‘ಬಿಜೆಪಿ ಸೇರಿದ್ದಕ್ಕಾಗಿ ಕ್ಷಮಿಸಿ, ನನ್ನನ್ನು ಮತ್ತೆ ಟಿಎಂಸಿ ಗೆ ಸೇರಿಸಿ’ ಎಂದ ಮಾಜಿ ಶಾಸಕಿ ಸೋನಾಲಿ ಗುಹಾ

Prasthutha|

ಇತ್ತೀಚ್ಚೆಗೆ ನಡೆದ ಪಂಚರಾಜ್ಯ ಚುನಾವಣೆಯಲ್ಲಿ ಪಶ್ಚಿಮ ಬಂಗಾಳದಲ್ಲಿ ಚುನಾವಣೆಗೆ ಮುನ್ನ ಬಿಜೆಪಿ ಸೇರಿದ್ದ ಮಾಜಿ ಟಿಎಂಸಿ ಶಾಸಕಿ ಸೋನಾಲಿ ಗುಹಾ, ಶನಿವಾರ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ ಪತ್ರ ಬರೆದು, ಪಕ್ಷ ತೊರೆದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಲ್ಲದೆ ಮತ್ತೆ ಟಿಎಂಸಿಗೆ ಸೇರಿಸಿಕೊಳ್ಳುವಂತೆ ಮನವಿ ಮಾಡಿಕೊಂಡ್ಡಿದ್ದಾರೆ. ಆ ಸನ್ನಿವೇಷದಲ್ಲಿ ನಾನು ಭಾವಾವೇಷಕ್ಕೆ ಒಳಗಾಗಿದ್ದ ಕಾರಣ ಪಕ್ಷ ತ್ಯಜಿಸಿದ್ದೆ. ಆದರೆ ನನಗೆ ಈಗ ಅದು ತಪ್ಪು ಎಂದು ಅರಿವಾಗಿದೆ ಎಂದು ಅವರು ಪತ್ರಲ್ಲಿ ಉಲ್ಲೇಖಿಸಿದ್ದಾರೆ. ಆ ಪತ್ರವನ್ನು ಸೋನಾಲಿ ಗುಹಾ ಅವರು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

- Advertisement -


ನಾನು ಇದನ್ನು ಭಾರವಾದ ಹೃದಯದಿಂದ ಬರೆಯುತ್ತಿದ್ದೇನೆ, ಭಾವಾವೇಷಕ್ಕೆ ಒಳಗಾಗಿದ್ದ ಕಾರಣ ನಾನು ಬೇರೆ ಪಕ್ಷಕ್ಕೆ ಸೇರುವ ತಪ್ಪು ನಿರ್ಧಾರವನ್ನು ತೆಗೆದುಕೊಂಡಿದ್ದೆ. ಆದರೆ ಅಲ್ಲಿ ನನಗೆ ಒಗ್ಗಿಕೊಳ್ಳಲು ಸಾಧ್ಯವಾಗಲಿಲ್ಲ” ಎಂದು ಅವರು ಹೇಳಿದ್ದಾರೆ. “ಮೀನೊಂದು ನೀರಿನಿಂದ ಹೊರಗುಳಿಯಲು ಸಾಧ್ಯವಿಲ್ಲ, ದೀದಿ, ನೀವು ಇಲ್ಲದೆ ಬದುಕಲು ನನಗೆ ಸಾಧ್ಯವಿಲ್ಲ. ನಾನು ನಿಮ್ಮಲ್ಲಿ ಕ್ಷಮೆ ಕೋರುತ್ತೇನೆ ಮತ್ತು ನೀವು ನನ್ನನ್ನು ಕ್ಷಮಿಸದಿದ್ದರೆ, ನಾನು ಬದುಕಲು ಸಾಧ್ಯವಾಗುವುದಿಲ್ಲ. ದಯವಿಟ್ಟು ನಾನು ಪಕ್ಷಕ್ಕೆ ಮತ್ತೆ ಸೇರಲು ಅನುಮತಿಸಿ. ನನ್ನ ಜೀವನದ ಉಳಿದ ಭಾಗವನ್ನು ನಿಮ್ಮ ವಾತ್ಸಲ್ಯದಲ್ಲಿ ಕಳೆಯಲು ಅವಕಾಶ ನೀಡಿ” ಎಂದು ಅವರು ಬಂಗಾಳಿ ಭಾಷೆಯಲ್ಲಿ ಬರೆದಿದ್ದಾರೆ ಎಂದು ಎನ್‌ಡಿಟಿವಿ ವರದಿ ಮಾಡಿದೆ.


ನಾಲ್ಕು ಬಾರಿ ಶಾಸಕರಾಗಿದ್ದ ಸೋನಾಲಿ ಗುಹಾ ಅವರು ಮಮತಾ ಬ್ಯಾನರ್ಜಿಯವರ ಆಪ್ತರಾಗಿದ್ದರು. ಆದರೆ ಈ ವಿಧಾನಸಭಾ ಚುನಾವಣೆಗೆ ಮುಂಚಿತವಾಗಿ ಬಿಜೆಪಿ ಸೇರಿದ್ದರು. ಈ ಬಾರಿ ಅವರನ್ನು ಟಿಎಂಸಿಯ ಅಭ್ಯರ್ಥಿಗಳ ಪಟ್ಟಿಯಿಂದ ಕೈಬಿಡಲಾಯಿತು, ಅದರ ನಂತರ ಅವರು ಟಿವಿ ಚಾನೆಲ್‌ಗಳಲ್ಲಿ ಭಾವನಾತ್ಮಕ ಮಾತುಗಳನ್ನಾಡಿದ ನಂತರ ಪಕ್ಷವನ್ನು ತೊರೆದು ಬಿಜೆಪಿಗೆ ಸೇರಿದ್ದರು. ಆದರೆ ಅವರು ಚುನಾವಣೆಯಲ್ಲಿ ಸ್ಪರ್ಧಿಸಿರಲಿಲ್ಲ. ಬದಲಿಗೆ ಬಿಜೆಪಿಯ ಸಂಘಟನೆಯನ್ನು ಬಲಪಡಿಸಲು ಕೆಲಸ ಮಾಡುವುದಾಗಿ ಹೇಳಿದ್ದರು.

Join Whatsapp