ಉತ್ತರ ಪ್ರದೇಶದ ಪ್ರಯಾಜ್ ರಾಜ್, ಲಕ್ನೊ, ವಾರಾಣಸಿ, ಕಾನ್ಪುರ ನಗರ ಮತ್ತು ಗೋರಖ್ ಪುರ ನಗರಗಳಲ್ಲಿ ಕರ್ಫ್ಯೂ ಹೇರುವಂತೆ ಸ್ವತಃ ಅಲಹಾಬಾದ್ ಹೈಕೋರ್ಟ್ ಆದೇಶ ನೀಡಿದೆ. ಹೈಕೋರ್ಟ್ ಆದೇಶದ ಬೆನ್ನಲ್ಲೇ ಸರ್ಕಾರ ಏಪ್ರಿಲ್ 26ರವರೆಗೆ ಕರ್ಫ್ಯೂ ಜಾರಿಗೊಳಿಸಿದೆ.
ಹೈಕೋರ್ಟ್ ಆದೇಶ ಯೋಗಿ ಸರ್ಕಾರಕ್ಕೆ ಮುಜುಗರ ತಂದಿದೆ. ಕೋವಿಡ್ ನಿಯಂತ್ರಿಸುವಲ್ಲಿ ಸರ್ಕಾರ ವಿಫಲವಾದ ಹಿನ್ನೆಲೆಯಲ್ಲಿ ಹೈಕೋರ್ಟ್ ಮಧ್ಯಪ್ರವೇಶಿಸಿ ಕರ್ಫ್ಯೂ ವಿಧಿಸಿದೆ. ಇದು ಸರ್ಕಾರದ ಆಡಳಿತ ವೈಫಲ್ಯಕ್ಕೆ ಹಿಡಿದ ಕೈಗನ್ನಡಿ ಎಂದು ಕಾಂಗ್ರೆಸ್ ಟೀಕಿಸಿದೆ.
ಉತ್ತರ ಪ್ರದೇಶದಲ್ಲಿ ಕೋವಿಡ್ ಪರಿಸ್ಥಿತಿಯ ಬಗ್ಗೆ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಅಲಹಾಬಾದ್ ಹೈಕೋರ್ಟ್ ಸೋಮವಾರ ವಿಚಾರಣೆ ನಡೆಸಿತು. ಈ ವೇಳೆ ಪೀಠ, ಅಗತ್ಯ ಸೇವೆಗಳನ್ನು ಹೊರತುಪಡಿಸಿ ಉಳಿದೆಲ್ಲವುಗಳನ್ನು ಒಂದು ವಾರದ ಮಟ್ಟಿಗೆ ಬಂದ್ ಮಾಡುವಂತೆ ಆದೇಶಿಸಿ ತೀರ್ಪು ನೀಡಿತು.
ಹಣಕಾಸು ಸಂಸ್ಥೆಗಳು ಮತ್ತು ಹಣಕಾಸು ಇಲಾಖೆಗಳು, ವೈದ್ಯಕೀಯ ಮತ್ತು ಆರೋಗ್ಯ ಸೇವೆಗಳು, ಕೈಗಾರಿಕಾ ಮತ್ತು ವೈಜ್ಞಾನಿಕ ಸಂಸ್ಥೆಗಳು, ಪುರಸಭೆಯ ಕಾರ್ಯಗಳು ಮತ್ತು ಸಾರ್ವಜನಿಕ ಸಾರಿಗೆ ಸೇರಿದಂತೆ ಅಗತ್ಯ ಸೇವೆಗಳು ಹೊರತುಪಡಿಸಿ ಉಳಿದ ಎಲ್ಲಾ ಸೇವೆಗಳು ಏಪ್ರಿಲ್ 26 ರವರೆಗೆ ಮುಚ್ಚಬೇಕು ಎಂದು ನ್ಯಾಯಾಲಯ ಹೇಳಿದೆ.