ಮಂಗಳೂರು : ಇತ್ತೀಚೆಗೆ ಎಂಆರ್ ಪಿಎಲ್ ಸಂಸ್ಥೆಯಲ್ಲಿ ನಡೆದ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರಿಗೆ ಆದ್ಯತೆ ನೀಡದಿರುವ ಬಗ್ಗೆ ಎಲ್ಲೆಡೆಯಿಂದ ಆಕ್ರೋಶ ವ್ಯಕ್ತವಾಗುತ್ತಿದೆ. ನೇಮಕಾತಿ ನಡೆದ 184 ಉದ್ಯೋಗದಲ್ಲಿ ಕೇವಲ 2 ಮಂದಿ ಸ್ಥಳೀಯರಿಗೆ ಮಾತ್ರ ಉದ್ಯೋಗ ದೊರಕಿದೆ. ಬಾಕಿ ಉಳಿದ 182 ಮಂದಿ ಹೊರ ರಾಜ್ಯದವರಾಗಿದ್ದು, ಇದು ಖಂಡನೀಯ ಎಂದು ಕಾಪು ಯುವ ಕಾಂಗ್ರೆಸ್ ಅಧ್ಯಕ್ಷ ರಮೀಜ್ ಹುಸೇನ್ ಹೇಳಿದ್ದಾರೆ.
ಕರಾವಳಿ ಭಾಗದ ಭೂಮಿಯನ್ನು ಪಡೆದು ಈಗಾಗಲೇ ಬಹಳಷ್ಟು ಕೈಗಾರಿಕೆಗಳು, ಉದ್ಯಮಗಳು ಅವಿಭಜಿತ ಜಿಲ್ಲೆಯಲ್ಲಿ ನಡೆಯುತ್ತಿವೆ. ಕೈಗಾರಿಕೆ ನಿರ್ಮಿಸಲು ಭೂಮಿ ಪಡೆಯುವ ಸಲುವಾಗಿ ಮೊದಲು ಸ್ಥಳೀಯರಿಗೆ ಉದ್ಯೋಗ ನೀಡುವ ಭರವಸೆ ನೀಡುತ್ತಾರೆ. ಈ ಕೈಗಾರಿಕೆಗಳ ನಿರ್ಮಾಣದ ಬಳಿಕ ಉದ್ಯೋಗ ನೇಮಕಾತಿಯಲ್ಲಿ ಸ್ಥಳೀಯರನ್ನು ಕಡೆಗಣಿಸುತ್ತಿರುವುದು ಕಂಡುಬರುತ್ತಿದೆ ಎಂದು ಅವರು ಆಪಾದಿಸಿದ್ದಾರೆ.
ಈ ವಿಚಾರದಲ್ಲಿ ಕರಾವಳಿಯ ಯಾವೊಬ್ಬ ಜನಪ್ರತಿನಿಧಿ ಮಾತನಾಡದಿರುವುದು ಬೇಸರ ತಂದಿದೆ ಎಂದು ಅವರು ಹೇಳಿದ್ದಾರೆ. ತುಳುನಾಡಿನಲ್ಲಿ ಭೂಮಿ ಪಡೆದ ಎಲ್ಲಾ ಕೈಗಾರಿಕೆಗಳಲ್ಲಿ ಶೇ.೬೦ರಷ್ಟು ಉದ್ಯೋಗ ಮೀಸಲಾತಿಯನ್ನು ಸ್ಥಳೀಯರಿಗೆ ನೀಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಎಂಆರ್ ಪಿಎಲ್ ನಲ್ಲಿ ಈಗಾಗಲೇ ನಡೆದಿರುವ ಉದ್ಯೋಗ ನೇಮಕಾತಿಯನ್ನು ರದ್ದುಗೊಳಿಸಿ, ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸಬೇಕು. ಹೊಸ ನೇಮಕಾತಿಯಲ್ಲಿ ತುಳುನಾಡಿನವರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಅವರು ಆಗ್ರಹಿಸಿದ್ದಾರೆ.