ಬೆಂಗಳೂರು: ’ರಾಜ್ಯದಲ್ಲಿ ಕೊರೋನಾ ಚಿಕಿತ್ಸೆಗೆ ಅಗತ್ಯವಾದ ರೆಮ್ಡಿಸಿವಿಯರ್ ಚುಚ್ಚುಮದ್ದಿಗೆ ಅಭಾವ ಹೆಚ್ಚಾಗಿದೆ. ಆಸ್ಪತ್ರೆಗಳು ಇಂಜಕ್ಷನ್ ಪೂರೈಸಿ ಎಂದು ಗೋಗರೆದರೂ ಸರಬರಾಜು ಆಗುತ್ತಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಬಿಜೆಪಿ ನಾಯಕರು, ಸಂಸದರಿಗೆ ಬಾಕ್ಸ್ ಗಟ್ಟಲೇ ಔಷಧವನ್ನು ಕೊಟ್ಟು ಕಳುಹಿಸಲಾಗುತ್ತಿದೆ. ಇದು ಹೇಗೆ ಸಾಧ್ಯ? ಇದು ಸರಿಯೇ?’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಪ್ರಶ್ನಿಸಿದ್ದಾರೆ.
ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಲ್ಲಿ ರಾಜ್ಯದಲ್ಲಿ ಸಾಮಾಜಿಕ ಜಾಲತಾಣ ಯೋಧರ ನೇಮಕ ಅಭಿಯಾನ ಹಾಗೂ ಕೊರೋನಾ ಸೋಂಕಿತರ ನೆರವಿಗೆ ಆಂಬುಲೆನ್ಸ್ ಸೌಲಭ್ಯಕ್ಕೆ ಚಾಲನೆ ಕೊಟ್ಟ ನಂತರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡುತ್ತಿದ್ದರು
ನನಗೆ ಛತ್ತೀಸಘಡ, ರಾಜಸ್ಥಾನ ಮುಖ್ಯಮಂತ್ರಿಗಳು ಕರೆ ಮಾಡಿ, ನಾವು ನಿಮ್ಮ ರಾಜ್ಯದ ಡಿಎಚ್ಒಗಳಿಗೆ ಔಷಧಿಗಳನ್ನು ಪೂರೈಸಲು ಅನುಮತಿ ನೀಡಿದ್ದರೂ ರಾಜ್ಯ ಸರ್ಕಾರ ಅದನ್ನು ತಡೆ ಹಿಡಿದಿದೆ ಎಂದು ಹೇಳುತ್ತಿದ್ದಾರೆ. ನಾನು ಇದಕ್ಕೆ ಸಂಬಂಧಪಟ್ಟ ಅಧಿಕಾರಿಗಳು ಮತ್ತು ಆರೋಗ್ಯ ಕಾರ್ಯದರ್ಶಿಗಳಿಗೆ ಕರೆ ಮಾಡಿ ಈ ವಿಚಾರದ ಬಗ್ಗೆ ಕೇಳಿದೆ. ಅವರು ಏನನ್ನೂ ಹೇಳದೇ ಈ ಸಮಸ್ಯೆ ಬಗೆಹರಿಸುತ್ತೇವೆ ಎಂದರು. ಆದರೆ ಮತ್ತೊಂದು ಕಡೆ ಬಿಜೆಪಿ ನಾಯಕರುಗಳಿಗೆ ಈ ಔಷಧವನ್ನು ಡಬ್ಬಗಳಲ್ಲಿ ತುಂಬಿ, ತುಂಬಿ ಕಳುಹಿಸುತ್ತಿದ್ದಾರೆ ಎಂದು ಅವರು ಕಿಡಿಕಾರಿದ್ದಾರೆ.
ಬಿಜೆಪಿ ನಾಯಕರು, ಸಂಸದರು ಆಸ್ಪತ್ರೆಗಳ ಮಾಲೀಕರಾ? ಡ್ರಗ್ ಕಂಟ್ರೋಲರ್ ಗಳಾ? ಔಷಧಿ ಪಡೆಯಲು ಪರವಾನಿಗೆ ಪಡೆದಿದ್ದಾರಾ? ಆ ನಾಯಕರು ಔಷಧಿ ತೆಗೆದುಕೊಂಡು ಜನರಿಗೆ ನೀಡುತ್ತಿರಬಹುದು, ಅದರ ಬಗ್ಗೆ ನಾನು ತಕರಾರು ಮಾಡುವುದಿಲ್ಲ. ಆದರೆ ಯಾವ ಕಾನೂನಿನ ಅಡಿಯಲ್ಲಿ ಅವರಿಗೆ ದೊಡ್ಡ ಪ್ರಮಾಣದಲ್ಲಿ ಔಷಧವನ್ನು ಕೊಂಡೊಯ್ಯಲು ಅನುಮತಿ ನೀಡಲಾಯಿತು? ಯಡಿಯೂರಪ್ಪನವರೇ ನಿಮ್ಮ ಆಡಳಿತದಲ್ಲಿ ಏನೇನಾಗುತ್ತಿದೆ? ಪ್ರಧಾನಮಂತ್ರಿಗಳು, ಕೇಂದ್ರ ಆರೋಗ್ಯ ಸಚಿವರು ಈ ಬಗ್ಗೆ ಗಮನ ಹರಿಸಬೇಕಿದೆ ಎಂದು ಅವರು ಹೇಳಿದ್ದಾರೆ.