ತಿರುಗುಬಾಣವಾದ ‘ಮಾಸ್ಕ್’ ಪ್ರಕರಣ; ಸೂಪರ್ ಮಾರ್ಕೆಟ್ ಮಾಲಕ, ಇನ್ನೋರ್ವನ ವಿರುದ್ಧ ಡಾ. ಕಕ್ಕಿಲ್ಲಾಯ ದೂರು

Prasthutha|

ಮಂಗಳೂರು: ಖ್ಯಾತ ವೈದ್ಯ ಡಾ. ಶ್ರೀನಿವಾಸ್‌ ಕಕ್ಕಿಲ್ಲಾಯ ಅವರು ಇತ್ತೀಚೆಗೆ ‘ಮಾಸ್ಕ್’ ಧರಿಸದೆ ಸೂಪರ್‌ ಮಾರ್ಕೆಟ್‌ ಪ್ರವೇಶಿದ್ದ ಸಂದರ್ಭ ನಡೆದ ವಾಗ್ವಾದ ಪ್ರಕರಣಕ್ಕೆ ಇದೀಗ ಮತ್ತೊಂದು ಟ್ವಿಸ್ಟ್ ಸಿಕ್ಕಿದೆ., ಜಿಮ್ಮೀಸ್ ಸೂಪರ್ ಮಾರ್ಕೆಟ್ ಮಾಲಕ ಹಾಗೂ ಆಡಿಯೋ ಕರೆಯೊಂದರಲ್ಲಿ ದ್ವೇಷ ಸಾಧನೆಗೆ ಪ್ರಚೋದನೆ ನೀಡಿದ ವ್ಯಕ್ತಿಯ ವಿರುದ್ಧವೇ ಕದ್ರಿ ಠಾಣೆಯಲ್ಲಿ ಡಾ. ಶ್ರೀನಿವಾಸ್ ಕಕ್ಕಿಲ್ಲಾಯ ದೂರು ದಾಖಲಿಸಿದ್ದಾರೆ.

- Advertisement -

ಸೂಪರ್ ಮಾರ್ಕೆಟ್ ಒಳಗಡೆ ನಡೆದಿದ್ದ ಘಟನೆಯೊಂದರ ಸಿಸಿಟಿವಿ ದೃಶ್ಯದ ತುಣುಕುಗಳನ್ನು ಕಾನೂನು ಬಾಹಿರವಾಗಿ ಪ್ರಸಾರ ಮಾಡಿದ ಕಾರಣಕ್ಕಾಗಿ ಖ್ಯಾತ ಡಾ. ಶ್ರೀನಿವಾಸ ಕಕ್ಕಿಲ್ಲಾಯ ದೂರು ನೀಡಿದ್ದಾರೆ.

ನಾನು ಕಾನೂನು ಪಾಲಿಸುವ ಪ್ರಜೆಯಾಗಿದ್ದು, ಯಾವುದೇ ಕಾನೂನನ್ನು ಉದ್ದೇಶ ಪೂರ್ವಕವಾಗಿ ಉಲ್ಲಂಘಿಸಿಲ್ಲ, ನಾನು ಒಂದು ದಶಕಕ್ಕೂ ಹೆಚ್ಚು ಕಾಲ ಕದ್ರಿಯ ಜಿಮ್ಮೀಸ್ ಸೂಪರ್ ಮಾರ್ಕೆಟ್‌ನ ನಿಯಮಿತ ಗ್ರಾಹಕನಾಗಿದ್ದೇನೆ ಮತ್ತು ಸೂಪರ್‌ ಮಾರ್ಕೆಟ್‌ನ ಸಿಬ್ಬಂದಿ, ಮಾಲಕರು ನನಗೆ ಪರಿಚಿತರಾಗಿದ್ದಾರೆ. ಜಿಮ್ಮೀಸ್ ಸೂಪರ್ ಮಾರ್ಕೆಟ್‌ನ ಮಾಲಕರು ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳನ್ನು ಕಾನೂನು ಬಾಹಿರವಾಗಿ ಸಾಮಾಜಿಕ ಮಾಧ್ಯಮಕ್ಕೆ ಪ್ರಸಾರ ಮಾಡಿದ್ದು, ಇದರ ಪರಿಣಾಮವಾಗಿ ದೇಶಾದ್ಯಂತ ಮತ್ತು ವಿದೇಶಗಳಲ್ಲೂ ನನ್ನ ವಿರುದ್ಧ ಹಲವಾರು ಮಾನಹಾನಿಕರ ಹೇಳಿಕೆಗಳು ಹಾಗು ಲೇಖನಗಳು ಪ್ರಕಟಿಸಲಾಗಿದೆ ಎಂದು ಅವರು ದೂರಿದ್ದಾರೆ.

- Advertisement -

ಅಲ್ಲದೇ ವೈರಲ್ ಆದ ಆಡಿಯೋವೊಂದರಲ್ಲಿ ಜಿಮ್ಮೀಸ್ ಸೂಪರ್ ಮಾರ್ಕೆಟ್ ಮಾಲಕನ ಜೊತೆ ಮಾತನಾಡಿರುವ ವ್ಯಕ್ತಿಯೋರ್ವ ನನ್ನ ಹಾಗೂ ನನ್ನ ತಂದೆಯವರ ವಿರುದ್ಧವೂ ಮಾನಹಾನಿಕರ ಪದ ಬಳಸಿ ನಿಂದಿಸಿದ್ದು, ಪರೋಕ್ಷವಾಗಿ ಆಕ್ರಮಣ ನಡೆಸಲು ಪ್ರಚೋದಿಸಿರುತ್ತಾನೆ. ಇದರಿಂದ ನನ್ನ ಜೀವಕ್ಕೆ ಹಾನಿ ಉಂಟು ಮಾಡುವ ಸಾಧ್ಯತೆ ಇದೆ ಎಂದು ಡಾ.ಕಕ್ಕಿಲ್ಲಾಯ ದೂರಿನಲ್ಲಿ ತಿಳಿಸಿದ್ದಾರೆ.

Join Whatsapp