►ರೂ. 50,000 ಪಾವತಿಸುವಂತೆ ಒತ್ತಾಯಿಸಿದ್ದ ಗೂಂಡಾಗಳು
►‘ಪ್ರತಿ ತಿಂಗಳು 25,000 ಪಾವತಿಸಿದರೆ ನೀನು ವ್ಯವಹಾರ ಮಾಡಬಹುದು’
ದೇಶದಲ್ಲಿ ಕೊರೋನಾ ಅಟ್ಟಹಾಸಗೈಯ್ಯುತ್ತಿದ್ದರೆ ಮತ್ತೊಂದೆಡೆ ಹಿಂದುತ್ವ ಫ್ಯಾಶಿಸ್ಟ್ ಗೂಂಡಾಗಳು ಗೋ ರಕ್ಷಣೆಯ ಹೆಸರಿನಲ್ಲಿ ಮುಸ್ಲಿಂ ಯುವಕರ ಮೇಲೆ ದಾಳಿಯನ್ನು ಮುಂದುವರಿಸಿದ್ದಾರೆ. ಉತ್ತರ ಪ್ರದೇಶದ ಮೊರಾದಾಬಾದ್ ನಲ್ಲಿ ಎಮ್ಮೆ ಮಾಂಸ ಕೊಂಡೊಯ್ಯುತ್ತಿದ್ದ 32 ವರ್ಷ ಪ್ರಾಯದ ಶಾಕಿರ್ ಎಂಬವರ ಮೇಲೆ ಗೋರಕ್ಷಕ ದಳ ಗುಂಪೊಂದು ಹಾಡಹಗಲೇ ತೀವ್ರವಾಗಿ ಥಳಿಸಿರುವ ಘಟನೆ ಮೇ 23ರಂದು ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಈ ಸಂಬಂಧದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಎರಡು ಎಫ್ಐಆರ್ ದಾಖಲಾದ ಬೆನ್ನಲ್ಲೇ, ಸಂತ್ರಸ್ತ ಶಾಕಿರ್ ಮೇಲೆ ರಾಜಿ ಮಾಡಿಕೊಳ್ಳುವಂತೆ ಒತ್ತಡ ಹೆಚ್ಚಾಗುತ್ತಿದೆ.
ಇದು ದನದ ಮಾಂಸ ಅಲ್ಲ, ಕೋಣದ ಮಾಂಸ ಎಂದು ಕಿರುಚುತ್ತಿದ್ದರೂ ಹಲ್ಲೆಕೋರರು ತನ್ನ ಮೇಲೆ ಯದ್ವಾತದ್ವ ಥಳಿಸುತ್ತಲೇ ಇದ್ದರು ಎಂದು ಹಲ್ಲೆಗೊಳದಾದ ಶಾಕೀರ್ ಅಂದಿನ ಘಟನೆಯನ್ನು ವಿವರಿಸಿದ್ದಾರೆ. ‘ದಿ ಕ್ವಿಂಟ್” ಘಟನೆ ನಡೆದ ಮರುದಿನವೇ ಸಂತ್ರಸ್ತ ಶಾಕೀರ್ ಅವರನ್ನು ಸಂಪರ್ಕಿಸಿತ್ತು. ಆದರೆ ಅಂದು ಅವರು ಮಾತನಾಡುವ ಸ್ಥಿತಿಯಲ್ಲಿರಲಿಲ್ಲ. ಇದೀಗ ಸ್ವಲ್ಪ ಚೇತರಿಸಿಕೊಂಡಿರುವ ಶಾಕೀರ್ ಅಂದಿನ ಘಟನೆಯನ್ನು ಮೆಲುಕು ಹಾಕಿದ್ದಾರೆ. ಪ್ರತ್ಯಕ್ಷದರ್ಶಿಯೊಬ್ಬರ ದೂರಿನ ಮೇರೆಗೆ ಎಫ್ಐಆರ್ ದಾಖಲಿಸಲಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿ ನಾಲ್ವರನ್ನು ಬಂಧಿಸಲಾಗಿದೆ. ಮುಖ್ಯ ಆರೋಪಿ ಭಾರತೀಯ ಗೋರಕ್ಷ ವಾಹಿನಿ ಉಪಾಧ್ಯಕ್ಷ ಎಂದು ಕರೆದುಕೊಳ್ಳುವ ಗೂಂಡಾ ಮನೋಜ್ ಠಾಕೂರ್ ಎಂಬಾತ ಪರಾರಿಯಾಗಿದ್ದಾನೆ.
ಠಾಕೂರ್ ಸೇರಿದಂತೆ ಇತರ ಐದು ಮಂದಿ ಗೋರಕ್ಷಕ ಗೂಂಡಾಗಳನ್ನು ಸಹ ಆರೋಪಿಗಳೆಂದು ಎಫ್ ಐಆರ್ ನಲ್ಲಿ ಹೆಸರಿಸಲಾಗಿದೆ. ಪ್ರದೀಪ್, ಬಾಬು, ಗುಲ್ಶನ್ ಅಲಿಯಾಸ್ ಗುಲ್ಲಿ, ಸುಮಿತ್, ವಿಜಯ್, ಮತ್ತು ಇತರ ನಾಲ್ವರು ಅಪರಿಚಿತ ವಿರುದ್ಧ ಸೆಕ್ಷನ್ 147 (ಗಲಭೆ), 148 (ಮಾರಣಾಂತಿಕ ಆಯುಧ ಸಂಗ್ರಹ), 149 (ಕಾನೂನುಬಾಹಿರ ಜಮಾವಣೆ), 389 (ಸುಲಿಗೆ) ಸೇರಿದಂತೆ ಭಾರತೀಯ ದಂಡ ಸಂಹಿತೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಲಾಗಿದೆ. ಶಾಕೀರ್ ಅವರನ್ನು ಮರಕ್ಕೆ ಕಟ್ಟಿ ಹಾಕಿ ಸುಮಾರು ಒಂದು ಗಂಟೆಯವರೆಗೂ ದುಷ್ಕರ್ಮಿಗಳು ಥಳಿಸುತ್ತಿದ್ದರು. ಇದನ್ನು ನಾವು ನೋಡಿದ್ದೇನೆ ಎಂದು ಪ್ರತ್ಯಕ್ಷದರ್ಶಿ ಹಾಗೂ ದೂರುದಾರ ಜುನೈದ್ ತಿಳಿಸಿದ್ದಾರೆ.
“ನಾನು ಕೋಣದ ಮಾಂಸವನ್ನು ತೆಗೆದುಕೊಂಡು ಹೋಗುತ್ತಿದ್ದಾಗ ಈ ಜನರು ನನ್ನನ್ನು ತಡೆದು ನಿಲ್ಲಿಸಿ ಸುತ್ತುವರಿದರು. ನನ್ನನ್ನು ವಾಹನದಿಂದ ಇಳಿಸಿದ ಕೂಡಲೇ ನನ್ನ ಮೇಲೆ ಏಕಾಏಕಿ ಹಲ್ಲೆ ನಡೆಸಲು ಪ್ರಾರಂಭಿಸಿದರು. ಮನೋಜ್ ಠಾಕೂರ್ ನೇತೃತ್ವದ ಈ ಗುಂಪಿನಲ್ಲಿ ಎಂಟರಿಂದ ಹತ್ತು ಮಂದಿ ಇದ್ದರು ಎಂದು ಶಾಕಿರ್ ಹೇಳುತ್ತಾರೆ. “ಅವರು ನನ್ನನ್ನು ಮರಕ್ಕೆ ಕಟ್ಟಿ ಅಲ್ಲಿ ಜನರನ್ನು ಸೇರಿಸಿ ನನ್ನ ಮೇಲೆ ಮನಸೋ ಇಚ್ಛೇ ಥಳಿಸಿದರು ಎಂದು ಅವರು ಆರೋಪಿಸಿದ್ದಾರೆ. “ಹಲ್ಲೆಕೋರರು 50,000 ರೂ. ಗೆ ಬೇಡಿಕೆ ಇಟ್ಟರು. ನನ್ನ ಕಿವಿಗೆ ಬಲವಾಗಿ ಹೊಡೆದರು. ತಕ್ಷಣ ಮನೆಗೆ ಕರೆ ಮಾಡಿ 50,000 ರೂ. ಹೊಂದಿಸಬೇಕು. ಹಾಗಾದರೆ ಮಾತ್ರ ಇಲ್ಲಿಂದ ಹೋಗಲು ಬಿಡುವುದಾಗಿ ಅವರು ನನಗೆ ತಿಳಿಸಿದರು. ನನ್ನ ಕೆಲಸವನ್ನು ಮುಂದುವರಿಸಬೇಕಾರೆ ನಾನು ಅವರಿಗೆ ಪ್ರತಿ ತಿಂಗಳು 25 ಸಾವಿರ ರೂಪಾಯಿಗಳನ್ನು ನೀಡುವಂತೆ ಅವರು ಬೆದರಿಸಿದರು. ನಾನು ಹಣ ಪಾವತಿಸದಿದ್ದರೆ ಅವರು ಗೋಹತ್ಯೆ ಪ್ರಕರಣಗಳಲ್ಲಿ ನನ್ನ ಮೇಲೆ ಆರೋಪ ಹೊರಿಸುವುದಾಗಿ ಬೆದರಿಕೆ ಹಾಕಿದರು. ಈ ಎಲ್ಲಾ ವಿಷಯಗಳನ್ನು ಪೊಲೀಸರೊಂದಿಗೆ ಹಂಚಿಕೊಳ್ಳಲು ನನಗೆ ಧೈರ್ಯವಿಲ್ಲ ಎಂದು ಶಾಕೀರ್ ಹೇಳುತ್ತಾರೆ.
ನಾನು ಮೊರಾದಾಬಾದ್ ಗೆ ಹೋಗುತ್ತಿದ್ದಾಗ ಜನಸಮೂಹವೊಂದು ಕುತೂಹಲದಿಂದ ನಿಂತು ವೀಕ್ಷಿಸುತ್ತಿದ್ದರು. ಅದರ ಮಧ್ಯದಲ್ಲಿ ಶಾಕಿರ್ ಇರುವುದು ಕಾಣಿಸಿತು. ಶಾಕಿರ್ ಬಳಿ 500 ಗ್ರಾಂ ಎಮ್ಮೆಯ ಮಾಂಸವಿತ್ತು ಎಂದು ಪ್ರತ್ಯಕ್ಷದರ್ಶಿಯೂ ಆಗಿರುವ ಶಾಕಿರ್ ಅವರ ಸಂಬಂಧಿ ಜುನೈದ್ ತಿಳಿಸಿದ್ದಾರೆ. ನಾನು ಅಲ್ಲಿಗೆ ಹೋಗಿ ನೋಡಿದಾಗ ಮರಕ್ಕೆ ಶಾಕೀರ್ ನನ್ನು ಕಟ್ಟಿಹಾಕಲಾಗಿತ್ತು. ನಂತರ ಅವರು ಅವನನ್ನು ಬಿಚ್ಚಿ, ಕಪಾಳಕ್ಕೆ ಹೊಡೆದು, ನಿಂದಿಸಿದರು. ಅವರಿಗೆ 50,000 ರೂ ಪಾವತಿಸದಿದ್ದರೆ ಶಾಕೀರ್ ನನ್ನು ಕೊಲೆ ಮಾಡುತ್ತೇವೆ ಎಂದು ಅವರು ಬೆದರಿಸುತ್ತಿದ್ದರು. ಈ ದೃಶ್ಯಗಳ ವೀಡಿಯೊ ಮಾಡಿಕೊಳ್ಳಲು ಅವರು ಅವಕಾಶ ನೀಡಲಿಲ್ಲ. ನನ್ನ ಬಳಿ ಪುರಾವೆಗಳಿಲ್ಲ ಆದರೆ ನಾನು ಅದನ್ನು ಕಣ್ಣಾರೆ ಕಂಡಿದ್ದೇನೆ ಎಂದು ಜುನೈದ್ ಹೇಳಿದರು. ಇದೀಗ ಪ್ರಕರಣದ ರಾಜಿಮಾಡಿಕೊಳ್ಳುವಂತೆ ಶಾಕಿರ್ ಮೇಲೆ ಆರೋಪಿಗಳು ಬೆದರಿಕೆ ಹಾಕುತ್ತಿದ್ದಾರೆ ಎಂದು ದಿ ಕ್ವಿಂಟ್ ವರದಿ ಮಾಡಿದೆ.