ಮಂಗಳೂರು : ನಗರದ ಬಜಪೆ ಹಾಗೂ ಮಂಗಳೂರು ಪೂರ್ವ ಠಾಣಾ ವ್ಯಾಪ್ತಿಯಲ್ಲಿ ಕಳೆದ ನವೆಂಬರ್ ತಿಂಗಳಿನಲ್ಲಿ ನಡೆದ ಕೊಲೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರು ಸಿಸಿಬಿ ಪೊಲೀಸರು 7 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಬಂಧಿತ ಆರೋಪಿಗಳನ್ನು ಬೋಳಾರ್‌ನ ಇಬ್ರಾಹಿಂ ಶಕೀರ್ (19), ಅತ್ತಾವರದ ಮೊಹಮ್ಮದ್ ನಿಹಾಲ್ (18), ಪಾಂಡೇಶ್ವರದ ಅಬ್ಬಾಸ್ ಅಫ್ವಾನ್ (23), ಪಾಂಡೇಶ್ವರದ ಮೊಹಮ್ಮದ್ ಅತಿಂ ಇಶಾಂ (19), ಫಳ್ನೀರ್‌ನ ಬಿಲಾಲ್ ಮೊಯಿದ್ದೀನ್ (49) ಹಾಗೂ ಮಾರಿಪಳ್ಳದ ಅಬ್ದುಲ್ ಜಬ್ಬರ್ (46) ಎಂದು ಗುರುತಿಸಲಾಗಿದೆ.
2020ರ ನವೆಂಬರ್ 15ರಂದು ಬಜ್ಪೆ ಪೊಲೀಸ್ ಠಾಣಾ ವ್ಯಾಪ್ತಿಯ ಕಂದಾವರ ಮಸೀದಿ ಬಳಿ ಅಬ್ದುಲ್ ಅಝೀಝ್(ವೆನ್ಝ್ ಅಬ್ದುಲ್ಲಾ) ಅವರ ಕೊಲೆಗೆ ಯತ್ನಿಸಿದ್ದರು. ಕೊಲೆ ಯತ್ನ ಪ್ರಕರಣದಲ್ಲಿ ಗಾಯಗೊಂಡಿದ್ದ ಅಬ್ದುಲ್ ಅಝೀಝ್ ಅವರು ಅದೇ ದಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದರು. ಈ ವೇಳೆ ಅವರ ಆರೈಕೆ ಮಾಡುತ್ತಿದ್ದ ಸಂಬಂಧಿಕರಾದ ಮಕ್ದೂಮ್ ಹಾಗೂ ನೌಶದ್ ಅವರ ಮೇಲೆ ಇಬ್ಬರು ಯುವಕರು ತಲವಾರಿನಿಂದ ಹಲ್ಲೆ ನಡೆಸಿದ್ದರು.
ಹಣಕಾಸಿನ ವಿಚಾರವೇ ಕೊಲೆ ಯತ್ನದ ಹಿಂದಿನ ಉದ್ದೇಶವಾಗಿದ್ದು, ವಿದೇಶದಲ್ಲಿ ತಲೆಮರೆಸಿಕೊಂಡಿರುವ ಆರೋಪಿಗಳಾದ ನಿಝಾಮುದ್ದೀನ್, ಸಫ್ವಾನ್, ಹುಸೈನ್ ಹಾಗೂ ಬಾಶಿತ್ ಎನ್ನುವವರ ಜೊತೆ ಸೇರಿಕೊಂಡು ಈ ಕೊಲೆ ಯತ್ನವನ್ನು ನಡೆಸಿದ್ದಾರೆ ಎನ್ನಲಾಗಿದೆ.
ಮಕ್ದೂಮ್ ಹಾಗೂ ನಿಝಾಮ್ ನಡುವೆ ಹಣಕಾಸಿನ ವ್ಯವಹಾರವು ಮಾತುಕತೆ ನಡೆಸಿ ಕೂಡಾ ಬಗೆಹರಿಯದೇ ಇದ್ದ ಕಾರಣ ನಿಝಾಮ್ ಆರೋಪಿ ಮಾರಿಪಳ್ಳದ ಜಬ್ಬರ್ ಎಂಬಾತನನ್ನು ಸಂಪರ್ಕಿಸಿದ್ದ. ಜಬ್ಬರ್ ರೌಡಿ ತಲ್ಹತ್‌ನ ಮೂಲಕ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ಬಾಶಿತ್, ಸಫ್ವಾನ್ ಹುಸೈನ್‌ರ ಸಹಚರರಿಂದ ಕೊಲೆ ಯತ್ನ ನಡೆಸಿದ್ದಾರೆ.
ಈ ಕೊಲೆ ಯತ್ನ ನಡೆಸಿದ ಆರೋಪಿಗಳ ಪತ್ತೆ ಬಾಕಿ ಇದೆ. ಬಾಶಿತ್ ತನ್ನ ಸಹಚರರಿಂದ ನಿಝಾಮ್‌ನ ಸಹೋದರ ಬಿಲಾಲ್ ಮೊಯ್ದಿನ್ ಹಾಗೂ ಸಂಬಂಧಿಕರಿಂದ ಇಬ್ರಾಹಿಂ ಶಾಕೀರ್, ಮೊಹಮ್ಮದ್ ನಿಹಾಲ್, ಅಬ್ಬಾಸ್ ಅಫ್ವಾನ್ ಹಾಗೂ ಮೊಹಮ್ಮದ್ ಅತಿಂ ಇಶಾಂ ಅವರನ್ನು ಸಂಪರ್ಕಿಸಿದ್ದು, ಇವರು ಮಕ್ದೂಮ್ ಹಾಗೂ ಅಬ್ದುಲ್ ಅಜೀಜ್‌ನ ಚಲನವಲನ ಮಾಹಿತಿಯನ್ನು ಸಂಗ್ರಹಿಸಿ ವಿದೇಶದಲ್ಲಿರುವ ಬಾಶಿತ್, ಸಫ್ವಾನ್ ಹಾಗೂ ನಿಝಾಮ್‌ಗೆ ಕಳುಹಿಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಬಜಪೆಯಲ್ಲಿ ಅಬ್ದುಲ್ ಅಜೀಜ್ ಅವರ ಕೊಲೆ ಯತ್ನ ನಡೆಸಿದ ಬಳಿಕ ಮಕ್ದೂಮ್‌ನ ಹಣಕಾಸಿನ ವ್ಯವಹಾರವನ್ನು ಇತ್ಯರ್ಥಗೊಳಿಸಲು ನಿರ್ಲಕ್ಷ್ಯ ವಹಿಸಿದ್ದರಿಂದ ಎರಡನೇ ಬಾರಿ ಕೊಲೆ ಯತ್ನ ನಡೆಸಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ.
ಆರೋಪಿಗಳ ಪೈಕಿ ಅಬ್ದುಲ್ ಜಬ್ಬರ್ ಎಂಬಾತನ ವಿರುದ್ದ ಈ ಹಿಂದೆ ಮಂಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಪ್ರಕರಣ, ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ 2017ರಲ್ಲಿ ನಡೆದ ಜೋಡಿ ಕೊಲೆ ಪ್ರಕರಣ ಹಾಗೂ 6 ಹಲ್ಲೆ ಪ್ರಕರಣಗಳು ಹೀಗೆ ಒಟ್ಟು 7 ಪ್ರಕರಣಗಳು ದಾಖಲಾಗಿವೆ.
ಸಫ್ವಾನ್ ಎಂಬಾತ ಈ ಹಿಂದೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ದಾಖಲಾದ ಸಫ್ವಾನ್ ಎಂಬಾತನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ. ಆದರೆ, ಈತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದ. ಈತನ ವಿರುದ್ದ ವಿವಿಧ ಪೊಲೀಸ್ ಠಾಣೆಗಳಲ್ಲಿ 26 ಪ್ರಕರಣಗಳು ದಾಖಲಾಗಿವೆ.
ಡಿಸಿಪಿ ಹರಿರಾಂ ಶಂಕರ್ ಐಪಿಎಸ್ ಹಾಗೂ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ವಿನಯ್ ಗಾಂವ್ಕರ್ ಅವರ ಮಾರ್ಗದರ್ಶನದಲ್ಲಿ ಮಂಗಳೂರು ಸಿಸಿಬಿ ಘಟಕದ ಇನ್ಸ್‌ಪೆಕ್ಟರ್ ಮಹೇಶ್ ಪ್ರಸಾದ್, ಪಿಎಸ್‌ಐ ರಾಜೇಂದ್ರ ಬಿ, ಪ್ರದೀಪ್ ಟಿ. ಆರ್ ಹಾಗೂ ಸಿಬಿಐ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಪ್ರಕರಣವನ್ನು ಬೇಧಿಸಿದ ತಂಡಕ್ಕೆ ನಗರದ ಪೊಲೀಸ್ ಆಯಕ್ತ ಎನ್ ಶಶಿಕುಮಾರ್ ಅವರು 10,000 ರೂ. ಬಹುಮಾನ ಘೋಷಿಸಿದ್ದಾರೆ.