ಭುವನೇಶ್ವರ: ದೇಶಾದ್ಯಂತ ಕೊರೊನಾ ಅಟ್ಟಹಾಸದಿಂದ ನಿಯಂತ್ರಣ ಕಳೆದುಕೊಂಡಿದ್ದು, ಸೋಂಕು ನಿಯಂತ್ರಣಕ್ಕೆ ಹಲವು ರಾಜ್ಯಗಳು ಲಾಕ್ ಡೌನ್ ಜಾರಿ ಮಾಡುತ್ತಿವೆ. ಒಡಿಶಾದಲ್ಲಿ ಕೂಡ ದಿನದಿಂದ ದಿನಕ್ಕೆ ಕೊರೊನಾ ಸೋಂಕಿತರ ಸಂಖ್ಯೆ ತೀವ್ರ ಹೆಚ್ಚಳದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ನವೀನ್ ಪಟ್ನಾಯಕ್, ರಾಜ್ಯದಲ್ಲಿ 14 ದಿನಗಳ ಲಾಕ್ ಡೌನ್ ಜಾರಿ ಮಾಡಿದ್ದಾರೆ.
ಕೊರೊನಾ ಎರಡನೇ ಅಲೆ ನಿಯಂತ್ರಣಕ್ಕೆ ಮೇ 5 ರಿಂದ 19ರವರೆಗೆ ಓಡಿಶಾದಲ್ಲಿ ಲಾಕ್ ಡೌನ್ ಜಾರಿ ಮಾಡಲಾಗುತ್ತಿದೆ ಎಂದು ಸರ್ಕಾರ ಆದೇಶ ಹೊರಡಿಸಿದೆ. ಲಾಕ್ ಡೌನ್ ವೇಳೆ ಅಗತ್ಯ ವಸ್ತುಗಳ ಖರೀದಿಗೆ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12 ಗಂಟೆಯವರೆ ಅವಕಾಶ ನೀಡಲಾಗಿದೆ. ಒಡಿಶಾದಲ್ಲಿ ನಿನ್ನೆ ಒಂದೇ ದಿನ 8,015 ಜನರಲ್ಲಿ ಕೊರೊನಾ ಸೋಂಕು ದೃಢಪಟ್ಟಿದ್ದು, 14 ಸೋಂಕಿತರು ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.