಯದಲ್ಲಿ ತಾವು ಅತಂತ್ರರಾಗಿ ಬಿಡುತ್ತೇವೆ ಎಂಬ ಆತಂಕ ಹಿಂದು ಮತ್ತು ಮುಸ್ಲಿಮರು ಸೇರಿದಂತೆ ಸಾವಿರಾರು ಜನರಲ್ಲಿ ಮೂಡಿತ್ತು. ಆದರೆ ಸಿಎಎ ಅನುಷ್ಠಾನದಿಂದ ಹಿಂದುಗಳು ನಿಟ್ಟುಸಿರು ಬಿಡುವಂತಾಗಿದ್ದರೆ ಅನೇಕ ಮುಸ್ಲಿಮರು ಅಥವಾ ಅವರ ಸಹಧರ್ಮೀಯರು ಭಾರತೀಯ ಪೌರತ್ವದಿಂದ ವಂಚಿತರಾಗುತ್ತಾರೆ ಎಂಬ ಆತಂಕ ಎಲ್ಲರಲ್ಲಿ ಮೂಡಿದೆ.

ಸದ್ಯ ಎರಡು ತಿಂಗಳಿಗೂ ಹೆಚ್ಚು ಸಮಯದಿಂದ ಮುಸ್ಲಿಮರ ಜೊತೆ ಕೈಜೋಡಿಸಿರುವ ಹಿಂದುಗಳು, ಕ್ರೈಸ್ತರು ಮತ್ತು ಸಿಖ್ಖರು ಸಿಎಎ ಮತ್ತು ಎನ್‌ಆರ್‌ಸಿ ವಿರುದ್ಧ ದೇಶಾದ್ಯಂತ ಶಾಂತಿಯುತ ಪ್ರತಿಭಟನೆ ನಡೆಸುತ್ತಿದ್ದಾರೆ. ಈ ಪ್ರತಿಭಟನೆಗಳಲ್ಲಿ ಸೇರಿರುವ ಜನರ ಸಂಖ್ಯೆ ಸ್ವತಂತ್ರ ಭಾರತದ ಇತಿಹಾಸದಲ್ಲೇ ಅಭೂತಪೂರ್ವವಾಗಿದೆ. ಆಡಳಿತಾರೂಢ ಬಿಜೆಪಿಗೆ ಇಂತಹ ಸಮರ್ಥನೀಯ ಮತ್ತು ಶಾಂತಿಯುತ ಪ್ರತಿಭಟನೆಗಳು ಪಥ್ಯವಾಗುವುದಿಲ್ಲ. ಬಿಜೆಪಿ ಅಧಿಕಾರದಲ್ಲಿ ಉಳಿಯಲು ಧಾರ್ಮಿಕ ಧ್ರುವೀಕರಣದ ರಾಜಕೀಯ ಮಾಡುತ್ತಿದೆ. ಆದರೆ ಈ ವರ್ಷ ಫೆಬ್ರವರಿಯಲ್ಲಿ ನಡೆದ ದಿಲ್ಲಿ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಅತ್ಯಂತ ಕಳಪೆ ರೀತಿಯಲ್ಲಿ ಸೋತಿದೆ. ಇದರಿಂದ ಹತಾಶೆಗೊಂಡ ಬಿಜೆಪಿ ಸಮರ್ಥಕರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿಯ ವೇಳೆಯೇ ದಿಲ್ಲಿಯಲ್ಲಿ ಕೋಮು ಹಿಂಸಾಚಾರ ನಡೆಸಿದ್ದಾರೆ.

ಪ್ರಶ್ನೆ: ನೀವು ಬಿಜೆಪಿಯವರೇ ಆದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರ ತಂಡದಲ್ಲೂ ಕೆಲಸ ಮಾಡಿದ್ದೀರಿ, ಇಬ್ಬರು ಪ್ರಧಾನ ಮಂತ್ರಿಗಳ ಮಧ್ಯೆ ನೀವು ಯಾವ ವ್ಯತ್ಯಾಸ ಕಾಣುತ್ತೀರಿ?
ಸುಧೀಂದ್ರ ಕುಲಕರ್ಣಿ: ಈಗಿನ ಪ್ರಧಾನಿ ನರೇಂದ್ರ ಮೋದಿ ಮತ್ತು ಅಮಿತ್ ಶಾ (ಭಾರತದ ಗೃಹ ಸಚಿವ) ನಾಯಕತ್ವದ ಬಿಜೆಪಿ ಮತ್ತು ಅಟಲ್ ಬಿಹಾರಿ ವಾಜಪೇಯಿ ನಾಯಕತ್ವದ ಬಿಜೆಪಿಯಲ್ಲಿ ಬಹಳ ವ್ಯತ್ಯಾಸವಿದೆ. ವಾಜಪೇಯಿಯವರು ಆಪ್ತನಾಗಿ ಆರು ವರ್ಷಗಳ ಕಾಲ (1998-2004) ದುಡಿದಿರುವ ನಾನು, ವಾಜಪೇಯಿ ಹಿಂದು-ಮುಸ್ಲಿಂ ಸೌಹಾರ್ದತೆಯಲ್ಲಿ ನಂಬಿಕೆಯಿಟ್ಟಿದ್ದರು ಮತ್ತು ಭಾರತ-ಪಾಕಿಸ್ತಾನ ಮಧ್ಯೆ ಶಾಂತಿಗಾಗಿ ಪ್ರಯತ್ನಿಸಿದ್ದರು ಎಂದು ನಾನು ಯಾವುದೇ ಅಳುಕಿಲ್ಲದೆ ಹೇಳಬಲ್ಲೆ. ಗುಜರಾತ್ ದಂಗೆಯ ವಿಷಯದಲ್ಲೂ ವಾಜಪೇಯಿ ಮತ್ತು ಮೋದಿ ಮಧ್ಯೆ ಭಿನ್ನಾಭಿಪ್ರಾಯವಿತ್ತು.

ಪ್ರಶ್ನೆ: 2002ರ ಗುಜರಾತ್ ದಂಗೆಗಳ ಸಮಯದಲ್ಲಿ ಏನು ನಡೆಯುತ್ತಿದೆ ಎಂದು ನಿಮಗೆ ಮಾಹಿತಿಯಿದ್ದರೂ ಅವುಗಳನ್ನು ತಕ್ಷಣ ನಿಯಂತ್ರಿಸಲು ಯಾಕೆ ಸಾಧ್ಯವಾಗಲಿಲ್ಲ?
ಸುಧೀಂದ್ರ ಕುಲಕರ್ಣಿ: ಹೌದು, 2002ರ ಗುಜರಾತ್ ದಂಗೆಗಳನ್ನು ಕಠಿಣ ರೀತಿಯಲ್ಲಿ ತ್ವರಿತವಾಗಿ ನಿಯಂತ್ರಿಸಬೇಕಿತ್ತು ಎಂಬುದನ್ನು ನಾನು ಒಪ್ಪುತ್ತೇನೆ. ಈ ವಿಷಯದಲ್ಲಿ ವಾಜಪೇಯಿ ಮತ್ತು ಆ ಸಮಯದಲ್ಲಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ನರೇಂದ್ರ ಮೋದಿ ಮಧ್ಯೆ ಭಿನ್ನಾಭಿಪ್ರಾಯಗಳಿದ್ದವು. 2004ರಲ್ಲಿ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿ ಇದಕ್ಕೆ ಬೆಲೆ ತೆರಬೇಕಾಯಿತು.

ಪ್ರಶ್ನೆ: ಕೋಮು ದಂಗೆಗಳು ಭಾರತಕ್ಕೆ ಹೊಸತೇನೂ ಅಲ್ಲ, ಆದರೆ ಮಾಹಿತಿ ಮತ್ತು ಸಾಮಾಜಿಕ ಮಾಧ್ಯಮಗಳ ಈ ಕಾಲದಲ್ಲಿ ದೇಶದ ಪ್ರತಿಷ್ಠೆಯ ಮೇಲೆ ಇವುಗಳು ಬೀರುವ ಪರಿಣಾಮವಾದರೂ ಏನು?
ಸುಧೀಂದ್ರ ಕುಲಕರ್ಣಿ: ನಿಸ್ಸಂಶಯವಾಗಿ, ಕೋಮು ದಂಗೆಗಳು ಜಾಗತಿಕ ಮಟ್ಟದಲ್ಲಿ ಭಾರತದ ಪ್ರತಿಷ್ಠೆಯ ಮೇಲೆ ಋಣಾತ್ಮಕ ಪ್ರಭಾವ ಬೀರಿವೆ. ಅಂತರ್ಜಾಲದ ಈ ಯುಗದಲ್ಲಿ ಮಾಹಿತಿ ಅತ್ಯಂತ ವೇಗವಾಗಿ ಇಡೀ ಜಗತ್ತನ್ನೇ ತಲುಪುತ್ತದೆ.

ಪ್ರಶ್ನೆ: ನಾವು ಇತಿಹಾಸವನ್ನು ನೈಜವಾಗಿ ನೋಡುವ ಧೈರ್ಯ ತೋರಿಸಬೇಕು ಎಂದು ನೀವೊಮ್ಮೆ ಹೇಳಿದ್ದೀರಿ, ಕೋಮು ದ್ವೇಷವನ್ನು ಕೊನೆಗೊಳಿಸಲು ಇರುವ ಪ್ರತಿತಂತ್ರ ಯಾವುದು?
ಸುಧೀಂದ್ರ ಕುಲಕರ್ಣಿ: ಇತಿಹಾಸವನ್ನು ಪ್ರಾಮಾಣಿಕವಾಗಿ ಅರ್ಥಮಾಡಿಕೊಳ್ಳುವುದು ಮತ್ತು ಹಿಂದು ಮತ್ತು ಮುಸ್ಲಿಮರು ಮಾಡಿರುವ ತಪ್ಪುಗಳಿಂದ ಕಲಿಯುವುದರಲ್ಲಿ ನಾವು ಭಾರತ ಮತ್ತು ದಕ್ಷಿಣ ಏಶ್ಯಾದ ಹಲವು ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದು ಎನ್ನುವುದು ನನ್ನ ದೃಢ ನಂಬಿಕೆ. ಮುಖ್ಯವಾಗಿ, ಕೋಮು ದ್ವೇಷ ಮತ್ತು ಹಿಂಸಾಚಾರವನ್ನು ಕೊನೆಗೊಳಿಸಲು ನಾವು ಎರಡು ವಿಷಯಗಳ ಮೇಲೆ ಕೆಲಸ ಮಾಡಬೇಕಿದೆ; ಹಿಂದು-ಮುಸ್ಲಿಂ ಸೌಹಾರ್ದತೆ ಮತ್ತು ಭಾರತ-ಪಾಕಿಸ್ತಾನ ಸಂಬಂಧ ಸಾಮಾನ್ಯಗೊಳಿಸುವುದು. ಈ ಎರಡೂ ವಿಷಯಗಳು ಪರಸ್ಪರ ಸಂಬಂಧ ಹೊಂದಿವೆ. ಭಾರತ ಮತ್ತು ಪಾಕಿಸ್ತಾನದ ಮಧ್ಯೆ ಮತ್ತೆ ಸಾಮರಸ್ಯ ಮೂಡಿಸುವುದು ಕೇವಲ ಎರಡು ದೇಶಗಳಲ್ಲಿ ಶಾಂತಿ ಮತ್ತು ಪ್ರಗತಿಗೆ ಅತ್ಯಗತ್ಯ. ಮಾತ್ರವಲ್ಲ ಜೊತೆಗೆ ಇಡೀ ದಕ್ಷಿಣ ಏಶ್ಯಾದಲ್ಲಿ ಶಾಂತಿ ಮತ್ತು ಪ್ರಗತಿಗೆ ಇದು ಅಗತ್ಯ.
ಭಾರತ ಹಿಂದು ರಾಷ್ಟ್ರವಾಗಿದ್ದು ಪ್ರಧಾನವಾಗಿ ಹಿಂದುಗಳಿಗೆ ಸೇರಿದ್ದು (ಹಾಗಾಗಿ ಮುಸ್ಲಿಮರು ಎರಡನೇ ಪ್ರಜೆಗಳ ದರ್ಜೆಗೆ ತಳ್ಳಲ್ಪಡುವರು) ಎನ್ನುವುದು ತಪ್ಪಾಗಿದ್ದರೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಮುಸ್ಲಿಂ ರಾಷ್ಟ್ರಗಳು (ಹಾಗಾಗಿ ಹಿಂದುಗಳು, ಸಿಖ್ ಮತ್ತು ಇತರ ಅಲ್ಪಸಂಖ್ಯಾತರು ಎರಡನೇ ಪ್ರಜೆ ದರ್ಜೆಗೆ ನೂಕಲ್ಪಡುವರು) ಎಂದು ಭಾವಿಸುವುದೂ ತಪ್ಪೆ. ಪಾಕಿಸ್ತಾನ ವಿರೋಧಿ ಅಭಿಯಾನ ಮುಸ್ಲಿಂ ವಿರೋಧಿ ಹಿಂಸಾಚಾರಕ್ಕೆ ಪ್ರಚೋದನೆ ನೀಡುತ್ತದೆ.

ಪ್ರಶ್ನೆ: ಭಾರತದಲ್ಲಿ ಹೆಚ್ಚುತ್ತಿರುವ ದ್ವೇಷ ಮತ್ತು ಕೋಮು ಧ್ರುವೀಕರಣಕ್ಕೆ ಮುಖ್ಯ ಕಾರಣಗಳು ಯಾವುವು?
ಸುಧೀಂದ್ರ ಕುಲಕರ್ಣಿ: ಇದಕ್ಕೆ ಕಾರಣಗಳು ಭಾಗಶಃ ಐತಿಹಾಸಿಕ ಮತ್ತು ಭಾಗಶಃ ಸಮಕಾಲೀನವಾಗಿದೆ. 1947ರಲ್ಲಿ ಬ್ರಿಟಿಷರ ವಸಾಹತುಶಾಹಿ ಕೊನೆಗೊಂಡಾಗ ಭಾರತವನ್ನು ವಿಭಜಿಸಲಾಯಿತು ಮತ್ತು ಪಾಕಿಸ್ತಾನ ಎಂಬ ಮುಸ್ಲಿಂ ರಾಷ್ಟ್ರವನ್ನು ರಚಿಸಲಾಯಿತು. ಪಾಕಿಸ್ತಾನದ ರಚನೆಗೆ ಆಧಾರವಾದ ಮುಸ್ಲಿಂ ಲೀಗ್‌ನ ಎರಡು ದೇಶವಾದ ತಪ್ಪಾಗಿತ್ತು. ಯಾಕೆಂದರೆ ಅದು ಮುಸ್ಲಿಮರು ಮತ್ತು ಹಿಂದುಗಳು ಎರಡು ಭಿನ್ನ ದೇಶಗಳಿಗೆ ಸೇರಿದವರಾಗಿದ್ದು ಅವರು ಜೊತೆಯಾಗಿ ಜೀವಿಸಲು ಸಾಧ್ಯವಿಲ್ಲ ಎಂದು ವಾದಿಸಿತ್ತು. ಆದರೆ ಸತ್ಯವೆಂದರೆ, ಪೇಶಾವರದಿಂದ (ಈಗಿನ ಪಾಕಿಸ್ತಾನ) ಢಾಕಾ (ಈಗಿನ ಬಾಂಗ್ಲಾದೇಶ, 1947ರಲ್ಲಿ ಪೂರ್ವ ಪಾಕಿಸ್ತಾನ)ದವರೆಗೆ ಹಿಂದುಗಳು ಮತ್ತು ಮುಸ್ಲಿಮರು ಶತಮಾನಗಳಿಂದಲೂ ಜೊತೆಯಾಗಿ ಜೀವಿಸುತ್ತಿದ್ದಾರೆ.

1947ರಲ್ಲಿ ಭಾರತ ವಿಭಜನೆಯ ಸಮಯದಲ್ಲಿ ಕೋಮು ಹಿಂಸಾಚಾರ ಭುಗಿಲೆದ್ದು ರಕ್ತಪಾತವೇ ನಡೆದು ಲಕ್ಷಾಂತರ ಹಿಂದುಗಳು, ಸಿಖ್ಖರು ಮತ್ತು ಮುಸ್ಲಿಮರು ಹತ್ಯೆಗೀಡಾದರು. ಭಾರತದ ಅನೇಕ ಮುಸ್ಲಿಮರು ಪಾಕಿಸ್ತಾನಕ್ಕೆ ತೆರಳಿದರೆ ಬಹುತೇಕ ಎಲ್ಲ ಹಿಂದುಗಳು ಮತ್ತು ಸಿಖ್ಖರು ಪಾಕಿಸ್ತಾನ ತೊರೆದು ಭಾರತಕ್ಕಾಗಮಿಸಿದ ಪರಿಣಾಮ ನಿರಾಶ್ರಿತರ ಸಂಖ್ಯೆ ಸುಮಾರು ಒಂದೂವರೆ ಕೋಟಿಯಷ್ಟಿತ್ತು. ಇದು ಮಾನವ ಇತಿಹಾಸದಲ್ಲೇ ಅತ್ಯಂತ ಬೃಹತ್ ಪ್ರಮಾಣದಲ್ಲಿ ನಡೆದ ಪರಸ್ಪರ ಗಡಿ ವಲಸೆಯಾಗಿದೆ. ಈ ಕಹಿ ಘಟನೆಯ ನೆನಪುಗಳು ಇನ್ನು ಮಾಸಿಲ್ಲ.
ಜೊತೆಗೆ ಪರಿಹಾರಗೊಳ್ಳದ ಕಾಶ್ಮೀರ ಸಮಸ್ಯೆ ಮತ್ತು ಭಾರತ ಮತ್ತು ಪಾಕಿಸ್ತಾನ ಮಧ್ಯೆ ನಡೆದ ನಾಲ್ಕು ಯುದ್ಧಗಳು ಉಭಯ ದೇಶಗಳ ನಡುವಿನ ಸಂಬಂಧವನ್ನು ಮತ್ತಷ್ಟು ಹಳಸುವಂತೆ ಮಾಡಿದೆ. ಪಾಕಿಸ್ತಾನದ ಇಸ್ಲಾಮೀಕರಣ, ಅಲ್ಪಸಂಖ್ಯಾತ ಹಿಂದು, ಸಿಖ್ಖ್ ಮತ್ತು ಕ್ರೈಸ್ತರ ಮೇಲೆ ನಡೆವ ಜನಾಂಗೀಯ ಶೋಷಣೆ ಹಾಗೂ ಪಾಕಿಸ್ತಾನ ಮೂಲದ ಗುಂಪುಗಳಿಂದ ಭಾರತದಲ್ಲಿ ಉಗ್ರವಾದ ಚಟುವಟಿಕೆಗಳಿಂದಾಗಿ ಭಾರತದಲ್ಲಿ ಪಾಕಿಸ್ತಾನ ವಿರೋಧಿ ವಾತಾವರಣ ಸೃಷ್ಟಿಯಾಗಿದೆ. ಭಾರತದ ಹಿಂದು ಕೋಮುವಾದಿ ಸಂಸ್ಥೆಗಳು ಇದನ್ನು ಸಮಕಾಲೀನ ಸಮಯದಲ್ಲಿ ಮುಸ್ಲಿಂ ವಿರೋಧಿ ದ್ವೇಷ ಮತ್ತು ಹಿಂಸಾಚಾರ ಹರಡಲು ಬಳಸಿಕೊಳ್ಳುತ್ತಿವೆ.

ಈ ಹಿನ್ನೆಲೆಯಲ್ಲಿ, ಇತ್ತೀಚೆಗೆ ದಿಲ್ಲಿಯಲ್ಲಿ ನಡೆದ ಮುಸ್ಲಿಂ ವಿರೋಧಿ ದಂಗೆಗಳ ಸಮಯದಲ್ಲಿ ಪ್ರತೀಕಾರವಾಗಿ ಪಾಕಿಸ್ತಾನ ಅಲ್ಪಸಂಖ್ಯಾತರಿಗೆ ಕಿರುಕುಳ ನೀಡಲು ಮುಂದಾದರೆ ತನ್ನ ಸರಕಾರ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಹೇಳಿಕೆ ನೀಡಿರುವುದಕ್ಕೆ ನಾನು ಅವರಿಗೆ ಮನಪೂರ್ವಕವಾಗಿ ಅಭಿನಂದನೆ ಸಲ್ಲಿಸುತ್ತೇನೆ.‘ಅಲ್ಪಸಂಖ್ಯಾತರು ಪಾಕಿಸ್ತಾನದ ಸಮಾನ ಪ್ರಜೆಗಳು’ ಎಂದು ಅವರು ಹೇಳಿದ್ದರು. ಈ ಹೇಳಿಕೆ ಶ್ಲಾಘನೀಯ ಮತ್ತು ಭರವಸೆ ಮೂಡಿಸುವಂತದ್ದು.

ಪ್ರಶ್ನೆ: ಹಿಂದು-ಮುಸ್ಲಿಂ ರಾಜಿ ಸಂಧಾನದ ಭರವಸೆಯೇನಾದರೂ ಇದೆಯೇ?
ಸುಧೀಂದ್ರ ಕುಲಕರ್ಣಿ: ಧಾರ್ಮಿಕ ಸ್ವಾತಂತ್ರ ಮತ್ತು ಸಹಿಷ್ಣುತೆ ಭಾರತೀಯ ನಾಗರಿಕತೆಯ ಪ್ರಮಾಣಿತ ಭಾಗವಾಗಿದೆ. ಯಾಕೆಂದರೆ, ಅಸಂಖ್ಯಾತ ಸಂತರು ಮತ್ತು ಋಷಿಗಳು ಪ್ರಾಚೀನ ಕಾಲದಿಂದ ಸಮಕಾಲೀನ ಸಮಯದ ವರೆಗೂ ಮಾನವ ಸಮಾನತೆ, ಪರಸ್ಪರ ಗೌರವ, ಶಾಂತಿ ಮತ್ತು ಅಹಿಂಸೆಯ ಸಂದೇಶದ ಬೋಧನೆ ಮತ್ತು ಆಚರಣೆ ಮಾಡುತ್ತಲೇ ಬಂದಿದ್ದಾರೆ. ಭಗವಾನ್ ಬುದ್ಧ ಮತ್ತು ಮಹಾತ್ಮ ಗಾಂಧಿ ಈ ಎರಡು ಹೆಸರುಗಳೇ ಈ ಮಾತನ್ನು ಸಾಬೀತುಪಡಿಸಲು ಸಾಕು. ಹಿಂದು ಮುಸ್ಲಿಂ ಸಹೋದರತೆ ಮತ್ತು ಭಾರತ-ಪಾಕಿಸ್ತಾನ ಶಾಂತಿಯ ವಿಷಯದಲ್ಲಿ ಯಾವುದೇ ರಾಜಿಯಿಲ್ಲದ ತನ್ನ ನಿಲುವಿನಿಂದಾಗಿ ಗಾಂಧಿಯನ್ನು ಹಿಂದು ತೀವ್ರವಾದಿಗಳು 1948ರ ಜನವರಿ 30ರಂದು ಹತ್ಯೆಗೈದರು.

ಇಂದು ಕೂಡ ಭಾರತದಾದ್ಯಂತ ಬಹುಪಾಲು ಹಿಂದುಗಳು ಮತ್ತು ಮುಸ್ಲಿಮರು ಜೊತೆಯಾಗಿಯೇ ಜೀವಿಸುತ್ತಿದ್ದಾರೆ. ಎರಡೂ ಕಡೆಗಳಲ್ಲಿ ತೀವ್ರವಾದಿ ಮತ್ತು ಕೋಮು ಮಾನಸಿಕತೆಯ ಗುಂಪುಗಳಿವೆ, ಆದರೆ ಅವುಗಳ ಸಂಖ್ಯೆ ಬಹಳ ಕಡಿಮೆ. ಬಹಳ ಮುಖ್ಯವಾಗಿ, ಭಾರತದ ಬಹುತೇಕ ರಾಜಕೀಯ ಪಕ್ಷಗಳು ಸಾಂವಿಧಾನಿಕ ಸಿದ್ಧಾಂತ ಜಾತ್ಯತೀತತೆಯನ್ನು ಅನುಸರಿಸುತ್ತಿವೆ. ಹಾಗಾಗಿ, ಭಾರತದಲ್ಲಿ ಹಿಂದು-ಮುಸ್ಲಿಂ ರಾಜಿಯ ಬಗ್ಗೆ ನಾನು ಬಹಳ ವಿಶ್ವಾಸ ಹೊಂದಿದ್ದೇನೆ. ಭಾರತೀಯ ಸಿನೆಮಾರಂಗ ಒಂದು ಭರವಸೆ.

ಪ್ರಶ್ನೆ: ಕೋಮು ದಂಗೆಗಳು ಮರುಕಳಿಸದಂತೆ ಇರುವ ನಿರೋಧಕ ಯಾವುದು?
ಸುಧೀಂದ್ರ ಕುಲಕರ್ಣಿ: ಭಾರತ ಅಥವಾ ಜಗತ್ತಿನ ಇತರ ಯಾವುದೇ ಬಹುಧರ್ಮೀಯ ರಾಷ್ಟ್ರದಲ್ಲಿ ಕೋಮು ಹಿಂಸಾಚಾರ ಮರುಕಳಿಸದಂತೆ ಪರಿಣಾಮಕಾರಿಯಾಗಿ ತಡೆಯಲು ಇರುವ ನಿರೋಧಕ ಎರಡು ಆಧಾರಸ್ತಂಭಗಳ ಮೇಲೆ ನಿಂತಿದೆ. ಒಂದು, ಸರಕಾರ ತನ್ನೆಲ್ಲ ವ್ಯವಹಾರಗಳಲ್ಲಿ ನಿಷ್ಪಕ್ಷವಾಗಿರಬೇಕು. ಮುಖ್ಯವಾಗಿ, ಪೊಲೀಸ್ (ಇತರ ಭದ್ರತಾ ಪಡೆಯೂ ಸೇರಿ) ಮತ್ತು ನ್ಯಾಯಾಂಗ ಸ್ವತಂತ್ರ ಮತ್ತು ನಿಷ್ಪಕ್ಷವಾಗಿರಬೇಕು. ಇದರಿಂದ ಪ್ರತಿ ಪ್ರಜೆಯೂ ಸುರಕ್ಷಿತ ಮತ್ತು ಭದ್ರ ಎಂದು ಭಾವಿಸಬಹುದು ಮತ್ತು ಕೆಡುಕು ಮಾಡುವವರ ವಿರುದ್ಧ ನ್ಯಾಯದ ನಿರೀಕ್ಷೆಯಿಡಬಹುದು.

ಎರಡನೇ ಆಧಾರ ಸ್ತಂಭವೆಂದರೆ ವಿವಿಧ ಧಾರ್ಮಿಕ ಮತ್ತು ಜನಾಂಗೀಯ ಸಮುದಾಯಗಳ ಜನರ ಮಧ್ಯೆ ಸಾಮಾಜಿಕ ಏಕತೆ. ಸಮುದಾಯಗಳು ಒಂದಾದಾಗ ಮತ್ತು ಶಾಂತಿ ಮತ್ತು ಸಹಕಾರದೊಂದಿಗೆ ಜೊತೆಯಾಗಿ ಜೀವಿಸಲು ಬದ್ಧವಾದಾಗ ಯಾವುದೇ ಕೋಮುವಾದಿ ಶಕ್ತಿಗಳು (ಹಿಂದು ಅಥವಾ ಮುಸ್ಲಿಂ) ದ್ವೇಷವನ್ನು ಬಿತ್ತಲು ಬಹಳ ಕಷ್ಟಪಡಬೇಕಾಗುತ್ತದೆ.

ಪ್ರಶ್ನೆ: ಬಾಲಿವುಡ್ ಎಂದು ಕರೆಯಲ್ಪಡುವ ಚಿತ್ರರಂಗದ ಮೂಲಕ ಮುಂಬೈ ಭಾರತ ಮತ್ತು ಪಾಕಿಸ್ತಾನವನ್ನು ಹತ್ತಿರ ತರಬಲ್ಲದು ಎಂದು ಪ್ರಸ್ತಾಪಿಸಿದ್ದೀರಿ. ಆದರೆ ಕೆಲವು ವರ್ಷಗಳಿಂದ ಬಾಲಿವುಡ್ ಕೂಡಾ ರಾಷ್ಟ್ರೀಯತೆಯ ಉನ್ಮಾದಕ್ಕೆ ಒಳಗಾಗಿದ್ದು ಧ್ರುವೀಕರಣಕ್ಕೆ ಕಾರಣವಾಗುತ್ತಿದೆಯಲ್ಲ?
ಸುಧೀಂದ್ರ ಕುಲಕರ್ಣಿ: ಬಾಲಿವುಡ್‌ನ ಕೆಲವೊಂದು ಮಂದಿ ರಾಷ್ಟ್ರೀಯತೆಯ ಉನ್ಮಾದಕ್ಕೊಳಗಾಗುತ್ತಿದ್ದು, ಧ್ರುವೀಕರಣಕ್ಕೆ ತಮ್ಮ ಕಾಣಿಕೆ ನೀಡುತ್ತಿದ್ದಾರೆ ಎನ್ನುವುದು ಸತ್ಯ ಮತ್ತು ಇದು ದುಃಖಕರ ಕೂಡ. ಆದರೆ ಒಟ್ಟಾರೆ ಬಾಲಿವುಡ್ ಭಾರತದಲ್ಲಿ ಕೋಮು ಸೌಹಾರ್ದತೆ ಮತ್ತು ರಾಷ್ಟ್ರೀಯ ಏಕೀಕರಣ ಹಾಗೂ ಜಗತ್ತಿನಾದ್ಯಂತ ಮಾನವೀಯ ಆದರ್ಶಗಳನ್ನು ಹರಡುವಲ್ಲಿ ಗಮನಾರ್ಹ ಸೇವೆಯನ್ನು ಸಲ್ಲಿಸುತ್ತಿದೆ. ಇಂದಿಗೂ ಹಿಂದು ಬಾಹುಳ್ಯ ಭಾರತದ ಅಗ್ರ ಮೂರು ಸಿನೆಮಾ ತಾರೆಯರು ಶಾರುಖ್ ಖಾನ್, ಆಮಿರ್ ಖಾನ್ ಮತ್ತು ಸಲ್ಮಾನ್ ಖಾನ್ ಎಂಬ ಮೂವರು ಮುಸಲ್ಮಾನರು.

ಭಾರತೀಯ ಸಿನೆಮಾ ಪಾಕಿಸ್ತಾನದಲ್ಲಿ ಅತ್ಯಂತ ಜನಪ್ರಿಯಾಗಿದೆ ಮತ್ತು ಪಾಕಿಸ್ತಾನದ ಅನೇಕ ಪ್ರಸಿದ್ಧ ಕವಿಗಳು, ಸಂಗೀತಗಾರರು ಮತ್ತು ಕಲಾವಿದರನ್ನು ಭಾರತದಲ್ಲಿ ಬಹಳ ಗೌರವಿಸಲಾಗುತ್ತದೆ. ಇದಕ್ಕೊಂದು ಉದಾಹರಣೆ ನೀಡುವುದಾದರೆ, ಇತ್ತೀಚೆಗೆ ದೇಶಾದ್ಯಂತ ನಡೆದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನೆಗಳಲ್ಲಿ ಅತ್ಯಂತ ಜನಪ್ರಿಯವಾದ ಹಾಡನ್ನು ಬರೆದ ಫೈಝ್ ಅಹ್ಮದ್ ಫೈಝ್ ಪಾಕಿಸ್ತಾನದವರು. ಹಾಗಾಗಿ, ಭಾರತ ಮತ್ತು ಪಾಕಿಸ್ತಾನವನ್ನು ಹತ್ತಿರಕ್ಕೆ ತರುವ ವಿಷಯದಲ್ಲಿ ಬಾಲಿವುಡ್‌ಗಿರುವ ಶಕ್ತಿಯ ಬಗ್ಗೆ ನಾನು ಆಶಾವಾದ ಹೊಂದಿದ್ದೇನೆ.

ಪ್ರಶ್ನೆ: ಪ್ರಧಾನ ಮಂತ್ರಿ ನರೇಂದ್ರ ಮೋದಿ ತನ್ನ ಆಡಳಿತವನ್ನು ಆರ್ಥಿಕತೆ, ರಾಜತಾಂತ್ರಿಕತೆ, ಡಿಜಿಟಲ್ ಇಂಡಿಯಾ, ಸ್ವಚ್ಛ ಭಾರತ ಮುಂತಾದ ಭರವಸೆಗಳೊಂದಿಗೆ ಆರಂಭಿಸಿದರು. ಆದರೆ ಚುನಾವಣೆಗಳಲ್ಲಿ ಗೆಲ್ಲಲು, ಆರ್ಥಿಕ ಕ್ಷೇತ್ರದಲ್ಲಿ ತಮ್ಮ ಸರಕಾರ ಮಾಡಿರುವ ಸಾಧನೆಯನ್ನು ತೋರಿಸುವ ಬದಲು ಬಲಪಂಥೀಯ ಉಪದ್ರವಕಾರಿ ಪಡೆಗಳನ್ನು ಬೆಂಬಲಿಸುವ ಅಗತ್ಯ ಅವರಿಗೆ ಯಾಕೆ ಬಿತ್ತು?
ಸುಧೀಂದ್ರ ಕುಲಕರ್ಣಿ: ನಾನು ಒಪ್ಪುತ್ತೇನೆ. 2014 ಮತ್ತು 2019ರಲ್ಲಿ ಸಾರ್ವತ್ರಿಕ ಚುನಾವಣೆಗಳಲ್ಲಿ ಐತಿಹಾಸಿಕ ಜನಾದೇಶ ಪಡೆಯಲು ಪ್ರಧಾನಿ ನರೇಂದ್ರ ಮೋದಿ ಅದೃಷ್ಟವಂತರು. ಅಂತಹ ಬೃಹತ್ ಜನಾದೇಶದೊಂದಿಗೆ ಅವರು ಎಲ್ಲ ರಂಗಗಳಲ್ಲೂ ಒಳಗೊಳ್ಳುವಿಕೆ ಮತ್ತು ತ್ವರಿತ ರೀತಿಯ ಅಭಿವೃದ್ಧಿಯ ಹಾದಿಯಲ್ಲಿ ಭಾರತವನ್ನು ಕೊಂಡೊಯ್ಯಬಹುದಿತ್ತು. ಮುಖ್ಯವಾಗಿ, ಲಕ್ಷಾಂತರ ಭಾರತೀಯರ ಜೀವನವನ್ನೇ ಕಸಿದುಕೊಂಡಿರುವ ಬಡತನ ಮತ್ತು ಹಿಂದುಳಿಯುವಿಕೆಯನ್ನು ಹೋಗಲಾಡಿಸಬಹುದಿತ್ತು. ಅವರು ಧ್ರುವೀಕರಣದ ರಾಜಕೀಯವನ್ನು ಅವಲಂಬಿಸುವ ಅಗತ್ಯವಿರಲಿಲ್ಲ.