ಸಿಎಎ ಹೋರಾಟಕ್ಕಾಗಿ ಜೈಲು ಸೇರಿದ್ದರೂ ಜೈಲಿನಿಂದಲೇ ಶಾಸಕನಾಗಿ ಗೆದ್ದ ಅಖಿಲ್‌ ಗೊಗೊಯಿ ಜೊತೆ ಅಧಿಕಾರಿಗಳ ಅನುಚಿತ ವರ್ತನೆ

Prasthutha|

ನವದೆಹಲಿ : ೨೦೧೯ರ ಸಿಎಎ ವಿರೋಧಿ ಹೋರಾಟದ ವೇಳೆ ನಡೆಸಿದ್ದ ಹೋರಾಟಕ್ಕಾಗಿ ಯುಎಪಿಎಯಂತಹ ಕರಾಳ ಕಾನೂನಿನಡಿ ಜೈಲಿಗಟ್ಟಲ್ಪಟ್ಟಿದ್ದ ಅಸ್ಸಾಂನ ಯುವ ಹೋರಾಟಗಾರ ಅಖಿಲ್‌ ಗೊಗೊಯಿ ನೂತನ ಶಾಸಕರಾಗಿ ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನಕ್ಕೆ ವಿಧಾನಸಭೆಗೆ ಕರೆದೊಯ್ಯುವ ವೇಳೆ ಗೊಗೊಯಿ ಜೊತೆ ಅಧಿಕಾರಿಗಳು ಅನುಚಿತವಾಗಿ ವರ್ತಿಸಿರುವ ಬಗ್ಗೆ ವರದಿಯಾಗಿದೆ.

- Advertisement -

ಇತ್ತೀಚೆಗೆ ನಡೆದಿದ್ದ ಅಸ್ಸಾಂ ವಿಧಾನಸಭಾ ಚುನಾವಣೆಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಗೆದ್ದಿರುವ ಹೋರಾಟಗಾರ ಶಾಸಕ ಅಖಿಲ್‌ ಗೊಗೊಯಿ. ಅಸ್ಸಾಂನಲ್ಲಿ ಜೈಲಿನಿಂದಲೇ ಚುನಾವಣೆ ಸ್ಪರ್ಧಿಸಿ ಗೆದ್ದ ಪ್ರಥಮ ಹೋರಾಟಗಾರ ಎಂಬ ಹೆಗ್ಗಳಿಕೆಗೂ ಗೊಗೊಯಿ ಪಾತ್ರರಾಗಿದ್ದಾರೆ.

ಅಸ್ಸಾಂ ವಿಧಾನಸಭೆಗೆ ಆಯ್ಕೆಯಾಗಿರುವ ೧೨೬ ಶಾಸಕರು ಶುಕ್ರವಾರ ಪ್ರಮಾಣ ವಚನ ಸ್ವೀಕರಿಸಿದರು. ಹೊಸ ಪ್ರಾದೇಶಿಕ ಪಕ್ಷ ʼರೈಜೋರ್‌ ದಳʼದ ಮೂಲಕ ಗೊಗೊಯಿ ಚುನಾಯಿತರಾಗಿದ್ದಾರೆ. ಅವರೇ ಈ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ. ಬಿಜೆಪಿ ಅಭ್ಯರ್ಥಿ ವಿರುದ್ಧ ಅವರು ಗೆದ್ದಿದ್ದಾರೆ. 

- Advertisement -

ಪ್ರಮಾಣ ವಚನಕ್ಕೆ ಕರೆ ತರುವಾಗ ಪೊಲೀಸರು ಮತ್ತು ಅಧಿಕಾರಿಗಳು ಗೊಗೊಯಿಯೊಂದಿಗೆ ಕೆಟ್ಟದಾಗಿ ನಡೆದುಕೊಂಡಿರುವ ವೀಡಿಯೊ ವೈರಲ್‌ ಆಗಿದೆ.

ಪ್ರೊಟೊಕಾಲ್‌ ಉಲ್ಲಂಘನೆ ಮಾಡಿದ್ದು, ಅಸ್ಸಾಂನ ಜನತೆಗೆ ಮಾಡಿರುವ ಅವಮಾನವಿದು. ಒಬ್ಬ ಶಾಸಕನೊಂದಿಗೆ ಹೀಗೆ ನಡೆದುಕೊಳ್ಳುವಂತಿಲ್ಲ. ಆದರೆ, ಒಂದು ವಿಷಯವಂತೂ ಖಚಿತ. ಅವರಿಗೆ ಇನ್ನು ಮುಂದೆ ನನ್ನ ಧ್ವನಿಯನ್ನು ಹತ್ತಿಕ್ಕಲು ಸಾಧ್ಯವಿಲ್ಲ ಎಂದು ಗೊಗೊಯಿ ಹೇಳಿದ್ದಾರೆ. ಗೊಗೊಯಿ ಅವರನ್ನು ಪಿಪಿಇ ಕಿಟ್‌ ಧರಿಸಿದ್ದ ಕೆಲವರು ತಳ್ಳಾಡುವ ದೃಶ್ಯಗಳು ದಾಖಲಾಗಿವೆ.



Join Whatsapp