ಸುಪ್ರೀಂ ಕೋರ್ಟಿನ ನಿರ್ದೇಶನವನ್ನು ಉಲ್ಲಂಘಿಸಿ ಯಾವುದಾದರೂ ಆಸ್ಪತ್ರೆ ಅಧಿಕ ಶುಲ್ಕ ಪಡೆಯುತ್ತಿದ್ದರೆ ಸಾಮಾಜಿಕ ಜಾಲತಾಣದ ಮೂಲಕ ತಮ್ಮ ಗಮನಕ್ಕೆ ತರಲು ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.
ಈ ಕುರಿತು ಟ್ವೀಟ್ ಮಾಡಿದ ಅವರು “ಕೋವಿಡ್‌ನಿಂದ ಕಂಗಾಲಾಗಿರುವ ಜನರಿಗೆ ಗಾಯದ ಮೇಲೆ ಬರೆ ಎಳೆದಂತೆ ಆಸ್ಪತ್ರೆಯ ಬಿಲ್ಲುಗಳೂ ಶಾಕ್ ನೀಡುತ್ತಿವೆ. ಮಾನ್ಯ ಸುಪ್ರೀಂ ಕೋರ್ಟ್ ಆದೇಶವನ್ನು ಉಲ್ಲಂಘಿಸಿ ಹಲವು ಆಸ್ಪತ್ರೆಗಳು ಹೆಚ್ಚಿನ ಶುಲ್ಕ ವಿಧಿಸುತ್ತಿವೆ. ಆಸ್ಪತ್ರೆಗಳ ಈ ಕೃತ್ಯ ಕೂಡಲೇ ಕೊನೆಯಾಗಬೇಕು. ನೀವು ಇಂತಹ ಸಮಸ್ಯೆ ಎದುರಿಸುತ್ತಿದ್ದರೆ ನನ್ನನ್ನು ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಟ್ಯಾಗ್ ಮಾಡಿ. ಕೂಡಲೇ ಆ ಕುರಿತು ಮಾಹಿತಿ ಪಡೆದು, ಸೂಕ್ತ ಕ್ರಮ ತೆಗೆದುಕೊಳ್ಳುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ #CongressCares” ಎಂದಿದ್ದಾರೆ.
“ಜನರಿಂದ ಅತ್ಯಧಿಕ ಶುಲ್ಕ ಪಡೆದು ಶೋಷಿಸುತ್ತಿರುವ ಆಸ್ಪತ್ರೆ ಹಾಗೂ ವೈದ್ಯಕೀಯ ಸೇವೆ ಒದಗಿಸುವವರನ್ನು ಕರ್ನಾಟಕ ಸರ್ಕಾರ ಪೋಷಿಸುತ್ತಿದೆ. ಮನುಕುಲದ ಸಂಕಷ್ಟದ ಸಮಯದಲ್ಲಿ ಲಾಭ ಮಾಡಿಕೊಳ್ಳುವ ಮನಃಸ್ಥಿತಿಯು ಅಪರಾಧವಾಗಿದೆ. “ಭರಿಸಲಸಾಧ್ಯವಾದ ವೈದ್ಯಕೀಯ ಶುಲ್ಕಗಳು ಹಾಗೂ ಬಡಜನರ ಸಂಕಷ್ಟ ನೋಡಲು ನೋವೆನಿಸುತ್ತದೆ” ಎಂದರು.
“ಜನರ ಸಂಕಷ್ಟದ ಜೊತೆಗೆ ವೈದ್ಯಕೀಯ ಶುಲ್ಕವೂ ಏರುತ್ತಿದೆ. ಈ ಕುರಿತು ಜಾಣಕುರುಡು ಪ್ರದರ್ಶಿಸುತ್ತಿರುವ ಬಿಜೆಪಿ ಸರ್ಕಾರ, ಜನರಿಗೆ ತಲೆನೋವಾಗಿ ಪರಿಣಮಿಸಿದೆ ಎಂದು ನಮಗನ್ನಿಸುತ್ತಿದೆ. ಆಸ್ಪತ್ರೆಗಳು ಆಮ್ಲಜನಕ, ಹಾಸಿಗೆ, ಕೋವಿಡ್ ಪರೀಕ್ಷೆ ಹಾಗೂ ಆಂಬುಲೆನ್ಸ್‌ಗಳಿಗೆ ಅಧಿಕ ಶುಲ್ಕ ಪಡೆಯುತ್ತಿರುವಾಗ ರಾಜ್ಯದ ಮುಖ್ಯಮಂತ್ರಿಗಳು ಮೌನವಹಿಸಿರುವುದು ದುರಂತವೇ ಸರಿ” ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸುಪ್ರೀಂ ಕೋರ್ಟ್‌ನ ಆದೇಶದನ್ವಯ ನಿಗದಿತ ಸೇವಾಶುಲ್ಕಗಳ ಮಾಹಿತಿಯನ್ನು ಅವರು ಹಂಚಿಕೊಂಡಿದ್ದಾರೆ.
“ಇಂತಹ ಸಂಕಷ್ಟದ ಸಮಯದಲ್ಲಿ ಒಬ್ಬರಿಗೊಬ್ಬರು ಸಹಾಯಕ್ಕೆ ಮುಂದಾಗಬೇಕು. ಈ ಕುರಿತು ಹಲವು ದಿನಗಳಿಂದ ದೂರನ್ನು ಕೇಳುತ್ತಿದ್ದೆ, ಇದೀಗ ಕ್ರಮಕ್ಕೆ ಮುಂದಾಗಿದ್ದೇನೆ. ವೈದ್ಯಕೀಯ ಶುಲ್ಕ ಭರಿಸಲಾಗದೆ ಯಾರೂ ಕೂಡ ಜೀವ ಕಳೆದುಕೊಳ್ಳಬಾರದು” ಎಂದು ಡಿ.ಕೆ ಶಿವಕುಮಾರ್ ತಿಳಿಸಿದರು. ಆಸ್ಪತ್ರೆಗಳಿಂದ ತೊಂದರೆಗೊಳಗಾದರೆ ಟ್ವಿಟರ್‌ನಲ್ಲಿ @DKShivakumar ಎಂದು ಟ್ಯಾಗ್ ಮಾಡಲು ತಿಳಿಸಿದ್ದಾರೆ.
“ದಿನೇ ದಿನೇ ಪ್ರಕರಣಗಳು ಹೆಚ್ಚುತ್ತಿವೆ, ವೈದ್ಯಕೀಯ ಸೌಕರ್ಯಗಳಲ್ಲಿ ಯಾವುದೇ ಬದಲಾವಣೆ ಕಾಣುತ್ತಿಲ್ಲ. ಇದರಿಂದ ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ನಮ್ಮ ಅಣ್ಣ-ತಮ್ಮಂದಿರು ಹಾಗೂ ಅಕ್ಕ-ತಂಗಿಯರನ್ನು ಕಳೆದುಕೊಳ್ಳುತ್ತಿದ್ದೇವೆ. ಲಸಿಕೆಯನ್ನು ವಿತರಿಸುವ ನಮ್ಮ ಯೋಜನೆಗೆ ಅನುಮತಿ ನೀಡದ ಸರ್ಕಾರ ಜನರ ಜೀವವನ್ನು ಅಪಾಯದಂಚಿಗೆ ನೂಕುತ್ತಿದೆ.” ಎಂದು ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಕೊರೋನಾ ಪಿಡುಗು ಬಾಧಿಸುತ್ತಿರುವಾಗ ಅನೇಕ ವೈದ್ಯಕೀಯ ಸಂಸ್ಥೆಗಳು ಲಾಭದ ಉದ್ದೇಶದಿಂದ ಕೆಲಸ ಮಾಡುತ್ತಿವೆ. ಕೆಲವು ಪ್ರಕರಣದಲ್ಲಿ ಸರಿಯಾದ ಆರೈಕೆಯ ಕೊರತೆಯಿಂದ ಅನಾಹುತಗಳಾಗುತ್ತಿವೆ. ಹಲವು ವಿಷಯಗಳಲ್ಲಿ ಹೆಸರುವಾಸಿಯಾಗಿರುವ ಕರ್ನಾಟಕವು ಇದೀಗ ಒಂದೇ ದಿನದಲ್ಲಿ ಅತಿಹೆಚ್ಚು ಸಾವನ್ನು ದಾಖಲಿಸಿರುವ ರಾಜ್ಯವಾಗಿರುವುದು ಅತ್ಯಂತ ನೋವಿನ ಸಂಗತಿ ಎಂದವರು ಹೇಳಿದ್ದಾರೆ.
ಈಗಾಗಲೇ ನೂರಾರು ಜನರು ಸಹಾಯ ಕೋರಿ ಕೆಪಿಸಿಸಿ ಅಧ್ಯಕ್ಷರನ್ನು ಸಾಮಾಜಿಕ ಜಾಲತಾಣದ ಮೂಲಕ ಸಂಪರ್ಕಿಸಿದ್ದು, ರಾಜ್ಯದ 31 ಜಿಲ್ಲೆಗಳಲ್ಲಿಯೂ ಕೆಪಿಸಿಸಿ ಅಧ್ಯಕ್ಷರು ತಮ್ಮದೇ ಆದ ತಂಡದ ಮೂಲಕ ನೆರವಿಗೆ ಧಾವಿಸಿದ್ದಾರೆ.