ಬ್ಲಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲ್ಲಿ ಸೇರಿಸಿ : ಸಿದ್ದರಾಮಯ್ಯ ಒತ್ತಾಯ

Prasthutha|

ಬೆಂಗಳೂರು:  ಬ್ಲಾಕ್ ಫಂಗಸ್ ಕಾಯಿಲೆಯನ್ನು ಅಧಿಕೃತ ರೋಗಗಳ ಪಟ್ಟಿಯಲ್ಲಿ ಸೇರಿಸಿ ಸೂಕ್ತ ಅಧಿಸೂಚನೆ ಹೊರಡಿಸಿ ಉಚಿತವಾಗಿ ಚಿಕಿತ್ಸೆ ನೀಡಬೇಕು ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಸರ್ಕಾರವನ್ನು ಒತ್ತಾಯಿಸಿದ್ದಾರೆ.

- Advertisement -

ಬ್ಲಾಕ್ ಫಂಗಸ್, ಕಪ್ಪು ಶಿಲೀಂದ್ರದ ಸಮಸ್ಯೆ ಅಥವಾ ವೈದ್ಯಕೀಯ ಪರಿಭಾಷೆಯಲ್ಲಿ ಮ್ಯೂಕರ್ ಮೈಕೋಸಿಸ್ ಎಂದು ಕರೆಯಲಾಗುವ ಈ ಕಾಯಿಲೆಯು ಕೋವಿಡ್ ರೋಗಕ್ಕೆ ತುತ್ತಾಗಿ  ರೋಗ ನಿರೋಧಕ ಶಕ್ತಿ ಕಡಿಮೆಯಾಗಿರುವವರಲ್ಲಿ ಮಾರಣಾಂತಿಕವಾಗಿ ಪರಿಣಮಿಸುತ್ತಿದೆ. ಕೋವಿಡ್ ನಿಂದಾಗಿ ಸಾವು ಬದುಕಿನ ನಡುವೆ ಹೋರಾಡಿ ಬದುಕಿ ಬಂದವರನ್ನು ಗುರಿ ಮಾಡಿಕೊಂಡು ದಾಳಿ ಮಾಡುತ್ತಿರುವ ಈ ಕಾಯಿಲೆಯನ್ನು ಬಡವರಿರಲಿ, ಮಧ್ಯಮ ವರ್ಗದವರಿಗೂ ಕೂಡ ಸೂಕ್ತ ಚಿಕಿತ್ಸೆ ಪಡೆಯಲಾಗದಷ್ಟು ದುಬಾರಿಯಾಗಿದೆ. ಈ ರೋಗ ಬಂದವರಿಗೆ ದಿನಕ್ಕೆ ಮೂರರಂತೆ 30 ದಿನಗಳವರೆಗೂ ಆಂಫೊಟೆರೆಸಿನ್ ಎಂಬ ಇಂಜೆಕ್ಷನ್‍ಗಳನ್ನು ನೀಡಬೇಕಾಗುತ್ತದೆ ಎಂದು ವೈದ್ಯರು ಹೇಳುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಮಾರುಕಟ್ಟೆಯಲ್ಲಿ ಈ ಔಷಧಗಳು ಸಿಗುತ್ತಿಲ್ಲ. ಒಂದೊಂದು ಇಂಜೆಕ್ಷನ್ನಿನ ಬೆಲೆ ಕಾಳಸಂತೆಯಲ್ಲಿ ಈಗಾಗಲೇ  5 ರಿಂದ 7 ಸಾವಿರ ರೂಗಳವರೆಗೆ ಮಾರಾಟವಾಗುತ್ತಿವೆ ಎಂಬ ದೂರುಗಳು ಬರುತ್ತಿವೆ. ಕೋವಿಡ್ ಸಾಂಕ್ರಾಮಿಕವನ್ನು ಅತ್ಯಂತ ಅರಾಜಕವಾಗಿ ನಿರ್ವಹಿಸುತ್ತಿರುವ, ಸತ್ತವರು ಸಾಯಲಿ ಎಂಬಂತೆ ನಡದುಕೊಳ್ಳುತ್ತಿರುವ ಸರ್ಕಾರ ಬ್ಲಾಕ್ ಫಂಗಸ್ ರೋಗದ ಕುರಿತು ಇನ್ನೂ ಕೂಡ ಸಮರ್ಪಕ ನಿರ್ಧಾರ ತೆಗೆದುಕೊಂಡಿಲ್ಲ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

- Advertisement -

ಚಿಕಿತ್ಸೆ ನೀಡುವ ಕುರಿತಾದಂತೆ ಅಷ್ಟೆ ಅಲ್ಲ. ರೋಗ ಹರಡುತ್ತಿರುವ ಕುರಿತಂತೆ ಸರ್ಕಾರ ನಿರ್ಧಾರ ಕೈಗೊಳ್ಳಬೇಕಾಗಿದೆ. ರೋಗ ಯಾರಲ್ಲಿ ಹರಡುತ್ತಿದೆ? ಏಕೆ ಹರಡುತ್ತಿದೆ? ಯಾವಾಗ ಹರಡುತ್ತಿದೆ? ರೋಗ ಲಕ್ಷಣಗಳೇನು? ರೋಗ ಬಂದರೆ ಹೇಗೆ ಚಿಕಿತ್ಸೆ ಪಡೆಯಬೇಕು? ರೋಗ ಬರದಂತೆ ತಡೆಯಲು ಯಾವ ಕ್ರಮಗಳನ್ನು ಅನುಸರಿಸಬೇಕು? ಕೋವಿಡ್ ಚಿಕಿತ್ಸೆಯಿಂದ ಈ ಶಿಲೀಂದ್ರ ಸೋಂಕು ಬರುತ್ತದೆ ಅಂತಾದರೆ, ಕೋವಿಡ್ ಚಿಕಿತ್ಸೆಯಲ್ಲಿ ಮಾಡಿಕೊಳ್ಳಬೇಕಾದ ಮಾರ್ಪಾಟುಗಳೇನು? ಎಂಬೆಲ್ಲ ವಿಚಾರಗಳ ಕುರಿತು ಸಮರ್ಪಕ ಎಸ್‍ಓಪಿ ಯನ್ನು ಹೊರಡಿಸಬೇಕು ಎಂದು ಸಿದ್ದರಾಮಯ್ಯ ಸರಕಾರಕ್ಕೆ ಸಲಹೆ ನೀಡಿದ್ದಾರೆ.

ಕೋವಿಡ್ ಸೋಂಕಿನ ವಿಚಾರದಲ್ಲಿ ಅವೈಜ್ಞಾನಿಕವಾಗಿ ನಡೆದುಕೊಂಡಂತೆ ಬ್ಲಾಕ್ ಫಂಗಸ್ಸಿನ ವಿಚಾರದಲ್ಲಿ ನಡೆದುಕೊಳ್ಳಬಾರದು. ಉತ್ತರ ಭಾರತದ ಅನೇಕ ಕಡೆ ಸಗಣಿ ಬಳಸಿ ಚಿಕಿತ್ಸೆ ಪಡೆಯಲು ಹೊರಟವರಲ್ಲಿ ಈ ಸೋಂಕು ಹೆಚ್ಚಾಗಿ ಕಂಡುಬರುತ್ತಿದೆ ಎಂದು ಹೇಳಲಾಗುತ್ತಿದೆ. ಬಹುತೇಕ ವೈದ್ಯರು  ಕೋವಿಡ್ ಚಿಕಿತ್ಸೆಯಲ್ಲಿ ಅನಿಯಮಿತವಾಗಿ ಬಳಸುವ ಸ್ಟಿರಾಯ್ಡ್‍ಗಳಿಂದ ಹರಡುತ್ತಿದೆ ಎನ್ನುತ್ತಾರೆ. ಕೋವಿಡ್ ಬಂದವರಿಗೆ ಸಕ್ಕರೆ ಕಾಯಿಲೆ ಇದ್ದರೆ ಅವರಿಗೆ ಸುಲಭವಾಗಿ ಹರಡುತ್ತದೆ ಎನ್ನಲಾಗುತ್ತಿದೆ. ಆಕ್ಸಿಜನ್ ನೀಡುವಾಗ ಉಂಟಾಗುವ ಸೋಂಕುಗಳಿಂದ ಹರಡುತ್ತದೆ ಎಂಬ ಅಭಿಪ್ರಾಯವೂ ಇದೆ. ಆದ್ದರಿಂದ ಈ ಕುರಿತು ಸೂಕ್ತವಾಗಿ ಶೀಘ್ರವಾಗಿ ಅಧ್ಯಯನ ಮಾಡಿ ಚಿಕಿತ್ಸೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಪ್ರತಿವಾರ ಸುಮಾರು 400 ಜನಕ್ಕೆ ಈ ಸೋಂಕು ಬರಬಹುದು ಎಂದು ಅಂದಾಜಿಸಲಾಗುತ್ತಿದೆ. ಆದರೆ ಚಿಕಿತ್ಸೆ ನೀಡಲು ಬೇಕಾದ ತಯಾರಿಯನ್ನು ಇನ್ನೂ ಮಾಡಿಕೊಂಡಂತೆ ಕಾಣುತ್ತಿಲ್ಲ.

ಮಧುಮೇಹ ಮುಂತಾದ ಸಮಸ್ಯೆ ಇದ್ದು ಕೋವಿಡ್ ಬಂದವರನ್ನು ಕನಿಷ್ಟ ಮೂರು ತಿಂಗಳ ಕಾಲ ಗಮನಿಸುತ್ತಿರಬೇಕು. ಜೊತೆಗೆ ಕೋವಿಡ್ ರೋಗಿಗಳಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವವರ ವಿವರಗಳನ್ನು ಮತ್ತು ಹೆಚ್ಚು ಸ್ಟಿರಾಯ್ಡ್ ನೀಡಲಾಗಿರುವವರ ಪಟ್ಟಿಯನ್ನು ತಾಲ್ಲೂಕುವಾರು, ವಾರ್ಡ್‍ವಾರು ಸಿದ್ಧಪಡಿಸಿಕೊಂಡು ಅವರನ್ನೂ ಸಹ ಆಶಾ ಕಾರ್ಯಕರ್ತರು ಮತ್ತು ಆರೋಗ್ಯ ಕಾರ್ಯಕರ್ತರ ಮೂಲಕ ನಿಗಾವಹಿಸಬೇಕು. ಈ ನಿಗಾ ಅವಧಿಯಲ್ಲಿ ಯಾರಿಗಾದರೂ ಸೋಂಕು ಕಾಣಿಸಿಕೊಂಡರೆ ಕೂಡಲೇ ಆಸ್ಪತ್ರೆಗಳಿಗೆ ಕರೆದುಕೊಂಡು ಹೋಗಿ ಉಚಿತವಾಗಿ ಸಮರ್ಪಕ ಚಿಕಿತ್ಸೆಯನ್ನು ನೀಡಬೇಕು. ಅದಕ್ಕೂ ಮೊದಲು ಈ ಕೂಡಲೇ ಈ ರೋಗಕ್ಕೆ ಚಿಕಿತ್ಸೆ ನೀಡಲು ಜಿಲ್ಲಾವಾರು ಆಸ್ಪತ್ರೆಗಳ ಪಟ್ಟಿ ಸಿದ್ಧಪಡಿಸಿ, ಅಧಿಸೂಚನೆ ಹೊರಡಿಸಬೇಕು. ಚಿಕಿತ್ಸೆಗಾಗಿ ಅಗತ್ಯ ಇರುವಷ್ಟು ಆಂಫೊಟೆರೆಸಿನ್ ಮುಂತಾದ ಔಷಧಗಳನ್ನು ಕೂಡಲೇ ಅಂದಾಜು ಮಾಡಿ ತರಿಸಿಕೊಳ್ಳಬೇಕು.

ಈ ಹಿನ್ನೆಯಲ್ಲಿ ಸರ್ಕಾರ ತಡಮಾಡದೆ ಸೂಕ್ತ ಅಧಿ ಸೂಚನೆಗಳನ್ನು ಹೊರಡಿಸಿ ಉಚಿತ ಚಿಕಿತ್ಸೆ ನೀಡಲು ಪ್ರಾರಂಭಿಸಬೇಕು. ಈಗಾಗಾಲೇ ಬಹಳಷ್ಟು ಜನರು ಬ್ಲಾಕ್ ಫಂಗಸ್ಸಿಗೆ ತುತ್ತಾಗಿ ಜೀವ ಕಳೆದುಕೊಂಡಿದ್ದಾರೆ. ಕಣ್ಣುಗಳನ್ನು ಕಳೆದುಕೊಂಡಿದ್ದಾರೆ. ಅಂಥವರಿಗೆ, ಅಂಥವರ ಕುಟುಂಬ ಸೂಕ್ತ ಪರಿಹಾರ ನೀಡಬೇಕು. ಈ ರೋಗವು ಇನ್ನಷ್ಟು ಅಮೂಲ್ಯ ಜೀವಗಳನ್ನು ಹೊತ್ತೊಯ್ಯುವ ಮೊದಲು ಕೂಡಲೇ ಉಚಿತ ಚಿಕಿತ್ಸೆ ನೀಡಲು  ಆರಂಭಿಸಬೇಕೆಂದು ಸಿದ್ದರಾಮಯ್ಯ ಅವರು ಆಗ್ರಹಿಸಿದ್ದಾರೆ.



Join Whatsapp