ಜೆರುಸಲೆಂ: ಗಾಝಾ ಪಟ್ಟಿಯ ಮೇಲೆ ಇಸ್ರೇಲ್ ಸೇನೆ ನಡೆಸಿದ ವಾಯು ದಾಳಿಯಲ್ಲಿ ಮಕ್ಕಳೂ ಸೇರಿದಂತೆ 21 ಫೆಲೆಸ್ತೀನೀಯರು ಹತರಾಗಿದ್ದಾರೆಂದು ಫೆಲೆಸ್ತೀನಿ ಆರೋಗ್ಯ ಸಚಿವಾಲಯ ಹೇಳಿದೆ. ಹಮಾಸ್ ಕರಾವಳಿ ತೀರದಿಂದ ಇಸ್ರೇಲಿನತ್ತ ರಾಕೆಟ್ ದಾಳಿ ನಡೆಸಿದ ನಂತರ ಈ ವಾಯು ದಾಳಿ ನಡೆದಿದೆ ಎಂದು ತಿಳಿದು ಬಂದಿದೆ.
ಗಾಝಾ ಪಟ್ಟಿಯ 130 ಮಿಲಿಟರಿ ಟಾರ್ಗೆಟ್ಗಳ ಮೇಲೆ ದಾಳಿ ನಡೆಸಲಾಗಿದೆ ಎಂದು ಇಸ್ರೇಲ್ ಇಂದು ಹೇಳಿಕೊಂಡಿದೆಯಲ್ಲಿದೆ ಈ ದಾಳಿಯಲ್ಲಿ 15 ಹಮಾಸ್ ಕಾರ್ಯಕರ್ತರು ಮೃತಪಟ್ಟಿದ್ದಾರೆಂದು ಹೇಳಿಕೊಂಡಿದೆ. ಆದರೆ ದಾಳಿಯಲ್ಲಿ 21 ಮಂದಿ ಮೃತಪಟ್ಟಿದ್ದಾರೆಂದು ಫೆಲೆಸ್ತೀನ್ ಹೇಳಿದೆ.
ಫೆಲೆಸ್ತೀನೀಯರ ವಿರುದ್ಧ ಇಸ್ರೇಲ್ ನಡೆಸುತ್ತಿರುವ ಹಿಂಸೆಯನ್ನು ಖಂಡಿಸಿ ಸಾವಿರಾರು ಜನರು ಸೋಮವಾರ ಅಂಕಾರ ನಗರದ ಇಸ್ರೇಲಿ ದೂತಾವಾಸದೆದುರು ಹಾಗೂ ಇಸ್ತಾಂಬುಲ್ನಲ್ಲಿನ ಇಸ್ರೇಲಿ ರಾಯಭಾರಿ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಿದ್ದಾರೆ.
ಜೆರುಸಲೆಂನ ಅಲ್ ಅಖ್ಸಾ ಮಸೀದಿ ಆವರಣದಿಂದ ಇಸ್ರೇಲಿ ಸೇನಾ ಪಡೆಗಳನ್ನು ವಾಪಸ್ ಪಡೆಯಲು ತಾನು ನೀಡಿದ ಗಡುವು ಮುಕ್ತಾಯಗೊಂಡ ನಂತರ ಹಮಾಸ್ ರಾಕೆಟ್ ದಾಳಿ ನಡೆಸಿತ್ತು.
ಸೋಮವಾರ ಇಸ್ರೇಲಿ ಪೊಲೀಸರು ಮಸೀದಿ ಆವರಣಕ್ಕೆ ನುಗ್ಗಿ ರಬ್ಬರ್ ಬುಲೆಟ್, ಸ್ಟನ್ ಗ್ರೆನೇಡ್ ಹಾಗೂ ಅಶ್ರುವಾಯು ಪ್ರಯೋಗಿಸಿದ ನಂತರ 300ಕ್ಕೂ ಅಧಿಕ ಫೆಲೆಸ್ತೀನೀಯರು ಗಾಯಗೊಂಡಿದ್ದರು.ಈ ಘಟನೆಯ ನಂತರ ವಿಶ್ವ ಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ ನಡೆಸಿದೆ.