ಲಾಕ್’ಡೌನ್ ಉಲ್ಲಂಘಿಸಿದ ಆರೋಪ : ಉತ್ತರ ಪ್ರದೇಶದಲ್ಲಿ ಯುವಕನನ್ನು ಠಾಣೆಯಲ್ಲಿ ಥಳಿಸಿ ಕೊಲೆ : ಮೂವರು ಪೊಲೀಸರ ವಿರುದ್ಧ ಪ್ರಕರಣ ದಾಖಲು

Prasthutha|

►ತರಕಾರಿ ವ್ಯಾಪಾರಿ ಫೈಝಲ್ ಹುಸೈನ್ ಮೃತ ದುರ್ದೈವಿ !

- Advertisement -

ಉತ್ತರ ಪ್ರದೇಶದ ಉನ್ನಾವೊ ಜಿಲ್ಲೆಯ 18 ವರ್ಷ ಪ್ರಾಯದ ತರಕಾರಿ ವ್ಯಾಪಾರಿ ಫೈಝಲ್ ಹುಸೈನ್ ಎಂಬವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ತೀವ್ರ ಥಳಿಸಿದ ಪರಿಣಾಮ ಅವರು ಠಾಣೆಯಲ್ಲೇ ಸಾವನ್ನಪ್ಪಿದ ಘಟನೆ ಶುಕ್ರವಾರ ನಡೆದಿದ್ದು, ಘಟನೆಗೆ ಸಂಬಂಧಿಸಿ ಮೂವರು ಪೊಲೀಸ್ ಸಿಬ್ಬಂದಿ ವಿರುದ್ಧ ಕೊಲೆ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಮಧ್ಯಾಹ್ನ ಮಾರುಕಟ್ಟೆಯಿಂದ ಫೈಝಲ್ ಅವರನ್ನು ಬಲವಂತವಾಗಿ ಕರೆದುಕೊಂಡು ಹೋಗಿ ತೀವ್ರವಾಗಿ ಥಳಿಸಿದ್ದಾರೆ. ತೀವ್ರ ಗಾಯಗೊಂಡ ಅವರು ಅಲ್ಲೇ ಸಾವನ್ನಪ್ಪಿದ್ದಾರೆ ಎಂದು ಸಂತ್ರಸ್ತ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಫೈಸಲ್ ಹುಸೇನ್ ಅವರು ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ. ಕರ್ಫ್ಯೂ ನಿಯಮಗಳನ್ನು ಉಲ್ಲಂಘಿಸಿದ್ದಕ್ಕಾಗಿ ಅವರನ್ನು ಇತರ ಕೆಲವರೊಂದಿಗೆ ಬಂಗಾರ್ ಮೌ ಪೊಲೀಸ್ ಠಾಣೆಗೆ ಕರೆತರಲಾಗಿತ್ತು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

- Advertisement -

ಹುಸೈನ್ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿ ಕಾನ್ಸ್ಟೇಬಲ್’ಗಳಾದ ವಿಜಯ್ ಚೌಧರಿ, ಸೀಮಾವತ್ ಮತ್ತು ಗೃಹರಕ್ಷಕ ಸಿಬ್ಬಂದಿ ಸತ್ಯ ಪ್ರಕಾಶ್ ಅವರ ಮೇಲೆ ಕೊಲೆ ಆರೋಪ ಹೊರಿಸಲಾಗಿದೆ. ಈ ಮೂವರನ್ನು ಈಗಾಗಲೇ ಕೆಲಸದಿಂದ ಅಮಾನತುಗೊಳಿಸಲಾಗಿದೆ. ಸಂತ್ರಸ್ತ ಕುಟುಂಬದವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಶಶಿ ಶೇಖರ್ ಸಿಂಗ್ ತಿಳಿಸಿದ್ದಾರೆ.

ನನ್ನ ಸೋದರಳಿಯ ಫೈಸಲ್ ಹುಸೈನ್ ಮಾರುಕಟ್ಟೆಯಲ್ಲಿ ತರಕಾರಿ ಮಾರಾಟ ಮಾಡುತ್ತಿದ್ದಾಗ ಪೊಲೀಸರು ಏಕಾಏಕಿ ಬಂದು ಆತನಿಗೆ ಹಲವು ಬಾರಿ ಕಪಾಳಮೋಕ್ಷ ಮಾಡಿದರು. ನಂತರ ಅವರು ಆತನನ್ನು ಅವರ ಮೋಟಾರ್ ಸೈಕಲ್ ನಲ್ಲಿ ಪೊಲೀಸ್ ಠಾಣೆಗೆ ಕರೆದೊಯ್ದರು. ಠಾಣೆಯಲ್ಲಿಯೂ ಆತನಿಗೆ ತೀವ್ರವಾಗಿ ಥಳಿಸಿದ್ದಾರೆ. ಇದರಿಂದ ಅವರು ಅಲ್ಲಿಯೇ ಸಾವನ್ನಪ್ಪಿದ್ದಾರೆ ಎಂದು ಫೈಸಲ್ ಅವರ ಚಿಕ್ಕಪ್ಪ ಮೆರಾಜ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಮೃತರ ಸೋದರಸಂಬಂಧಿ ಸಲ್ಮಾನ್ ಸುದ್ದಿಗಾರರಿಗೆ ಮಾಹಿತಿ ನೀಡಿ, ತರಕಾರಿ ಮಾರಾಟಗಾರ ಫೈಝಲ್ ಅವರನ್ನು ಮಾರುಕಟ್ಟೆಯಿಂದ ಕರೆದೊಯ್ಯಲಾಯಿತು. ದಾರಿಯುದ್ದಕ್ಕೂ ಅವರ ಮೇಲೆ ಹಲ್ಲೆ ನಡೆಸಲಾಗಿದೆ. ನಂತರ ಪೊಲೀಸ್ ಠಾಣೆಯಲ್ಲಿಯೂ ಕೂಡಿ ಹಾಕಿ ಥಳಿಸಿ ಕೊಂದಿದ್ದಾರೆ. ನಂತರ ಪೊಲೀಸರು ಆತನನ್ನು ಆಸ್ಪತ್ರೆಗೆ ತಂದು ಬಿಟ್ಟು ಓಡಿಹೋಗಿದ್ದಾರೆ. ಕೊಲೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್ ಅಡಿಯಲ್ಲಿ ಪೊಲೀಸ್ ಠಾಣೆಯ ಎಲ್ಲ ಅಧಿಕಾರಿಗಳು ಕ್ರಮ ಜರಗಿಸಬೇಕು ಎಂದು ಆಗ್ರಹಿಸಿದ್ದಾರೆ.

ಆದರೆ ಉನ್ನಾವೊ ಪೊಲೀಸ್ ಪರಿಷ್ಠಾಧಿಕಾರಿ ಆನಂದ್ ಕುಲಕರ್ಣಿ ಅವರು, ತರಕಾರಿ ವ್ಯಾಪಾರಿ ಫೈಝಲ್ ಅವರನ್ನು ಶುಕ್ರವಾರ ಮಧ್ಯಾಹ್ನ 2 ಗಂಟೆ ಸುಮಾರಿಗೆ ಮಾರುಕಟ್ಟೆಯಿಂದ ಪೊಲೀಸ್ ಠಾಣೆಗೆ ಕರೆತರಲಾಗಿದೆ. ಅರ್ಧ ಗಂಟೆ ಕಾಲ ಅವರು ಠಾಣೆಯಲ್ಲಿದ್ದರು. ಅಲ್ಲೇ ಅವರು ಮೃತಪಟ್ಟಿದ್ದಾರೆ. ಹೃದಯಾಘಾತದಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಮರಣೋತ್ತರ ಪರೀಕ್ಷೆ ನಡೆಸಿದ್ದು, ಅವರ ವರದಿ ಬಂದ ನಂತರ ಹೆಚ್ಚಿನ ಮಾಹಿತಿ ಸಿಗಲಿದೆ ಎಂದು ತಿಳಿಸಿದ್ದಾರೆ.

Join Whatsapp