ಅಂತ್ಯಸಂಸ್ಕಾರಕ್ಕೂ ಮುನ್ನ ಹಿಂದುವೋ ಮುಸ್ಲಿಮನೋ ಎಂದು PFI ಕೇಳೋದ್ಯಾಕೆ ?

Prasthutha|

►✍️ PFI ಕಾರ್ಯಕರ್ತರ ಕೋವಿಡ್ ಅಂತ್ಯಸಂಸ್ಕಾರದ ಬಗ್ಗೆ ಪತ್ರಕರ್ತ ನವೀನ್ ಸೂರಿಂಜೆ ತನ್ನ ಫೇಸ್ಬುಕ್ ವಾಲ್ ನಲ್ಲಿ

- Advertisement -

ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ ಕೂಡಾ ಆರ್ ಎಸ್ ಎಸ್ ನಂತೆಯೇ ಕೋಮುವಾದಿ ಸಂಘಟನೆ ಎಂದು ದಾಖಲೆ ಸಮೇತ ನಿರೂಪಿಸಿದ್ದು ನಾನು ಮತ್ತು ಸುದೀಪ್ತೋ ಮೊಂಡಲ್.  ಭಜರಂಗದಳದ ನೂರಾರು ನೈತಿಕ ಪೊಲೀಸ್ ಗಿರಿಯನ್ನು ಬಯಲಿಗೆಳೆದಿದ್ದ ನಾವು ಪಿಎಫ್ಐಯ ಬೆನ್ನು ಹತ್ತಿದ್ದೆವು. ಹಿಂದೂ ಹುಡುಗ ಮತ್ತು ಮುಸ್ಲಿಂ ಹುಡುಗಿ ಪ್ರೇಮಿಸುವುದನ್ನು ತಡೆಯಲು ಪಿಎಫ್ಐ ಮಾಡಿದ ಕಸರತ್ತು, ದಾಳಿಯನ್ನು ಮೊದಲ ಬಾರಿ ಸುದ್ದಿ ಮಾಡಿದ್ದೆವು. ಐಪಿಎಸ್ ಸುಬ್ರಹ್ಮಣ್ಯೇಶ್ವರ ರಾವ್ ಎಸ್ಪಿ ಆಗಿದ್ದಾಗ ಪಿಎಫ್ಐ ಕಾರ್ಯಕರ್ತರ ವಿರುದ್ದ ಮೊದಲ ಪ್ರಕರಣ ದಾಖಲಿಸಲಾಗಿತ್ತು.  ಅಲ್ಲಿಯವರೆಗೂ “ಪಿಎಫ್ಐ ಕೋಮುವಾದಿ ಎನ್ನುವುದಕ್ಕೆ ಸಾಕ್ಷಿ ಕೊಡು ಮರಿ. ಸುಮ್ನೆ ಮಾತಾಡಬೇಡಿ” ಎನ್ನುತ್ತಿದ್ದ ಗೌರಿ ಲಂಕೇಶ್ ಗೆ ಸಾಕ್ಷಿ ನೀಡಿದ್ದೆವು. ಅವರ ಬಳಿಯಿಂದಲೇ ಪತ್ರಿಕಾ ಹೇಳಿಕೆ ಪಡೆದುಕೊಂಡಿದ್ದೆವು. (ಆ ಪ್ರಕರಣದ ಪೂರ್ಣ ಪಾಠವನ್ನು ಇನ್ನೊಮ್ಮೆ ಅಗತ್ಯವಿದ್ದರೆ ಬರೆಯೋಣ)

ಆದರೆ, ಪಿಎಫ್ಐ ಕೋಮುವಾದಕ್ಕೂ, ಆರ್ ಎಸ್ ಎಸ್ ಕೋಮುವಾದಕ್ಕೂ ವ್ಯತ್ಯಾಸವಿದೆ. ಆರ್ ಎಸ್ ಎಸ್ ಮತ್ತದರ ಸಹ ಸಂಘಟನೆಗಳಲ್ಲಿ ಕನಿಷ್ಠ ಮಾನವೀಯತೆ ಎಂಬುದೇ ಇಲ್ಲ. ಪಿಎಫ್ಐ ಕೋಮುವಾದ ಎಂಬುದು “ಕ್ರಿಮಿನಲ್ ಟ್ರೈಬ್ಸ್” ಮಾದರಿಯ ಅಪರಾಧ. ಹಸಿವಿಗಾಗಿ ನಡೆಸುವ ಕಳ್ಳತನದಂತೆ ಕೋಮುವಾದಿಗಳಿಂದ ಬಚಾವಾಗಲು ನಡೆಸುವ ಕೋಮುವಾದವಿದು. ಕೊರೋನಾ ಸಂಕಷ್ಟ ಕಾಲದಲ್ಲೂ ಪಿಎಫ್ಐ ಯುವಕರನ್ನು ಕೋಮುವಾದಿಗಳು ಎನ್ನಲು ಮನಸ್ಸೇ ಬಾರದು.

- Advertisement -

ಆತನ ತಂದೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾದಿಂದ ನಿಧನ ಹೊಂದಿದ್ದರು. ಶವ ತೆಗೆದುಕೊಂಡು ಹೋಗಿ ಎಂದು ಆಸ್ಪತ್ರೆಯಿಂದ ಕರೆ ಬಂದಾಗ ಆತ ತಂದೆಯ ಶವ ತೆಗೆದುಕೊಂಡು ಬರಲು ತೆರಳಿದ್ದಾರೆ. ಮೊದಲ ದಿನದ ಲಾಕ್ ಡೌನ್ ವೇಳೆ ಪೊಲೀಸರು ಲಾಠಿ ಹಿಡಿದುಕೊಂಡು ರಸ್ತೆಯಲ್ಲಿ ನಿಂತಿದ್ದರು. ತಂದೆ ಸತ್ತಿದ್ದಾರೆ, ಡೆಡ್ ಬಾಡಿ ತೆಗೆದುಕೊಂಡು ಬರಲು ಆಸ್ಪತ್ರೆಗೆ ಹೋಗುತ್ತಿದ್ದೇನೆ ಎಂದು ಪೊಲೀಸರ ಎದುರು ಅತ್ತುಕರೆದ್ರು ಮುಂದೆ ಹೋಗಲು ಬಿಟ್ಟಿಲ್ಲ. ಒಬ್ಬ ಪೊಲೀಸನ ಬಳಿ ಮಾತನಾಡುತ್ತಿದ್ದಂತೆ ಹಿಂದಿನಿಂದ ಬಂದ ಮೂರ್ನಾಲ್ಕು ಪೊಲೀಸರು ಲಾಠಿಯಿಂದ ಹಲ್ಲೆ ನಡೆಸಿದ್ದಾರೆ. ಆಸ್ಪತ್ರೆಗೆ ಹೋಗದೆ ಮರಳಿ ಮನೆಗೆ ಬಂದ ಆತನಿಗೆ ತಂದೆಯ ಶವ ತರುವುದು ಬಿಡಿ, ಆತನಿಗೇ ಆಸ್ಪತ್ರೆಗೆ ಹೋಗಿ ತಂದೆಯ ಮುಖ ನೋಡಲಾಗದ ಸ್ಥಿತಿ ನಿರ್ಮಾಣವಾಗಿದೆ. ಈ ವಿಷಯ ಗೆಳೆಯರ ಮೂಲಕ ತಿಳಿದುಕೊಂಡ ನಾನು ಎಸ್ ಡಿಪಿಐ (ಪಿಎಫ್ಐಯ ರಾಜಕೀಯ ವಿಭಾಗ)ದ ಮುಖಂಡ ಇಲ್ಯಾಸ್ ತುಂಬೆಗೆ ಮಾಹಿತಿ ನೀಡಿದೆ‌. ಇಲ್ಯಾಸ್ ತುಂಬೆಯವರ ಮೊದಲ ಪ್ರಶ್ನೆ “ಪಾರ್ಟಿ ಹಿಂದೂವ, ಮುಸ್ಲೀಮರ? ” ಇದ್ಯಾಕೆ ನಿಮಗೆ ಎಂದು ಪ್ರಶ್ನಿಸಿದೆ. “ನಾವು ನೂರಾರು ಅಂತ್ಯಸಂಸ್ಕಾರ ಮಾಡಿದ್ದೇವೆ. ಹಿಂದೂಗಳ ಅಂತ್ಯಸಂಸ್ಕಾರ ಮಾಡಿ ಅವರ ರೀತಿ ರಿವಾಜುಗಳನ್ನು ಸ್ವಲ್ಪ ಕಲಿತಕೊಂಡ ಟೀಂ ಇದೆ. ಆ ಹುಡುಗರನ್ನೇ ಕಳಿಸಿದರೆ ಹಿಂದೂ ಸಂಪ್ರದಾಯಗಳನ್ನು ಹೆಚ್ಚು ಕ್ರಮಬದ್ದವಾಗಿ ಪಾಲಿಸಬಹುದು. ಪಾಪ ಅಂತ್ಯಸಂಸ್ಕಾರ ಸ್ವಲ್ಪವಾದರೂ  ವಿಧಿವಿಧಾನದಂತೆ ನಡೆದರೆ ಮನೆಯವರಿಗೆ ಸಮಾದಾನ ಆಗಬಹುದು ಅಂತ” ಅಂದರು. ಇದಾಗಿ ಕೆಲ ಹೊತ್ತಿನಲ್ಲೇ ಪಿಎಫ್ಐ ಕಾರ್ಯಕರ್ತರು ಆ ಮನೆಯ ಮುಂದೆ ಇದ್ದರು. ಅಂತ್ಯಸಂಸ್ಕಾರದ ರೀತಿ, ಸ್ಮಶಾನ ಎಲ್ಲಿ ಎಂಬ ಎಲ್ಲಾ ಮಾಹಿತಿ ಪಡೆದುಕೊಂಡರು. ಮತ್ತೆ ಮನೆಯಿಂದ ಆಸ್ಪತ್ರೆಗೆ ಹೋಗೋ ದಾರಿಯಲ್ಲಿ ಪಿಎಫ್ಐ ಯುವಕರನ್ನು ಪೊಲೀಸರು ತಡೆದಿದ್ದಾರೆ. ಎಲ್ಲಾ ಅಡೆತಡೆಗಳನ್ನು ಮೀರಿ ಕೊರೋನಾ ಸೋಂಕಿತ ಮೃತ ದೇಹವನ್ನು ಸೋಮವಾರ ಸಂಜೆ ವೇಳೆಗೆ ವಿಧಿವಿಧಾನಗಳಂತೆ ಅಂತ್ಯಸಂಸ್ಕಾರ ನಡೆಸಲಾಯ್ತು.

ಹಿಂದೂಗಳ ಶವಸಂಸ್ಕಾರವನ್ನು ಪಿಎಫ್ಐ ಮಾಡಬಾರದು ಎನ್ನುವ ಹಿಂದೂ ಸಂಘಟನೆಗಳು ಹಿಂದೂಗಳ ಶವಸಂಸ್ಕಾರಕ್ಕೆ ತೆಗದುಕೊಂಡ ಕ್ರಮಗಳ ಬಗ್ಗೆ ಹೇಳುವುದಿಲ್ಲ. ಕೊರೋನಾ ಪೂರ್ವದಲ್ಲಿ ಹಿಂದುತ್ವವಾದಿಗಳಿಂದ ದೈಹಿಕ ದಾಳಿ ಎದುರಿಸಿದ ಪಿಎಫ್ಐ ಕೊರೋನಾ ಕಾಲದಲ್ಲಿ ಅಪಪ್ರಚಾರದ ದಾಳಿ ಎದುರಿಸುತ್ತಿದೆ. ಆದರೂ ಹಿಂದೂ ಧಾರ್ಮಿಕ ಆಚರಣೆಗಳನ್ನು ಮಾಡುತ್ತಲೇ ಹಿಂದೂಗಳ ಅಂತ್ಯಸಂಸ್ಕಾರ ಮಾಡುವುದನ್ನು ಕೋಮುವಾದ ಎನ್ನಬೇಕೋ, ಮೂಲಭೂತವಾದ ಎನ್ನಬೇಕೋ ?



Join Whatsapp