ಲಂಡನ್ : ಬ್ರಿಟನ್‌ನಲ್ಲಿ G7 ಶೃಂಗಸಭೆ ನಡೆಯುತ್ತಿದ್ದು, ಭಾರತ ಇದರಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸುತ್ತಿದೆ. ಶೃಂಗಸಭೆಯಲ್ಲಿ ಭಾಗಿಯಾಗಲು ತೆರಳಿದ್ದ ಭಾರತದ ಪ್ರತಿನಿಧಿಗಳ ಮಂಡಳಿಯ ಇಬ್ಬರು ಸದಸ್ಯರಿಗೆ ಕೊರೋನಾ ಸೋಂಕು ದೃಢಪಟ್ಟಿದೆ ಎಂದು ಬ್ರಿಟಿಷ್ ಮಾಧ್ಯಮಗಳು ವರದಿ ಮಾಡಿದೆ.
ಈ ಕುರಿತು ಟ್ವೀಟ್ ಮಾಡಿರುವ ಶೃಂಗಸಭೆಯಲ್ಲಿ ಭಾರತದ ಪ್ರತಿನಿಧಿ ಮಂಡಳಿಯ ಸದಸ್ಯರಾಗಿರುವ ವಿದೇಶಾಂಗ ಸಚಿವ ಎಸ್.ಜಯಶಂಕರ್, ನಿನ್ನೆ ಸಂಜೆ ಕೊರೋನಾ ಸೋಂಕಿನ ಬಗ್ಗೆ ಮಾಹಿತಿ ಲಭಿಸಿತು. ಮುಂಜಾಗೃತೆ ದೃಷ್ಟಿಯಿಂದ ಹಾಗೂ ಇತರರೊಂದಿಗೆ ಈ ಬಗ್ಗೆ ಚರ್ಚೆ ನಡೆಸಿ ನಾನು ಎಲ್ಲಾ ಸಭೆಗಳನ್ನು ವಿಡಿಯೋ ಕಾನ್ಫರೆನಸ್ ಮೂಲಕ ನಡೆಸಲು ನಿರ್ಧರಿಸಿದ್ದೇನೆ. ಜಿ7 ಶೃಂಗಸಭೆಯ ಇಂದಿನ ಸಭೆಯಲ್ಲೂ ವಿಡಿಯೋ ಕಾನ್ಫರೆನ್ಸ್ ಮೂಲಕ ನಾನು ಭಾಗಿಯಾಗುತ್ತೇನೆ ಎಂದು ತಿಳಿಸಿದ್ದಾರೆ.
G7 ವಿಶ್ವದ ಅತೀ ಶ್ರೀಮಂತ ರಾಷ್ಟ್ರಗಳ ಸಮೂಹವಾಗಿರುವುದರಿಂದ ಭಾರತ ಇದರ ಭಾಗವಲ್ಲ. ಇದರಲ್ಲಿ ಕೆನಡಾ, ಫ್ರಾನ್ಸ್, ಜರ್ಮನಿ, ಜಪಾನ್, ಇಟಲಿ, ಯುಕೆ ಹಾಗೂ ಅಮೆರಿಕ ರಾಷ್ಟ್ರಗಳಿವೆ. ಹೀಗಿದ್ದರೂ G7 ಚೇರ್ಮನ್ ಆಗಿರುವ ಬ್ರಿಟನ್, ಭಾರತವನ್ನು ಆಸ್ಟ್ರೇಲಿಯಾ ಮತ್ತು ದಕ್ಷಿಣ ಕೊರಿಯಾದ ಜೊತೆಗೆ ಆಹ್ವಾನಿಸಿದೆ.