ಭಾರತದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಎಲ್ಲಿದೆ?

Prasthutha|

-ಡಾ.ಬಿ.ಪಿ.ಮಹೇಶ ಚಂದ್ರ ಗುರು

- Advertisement -

ಅಭಿವ್ಯಕ್ತಿ ಸ್ವಾತಂತ್ರ್ಯ ಪ್ರಜಾಪ್ರಭುತ್ವದ ಆತ್ಮವಾಗಿದೆ. ಅಮೆರಿಕ ಸಂಯುಕ್ತ ಸಂಸ್ಥಾನದ ಸಂವಿಧಾನಕ್ಕೆ ಉಂಟು ಮಾಡಿದ ಮೊದಲ ತಿದ್ದುಪಡಿ ಕಾಂಗ್ರೆಸ್, ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಧಕ್ಕೆಯುಂಟು ಮಾಡುವ ಯಾವುದೇ ಕಾನೂನನ್ನು ರೂಪಿಸಬಾರದು ಎಂದು ತಿಳಿಸುತ್ತದೆ. ಯೂರೋಪಿನ ಬಹಳಷ್ಟು ರಾಷ್ಟ್ರಗಳಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಪ್ರಜೆಗಳು ಸಂವಿಧಾನದತ್ತವಾಗಿ ನಿರಾತಂಕವಾಗಿ ಅನುಭವಿಸುತ್ತಾರೆ. ಭಾರತದಲ್ಲಿ ಅನುಚ್ಛೇದ-19-(1-ಎ) ಎಲ್ಲ ಪ್ರಜೆಗಳಿಗೂ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನೀಡಿದೆ. ಆದರೆ 19(ಬಿ) ಕೆಲವು ಅರ್ಥಪೂರ್ಣ ನಿರ್ಬಂಧಗಳನ್ನು ರಾಷ್ಟ್ರೀಯ ಹಿತದೃಷ್ಟಿಯಿಂದ ಪ್ರಜೆಗಳ ಮೇಲೆ ಹೇರಿರುವುದು ಔಚಿತ್ಯಪೂರ್ಣವಾಗಿದೆ.

ಅವಕಾಶ ವಂಚಿತ ಹಾಗೂ ದಮನಿತ ತಳಸಮುದಾಯಗಳನ್ನು ಸಾಮಾಜಿಕ ಸಮಾನತೆ ಮತ್ತು ಆರ್ಥಿಕ ಅಭಿವೃದ್ಧಿಯೆಡೆಗೆ ಮುನ್ನಡೆಸುವ ಸಲುವಾಗಿ ಪ್ರಗತಿಪರ ಜನಾಂದೋಲನಗಳನ್ನು ಸಂಘಟಿಸಲು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಮಾಹಿತಿ ಹಕ್ಕುಗಳು ಸಹಕಾರಿಯಾಗಿವೆ. ಭಾರತದಂತಹ ಬಹುತ್ವ ಕೇಂದ್ರಿತ ದೇಶದಲ್ಲಿ ಅಕ್ಷರ ಸಂಸ್ಕೃತಿ ಮತ್ತು ಅಭಿವೃದ್ಧಿ ಅವಕಾಶಗಳಿಂದ ವಂಚಿತರಾಗಿರುವ ತಳಸಮುದಾಯಗಳ ಜನರನ್ನು ಅಭಿವೃದ್ಧಿಯೆಡೆಗೆ ಮುನ್ನಡೆಸುವ ಸಲುವಾಗಿ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಅತ್ಯವಶ್ಯಕ. ಪ್ರಜೆಗಳಿಗೆ ನೀಡಿರುವ ಅಭಿವ್ಯಕ್ತಿ ಸ್ವಾತಂತ್ರ್ಯ ಮಾಧ್ಯಮ ಪ್ರತಿನಿಧಿಗಳಿಗೂ ಅನ್ವಯಿಸುತ್ತದೆ. ಪ್ರಸ್ತುತ ಸಂದರ್ಭದಲ್ಲಿ ಸಾಮ್ರಾಜ್ಯಶಾಹಿ ಶಕ್ತಿಗಳು ಪ್ರತಿಭಟಿಸುವ ಧ್ವನಿಗಳನ್ನು ಹತ್ತಿಕ್ಕುವುದರ ಮೂಲಕ ಸಾಂವಿಧಾನಿಕ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಆಶಯಗಳನ್ನು ದುರ್ಬಲಗೊಳಿಸುತ್ತಿವೆ.

- Advertisement -

ಸಾಮಾಜಿಕ ಪ್ರಜಾಸತ್ತೆ ಮತ್ತು ಆರ್ಥಿಕ ಸಮಾನತೆಗಳಿಗೆ ವಿರುದ್ಧವಾಗಿರುವ ಮೂಲಭೂತವಾದಿಗಳ ಆಳ್ವಿಕೆಯಲ್ಲಿ ಇತ್ತೀಚಿನ ವರ್ಷಗಳಲ್ಲಿ ಅಸಹಿಷ್ಣುತೆ ಹೆಚ್ಚಾಗುತ್ತಿದ್ದು ಅಭಿವ್ಯಕ್ತಿ ಸ್ವಾತಂತ್ರ್ಯದ ಮಹತ್ವವನ್ನು ತಗ್ಗಿಸಿದೆ. ಪ್ರಜೆಗಳ ಹಿತರಕ್ಷಣೆ ದೃಷ್ಟಿಯಿಂದ ಸರ್ಕಾರದ ತಪ್ಪುನೀತಿಗಳು ಮತ್ತು ಕ್ರಮಗಳನ್ನು ಪ್ರತಿಭಟಿಸುವವರ ಮೇಲೆ ಮೊಕದ್ದಮೆಗಳನ್ನು ಹೂಡಿ ಅವರ ನೈತಿಕ ಸ್ಥೈರ್ಯವನ್ನು ಕುಗ್ಗಿಸುವ ಕೆಲಸ ಎಗ್ಗಿಲ್ಲದೆ ಸರ್ಕಾರದ ಬೆಂಬಲದಿಂದ ನಡೆಯುತ್ತಿದೆ. ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಬಳಸಿಕೊಂಡು ಪ್ರಗತಿಪರರು ಮತ್ತು ಹೋರಾಟಗಾರರು ದೇಶಾದ್ಯಂತ ಅಹಿಂಸಾತ್ಮಕ ಹಾಗೂ ಪ್ರಜಾಸತ್ತಾತ್ಮಕ ಪ್ರತಿಭಟನೆಯಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದರು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ರಾಷ್ಟ್ರದಾದ್ಯಂತ ಬೃಹತ್ ಪ್ರಮಾಣದಲ್ಲಿ ಪ್ರತಿಭಟನೆಗಳು ಜರುಗಿದ್ದವು. ಪೌರತ್ವ ತಿದ್ದುಪಡಿ ಕಾಯ್ದೆಯ ವಿರುದ್ಧ ನಡೆದ ಆಂದೋಲನವನ್ನು ಅಧಿಕಾರ ಬಲದಿಂದ ಮಟ್ಟ ಹಾಕುವುದರಲ್ಲಿ ಸರಕಾರ ಯಶಸ್ವಿಯಾಯಿತು.

ಸರ್ವೋಚ್ಛ ನ್ಯಾಯಾಲಯ ಅನುರಾಧ ಭಾಷಿನ್ ವರ್ಸಸ್ ಯೂನಿಯನ್ ಆಫ್ ಇಂಡಿಯಾ ಮತ್ತಿತರರು ಪ್ರಕರಣದಲ್ಲಿ ಅಂತರ್ಜಾಲ ಬಳಕೆ ಅನುಚ್ಛೇದ-19(1)(ಎ) ಅನ್ವಯ ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ವ್ಯಾಪ್ತಿಗೊಳಪಡುತ್ತದೆಂದು ತೀರ್ಪು ನೀಡಿದೆ. ಅಲ್ಲದೆ ರಾಷ್ಟ್ರೀಯ ಹಿತಾಸಕ್ತಿ ದೃಷ್ಟಿಯಿಂದ ಸಿಆರ್‌ ಪಿಸಿ ಸೆಕ್ಷನ್-144ನ್ನು ಪ್ರಭುತ್ವ ದುರ್ಬಳಕೆ ಮಾಡಿಕೊಂಡು ಪ್ರಜಾಸತ್ತಾತ್ಮಕ ಪ್ರತಿಭಟನೆಗಳನ್ನು ನಿರ್ಬಂಧಿಸಬಾರದೆಂದು ನೀಡಿರುವ ತೀರ್ಪು ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಗಟ್ಟಿಗೊಳಿಸಿದೆ. ಸುಮಾರು 100 ದಿನಗಳಿಂದಲೂ ಲಕ್ಷಾಂತರ ಅನ್ನದಾತರು ಮೂರು ರೈತವಿರೋಧಿ ಮಸೂದೆಗಳನ್ನು ಹಿಂಪಡೆಯಬೇಕೆಂದು ಪ್ರಜಾಸತ್ತಾತ್ಮಕವಾಗಿ ನಡೆಸುತ್ತಿರುವ ಹೋರಾಟಕ್ಕೆ ಸರ್ಕಾರವೇ ಬಹುದೊಡ್ಡ ಅಡ್ಡಗಲ್ಲಾಗಿದೆ. ಪ್ರಜಾಪ್ರಭುತ್ವದ ರಕ್ಷಕರಿಗೆ ಇಂತಹ ದುಸ್ಥಿತಿ ಉಂಟಾಗಿರುವುದನ್ನು ಜಾಗತಿಕ ಸಮುದಾಯ ಗಂಭೀರವಾಗಿ ಪರಿಗಣಿಸಿದೆ. ರಾಜಧರ್ಮದ ಅರಿವು ಮತ್ತು ಸಂವಿಧಾನಕ್ಕೆ ಗೌರವ ಇಲ್ಲದವರು ಅಧಿಕಾರಕ್ಕೆ ಬಂದರೆ ಅಭಿವ್ಯಕ್ತಿ ಸ್ವಾತಂತ್ರ್ಯ, ಸಂವಿಧಾನ ಮತ್ತು ಪ್ರಜಾಸತ್ತೆಗಳಿಗೆ ಗಂಡಾಂತರ ಖಂಡಿತ.

ಬ್ರಾಹ್ಮಣ್ಯ ಮತ್ತು ಬಂಡವಾಳಶಾಹಿಗಳಿಗೆ ಶರಣಾಗಿರುವ ಮಾಧ್ಯಮದ ಒಂದು ವರ್ಗ ತಾನು ನಿಷ್ಠೆ ತೋರಿಸಬೇಕಾದ ಜನರ ವಿರುದ್ಧವೇ ಕೆಲಸ ಮಾಡುತ್ತಿರುವುದು ದುರದೃಷ್ಟಕರ. ಈ ವರ್ಗ ರೈತರು, ಅಲ್ಪಸಂಖ್ಯಾತರು ಮಾತ್ರವಲ್ಲ ಬಹುಸಂಖ್ಯಾತ ಜನರಿಗೂ ವಿರುದ್ಧವಾಗಿಯೇ ಕೆಲಸ ಮಾಡುತ್ತಿದೆ. ಮಾಧ್ಯಮದ ಈ ವರ್ಗ ಜನಜೀವನದ ಮೇಲೆ ಭಾರಿ ಪರಿಣಾಮ ಬೀರುವ ಸರಕಾರದ ಕ್ರಮಗಳ ಬಗ್ಗೆ ಮಾತಾಡುವುದೇ ಇಲ್ಲ. ಆಳುವವರು ಪ್ರಜೆಗಳು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ವಿಮರ್ಶಕ ನೋಟವನ್ನು ಕಳಕೊಂಡು ಒಂದು ರೀತಿಯ ಅಮಲಿನ ಸ್ಥಿತಿಯಲ್ಲಿರಬೇಕೆಂದು ನಮ್ಮನ್ನು ಇಂದು ಆಳುತ್ತಿರುವವರು ಅಪೇಕ್ಷಿಸುತ್ತಿದ್ದಾರೆ. ಅಬ್ಬರದ ದೇಶಪ್ರೇಮ ಕರೋನಾ ವೈರಾಣುವಿಗಿಂತ ಭಯಂಕರವೆಂಬುದನ್ನು ನಾವಿಂದು ಅರಿತುಕೊಳ್ಳಬೇಕಿದೆ.

ಅಭಿವ್ಯಕ್ತಿ ಸ್ವಾತಂತ್ರ್ಯವಿಲ್ಲದ ಭಾರತೀಯ ಪ್ರಜಾಪ್ರಭುತ್ವ ತನ್ನ ಮಹತ್ವವನ್ನು ಕಳೆದುಕೊಳ್ಳುತ್ತಿದೆ. ಅನ್ಯಾಯದ ವಿರುದ್ಧ ನಮ್ಮ ಅಸಂವೇದನೆಯೂ ಹೆಚ್ಚುತ್ತಾ ಹೋಗುತ್ತಿರುವ ಪ್ರವೃತ್ತಿಗೆ ನಾವಿಂದು ಮೂಕಸಾಕ್ಷಿಗಳಾಗಿದ್ದೇವೆ. ಅಭಿವ್ಯಕ್ತಿ ಸ್ವಾತಂತ್ರ್ಯ, ಪತ್ರಿಕಾ ಸ್ವಾತಂತ್ರ್ಯ ಮತ್ತು ಮೂಲಭೂತ ಹಕ್ಕುಗಳ ರಕ್ಷಣೆಗಾಗಿ ಹೋರಾಟ ನಡೆಸಿ ಸೆರೆವಾಸ ಅನುಭವಿಸುತ್ತಿರುವವರ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದೆ. ವರವರ ರಾವ್, ಆನಂದ ತೇಲ್ ತುಂಬ್ಡೆ, ಗೌತವ್ ನೌಲಖಾ, ಸುಧಾ ಭಾರದ್ವಾಜ್, ವೆರ್ನಾನ್ ಗೊನ್ಸಾಲ್ವ್ಸ್, ಅರುಣ್ ಪೆರಿರಾ, ಸ್ಟಾನ್ ಸ್ವಾಮಿ, ಉಮರ್ ಖಾಲಿದ್, ಸಿದ್ದೀಖ್ ಕಾಪ್ಪನ್, ಕ್ರಾಂತಿ ತೇಕುಲ, ಕೆ.ವಿ.ಕುರ್ಮನಾಥ್ ಇವರಲ್ಲಿ ಪ್ರಮುಖರಾದವರು. ಮಾನವ ಹಕ್ಕುಗಳ ಕಾರ್ಯಕರ್ತರ ಇತ್ತೀಚಿನ ಬಂಧನಗಳು ಭಾರತದಾದ್ಯಂತ ಭಯದ ವಾತಾವರಣವನ್ನು ಸೃಷ್ಟಿಸಲು ಸರ್ಕಾರವು ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲೆ ನಡೆಸುತ್ತಿರುವ ದಾಳಿಯೇ ಪ್ರಮುಖ ಕಾರಣವಾಗಿದೆ.

ಇತ್ತೀಚೆಗೆ ಭಾರತದ ಸರ್ವೋಚ್ಛ ನ್ಯಾಯಾಲಯ ಸಾರ್ವಜನಿಕ ಹಿತದೃಷ್ಟಿಯಿಂದ ಸರ್ಕಾರದ ತಪ್ಪು ನೀತಿ ಮತ್ತು ಕ್ರಮಗಳನ್ನು ರಚನಾತ್ಮಕವಾಗಿ ಟೀಕಿಸುವುದು ದೇಶದ್ರೋಹವಲ್ಲ ಎಂದು ಖಚಿತವಾಗಿ ತೀರ್ಮಾನಿಸಿರುವುದು ಸರಿಯಾಗಿದೆ. ಭಾರತದಲ್ಲಿ ಪ್ರಜೆಗಳು ಮತ್ತು ಮಾಧ್ಯಮಗಳ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಹತ್ತಿಕ್ಕಲು ಸರ್ಕಾರ ಮುಂದಾಗಿದೆ. ಕೃಷಿ ಮಸೂದೆ, ಕಾರ್ಮಿಕ ಕಾಯ್ದೆ, ಸನಾತನ ಆಡಳಿತ, ಅಭಿವೃದ್ಧಿಯ ಹೆಸರಿನಲ್ಲಿ ಭ್ರಷ್ಟಾಚಾರ ಮೊದಲಾದವುಗಳನ್ನು ವಿರೋಧಿಸುವ ಧ್ವನಿಗಳನ್ನು ದಮನಿಸುವ ಪ್ರಯತ್ನ ಎಲ್ಲೆಡೆ ಕಂಡುಬರುತ್ತಿದೆ. ಮಾಧ್ಯಮಗಳೂ ಕೂಡ ಬಂಡವಾಳ, ಮಾರುಕಟ್ಟೆ ಮತ್ತು ಶಕ್ತಿರಾಜಕಾರಣಕ್ಕೆ ಮರುಳಾಗಿವೆ.

ಕಾರ್ಪೊರೇಟ್ ಉದ್ಯಮಿಗಳು ವ್ಯಾಪಾರಿ ಧರ್ಮವನ್ನು ಅನುಸರಿಸಿ ಪ್ರಜೆಗಳ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ವೃತ್ತಿಧರ್ಮಗಳನ್ನು ಕಡೆಗಣಿಸಿವೆ. ಅಲಕ್ಷಿತ ಜನವರ್ಗಗಳ ಜೀವಕ್ಕೆ ಬೆಲೆ ನೀಡುವ ಮಾನವೀಯ ದೃಷ್ಟಿಕೋನ ನಮ್ಮನ್ನು ಆಳುವವರಿಗೆ ಇಲ್ಲವಾಗಿದೆ. ಅಘೋಷಿತ ತುರ್ತುಪರಿಸ್ಥಿತಿ ಮತ್ತು ಉಸಿರುಕಟ್ಟಿದ ವಾತಾವರಣದಲ್ಲಿ ದುರ್ಬಲ ವರ್ಗಗಳು ಭಾರತದಲ್ಲಿ ಬದುಕುತ್ತಿವೆ. ಸಂವಿಧಾನ ಮತ್ತು ಪ್ರಜಾತಂತ್ರಗಳು ಉಳಿದರೆ ಮಾತ್ರ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಮಾನವ ಹಕ್ಕುಗಳ ರಕ್ಷಣೆ ಸಾಧ್ಯವಾಗುತ್ತದೆ.



Join Whatsapp