ಮಂಗಳೂರು : ಕೋವಿಡ್ ಎರಡನೇ ಅಲೆಯನ್ನೆದುರಿಸಲು ಸರಕಾರ ನಿರ್ದೇಶಿಸಿರುವ ಮಾರ್ಗಸೂಚಿಗಳನ್ನೆಲ್ಲಾ ಗಾಳಿಗೆ ತೂರಿರುವ ಮಂಗಳೂರಿನ ದೇರಳಕಟ್ಟೆ ಸಮೀಪದ ಕಣಚೂರು ಮೆಡಿಕಲ್ ಕಾಲೇಜಿನಲ್ಲಿ ಯಾವುದೇ ಅಡೆ ತಡೆಯಿಲ್ಲದೆ ತರಗತಿಗಳು ಎಂದಿನಂತೆ ನಡೆಯುತ್ತಿದೆ ಎನ್ನಲಾಗಿದೆ. ಸರಕಾರದ ಆದೇಶಗಳಿಗೆ ಸೊಪ್ಪು ಹಾಕದ ಆಡಳಿತ ಮಂಡಳಿ, ಎಂದಿನಂತೆ ನಿಗದಿತ ತರಗತಿಗಳನ್ನು ನಡೆಸುತ್ತಿದೆ.
ತರಗತಿ ನಡೆಸದಂತೆ ವಿವಿ ಕಡೆಯಿಂದ ಆದೇಶವಿದ್ರೂ ಕಾಲೇಜು ಆಡಳಿತ ಮಂಡಳಿ ವಿದ್ಯಾರ್ಥಿಗಳಿಗೆ ಕರೆ ಮಾಡಿ ತರಗತಿಗೆ ಹಾಜರಾಗುವಂತೆ ತಿಳಿಸಿದ್ದರು ಎನ್ನಲಾಗಿದೆ. ಇದಕ್ಕೆ ಸ್ಪಂದಿಸಿರುವ ವಿದ್ಯಾರ್ಥಿಗಳು ತರಗತಿಗೆ ಹಾಜರಾಗಿದ್ದಾರೆ. ಹೆಚ್ಚಿನವರು ಕೇರಳ ಮತ್ತು ಕರ್ನಾಟಕದ ವಿದ್ಯಾರ್ಥಿಗಳಾಗಿದ್ದಾರೆ. ಪ್ರಥಮ ಮತ್ತು ದ್ವಿತೀಯ ವರ್ಷದ ವಿದ್ಯಾರ್ಥಿಗಳನ್ನು ತರಗತಿಗೆ ಕರೆಯಲಾಗಿದ್ದು, ಪ್ರತಿ ತರಗತಿಗಳಲ್ಲಿ ಸುಮಾರು 100 ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದಾರೆ ಎನ್ನಲಾಗಿದೆ.
‘ಪ್ರಸ್ತುತ’ ಈ ಕುರಿತು ಪ್ರತಿಕ್ರಿಯೆ ಪಡೆಯಲು ಸಂಸ್ಥೆಯ ಆಡಳಿತ ಮಂಡಳಿಯ ನಿರ್ದೇಶಕ ಅಸ್ಗರ್ ಅಲಿ ಹಾಗೂ ಕಾಲೇಜಿನ ಡೀನ್ ಸರೀತಾ ಅವರನ್ನು ಸಂಪರ್ಕಿಸುವ ಪ್ರಯತ್ನ ನಡೆಸಲಾಯಿತು. ಆದರೆ ಇಬ್ಬರೂ ಪ್ರತಿಕ್ರಿಯೆಗೆ ಲಭ್ಯರಾಗಿಲ್ಲ.